ಗುರುವಾರ , ಮಾರ್ಚ್ 4, 2021
18 °C

ಐಪಿಎಲ್‌ನಲ್ಲಿನ ಉತ್ತಮ ಫಾರ್ಮ್‌ ಮುಂದುವರಿಸಬೇಕಿದೆ: ಪಂತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಐಪಿಎಲ್‌ನಲ್ಲಿನ ಉತ್ತಮ ಫಾರ್ಮ್‌ ಮುಂದುವರಿಸಬೇಕಿದೆ: ಪಂತ್‌

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದರ ಬಗ್ಗೆ ನಾನು ಯೋಚಿಸುತ್ತಿಲ್ಲ. ಸದ್ಯ, ಐಪಿಎಲ್‌ನಲ್ಲಿ ತೋರುತ್ತಿರುವ ಉತ್ತಮ ಸಾಮರ್ಥ್ಯವನ್ನು ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಹೇಳಿದರು.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ್ದ ರಿಷಭ್‌  29 ಎಸೆತಗಳಲ್ಲಿ 69 ರನ್‌ ಗಳಿಸಿದ್ದರು. ಮಳೆ ಸುರಿದ ಪರಿಣಾಮ ಒಂದು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ತಂಡವು 17.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 196 ರನ್‌ ಗಳಿಸಿತ್ತು. ಮತ್ತೆ ಮಳೆ ಸುರಿದಿದ್ದರಿಂದ ಆಟ ಸ್ವಲ್ಪ ಹೊತ್ತು ನಿಂತಿತ್ತು.

ನಂತರ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ 12 ಓವರ್‌ಗಳಲ್ಲಿ 151 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ್‌ ತಂಡಕ್ಕೆ 146 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಡೆಲ್ಲಿ ತಂಡವು 4 ರನ್‌ಗಳಿಂದ ಜಯಿಸಿತು.

‘ಈಗ ಐಪಿಎಲ್‌ನಲ್ಲಿ ಆಡುತ್ತಿದ್ದೇನೆ. ಹಾಗಾಗಿ, ಈ ಟೂರ್ನಿಯ ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗಾಗಿ ಉತ್ತಮ ಬ್ಯಾಟಿಂಗ್‌ ಮಾಡಬೇಕು ಎಂಬುದಷ್ಟೇ ನನ್ನ ಗುರಿ’ ಎಂದು ಪಂತ್‌ ಹೇಳಿದರು.

‘ನಮ್ಮ ತಂಡದಲ್ಲಿ ಎಲ್ಲವೂ ಸರಿಯಿದೆ. ಆದರೆ, ಮುಂಚೆ ಆಡಿದ ಪಂದ್ಯಗಳಲ್ಲಿ ನಾವೇ ಮಾಡಿಕೊಂಡ ತಪ್ಪಿನಿಂದ ಸೋಲು ಅನುಭವಿಸಬೇಕಾಯಿತು. ಲೋಪಗಳನ್ನು ಸುಧಾರಿಸಿಕೊಂಡಿದ್ದರಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ರೋಚಕ ಪಂದ್ಯದಲ್ಲಿ ಜಯ ದಾಖಲಿಸಿದೆವು’ ಎಂದು ಹೇಳಿದರು.

‘ತಂಡದ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಹಾಗೂ ಶ್ರೇಯಸ್‌ ಅಯ್ಯರ್‌ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರಂಭದಲ್ಲಿ ಉತ್ತಮ ಬುನಾದಿ ಹಾಕಿಕೊಡುವುದು ಅಗತ್ಯ. ಅವರಿಬ್ಬರೂ ಅದರಲ್ಲಿ ಯಶಸ್ವಿಯಾಗಿದ್ದಾರೆ. ಪೃಥ್ವಿ ಶಾ ಅವರಿಗೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಆದರೆ, ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ’ ಎಂದರು.

’ಪ್ಲೇ ಆಫ್‌ ಹಾದಿ ಕಠಿಣ’: ‘ಡೆಲ್ಲಿ ವಿರುದ್ಧ ಸೋಲು ಕಂಡಿದ್ದರಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಪ್ಲೇ ಆಫ್‌ ತಲುಪುವ ಹಾದಿ ಇನ್ನಷ್ಟು ಕಠಿಣವಾಗಿದೆ’ ಎಂದು ಆ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡಿಆರ್ಚಿ ಶಾರ್ಟ್‌ ಹೇಳಿದರು.

‘ಕೇವಲ 12 ಓವರ್‌ಗಳಲ್ಲಿ 150 ರನ್‌ಗಳ ಗುರಿ ಬೆನ್ನತ್ತುವುದು ಸುಲಭವಾಗಿರಲಿಲ್ಲ. ಈಗ ನಮ್ಮ ಮೇಲೆ ಹೆಚ್ಚಿನ ಒತ್ತಡ ಇದೆ. ಮುಂದಿನ ಎಲ್ಲ ಪಂದ್ಯಗಳಲ್ಲೂ ಜಯಿಸುವುದು ಅನಿವಾರ್ಯವಾಗಿದೆ. ಸರಿಯಾದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಎದುರಾಳಿಗಳ ಸವಾಲು ಮೀರುವುದು ಅಸಾಧ್ಯವಾಗಬಹುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.