ಬಸ್‌ಗಳ ಸೀಟುಗಳು ಶೇ 60ರಷ್ಟು ಭರ್ತಿ

7

ಬಸ್‌ಗಳ ಸೀಟುಗಳು ಶೇ 60ರಷ್ಟು ಭರ್ತಿ

Published:
Updated:
ಬಸ್‌ಗಳ ಸೀಟುಗಳು ಶೇ 60ರಷ್ಟು ಭರ್ತಿ

ಬೆಂಗಳೂರು: ಮತದಾನಕ್ಕೆ 10 ದಿನಗಳು ಬಾಕಿ ಇರುವಾಗಲೇ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಶೇ 60ರಷ್ಟು ಸೀಟುಗಳು ಬುಕ್ಕಿಂಗ್ ಆಗಿವೆ.

ಹೊರ ಜಿಲ್ಲೆಗಳ ಲಕ್ಷಾಂತರ ಮಂದಿ ಉದ್ಯೋಗ ಅರಸಿ ರಾಜಧಾನಿಗೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಸೇರಿದಂತೆ ಹಲವೆಡೆ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಕಂಪನಿಯಲ್ಲೂ ದುಡಿಯುತ್ತಿದ್ದಾರೆ. ಅವರೆಲ್ಲರ ಹೆಸರುಗಳು ಅವರವರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲೇ ಇವೆ. ಅವರ ಪೈಕಿ ಹಲವರು, ಮತದಾನ ಮಾಡಲೆಂದು ಮೇ 12ರಂದು ಊರಿಗೆ ಹೋಗಲು ಈಗಾಗಲೇ ಟಿಕೆಟ್‌ ಕಾಯ್ದಿರಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು 30 ದಿನಗಳು ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ಏಪ್ರಿಲ್‌ ಕೊನೆ ವಾರದಿಂದಲೇ ಟಿಕೆಟ್‌ಗಳಿಗೆ ಬೇಡಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶೇ 100ರಷ್ಟು ಬಸ್‌ಗಳ ಟಿಕೆಟ್‌ಗಳು ಬುಕ್ಕಿಂಗ್‌ ಆಗುವ ಲಕ್ಷಣಗಳು ಇವೆ. ಊರಿಗೆ ಹೋಗಬೇಕೆಂದು ಅಂದುಕೊಂಡವರಿಗೆ ಸಾರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮೇ 10 ಹಾಗೂ 11ರಂದು ಹೊರಡುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಕಂಪನಿ ಬಸ್‌ಗಳು ಮತ್ತು ರೈಲುಗಳ ಬಹುತೇಕ ಸೀಟುಗಳನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಕಾಯ್ದಿರಿಸುತ್ತಿದ್ದಾರೆ.

‘ನಿತ್ಯವೂ ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ, ಕೊಪ್ಪಳ, ಯಾದಗಿರಿ, ಬೀದರ್, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಸ್‌ಗಳು ಹೋಗುತ್ತವೆ. ಮತದಾನಕ್ಕೂ ಎರಡು ದಿನ ಮುನ್ನ ಹೊರಡಲಿರುವ ಬಸ್‌ಗಳ ಶೇ 60 ರಷ್ಟು ಸೀಟುಗಳು ಬುಕ್ಕಿಂಗ್‌ ಆಗಿವೆ. ವಿಶೇಷ ತಿಂಗಳಲ್ಲೂ ಈ ರೀತಿ ಬುಕ್ಕಿಂಗ್‌ ಆಗುವುದಿಲ್ಲ. ಚುನಾವಣೆ ಇದ್ದಿದ್ದಕ್ಕೆ ಇಷ್ಟು ಬುಕ್ಕಿಂಗ್‌ಗಳು ಬಂದಿದೆ’ ಎಂದು ಖಾಸಗಿ ಬಸ್‌ ಕಂಪನಿಯೊಂದರ ಪ್ರತಿನಿಧಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು, ‘ವಿಶೇಷ ದಿನಗಳಿಗಿಂತಲೂ ಮತದಾನದ ಮುನ್ನಾದಿನ ಮುಂಗಡ ಬುಕ್ಕಿಂಗ್‌ ಹೆಚ್ಚಾಗುತ್ತಿದೆ. ಶೇ 100ರಷ್ಟು ಸೀಟುಗಳು ಭರ್ತಿ ಆಗುತ್ತಿದ್ದಂತೆ ವಿಶೇಷ ಬಸ್‌ಗಳನ್ನು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.

ಮತದಾರರ ಕರೆದೊಯ್ಯಲು ವಾಹನಗಳ ವ್ಯವಸ್ಥೆ; ನಗರದಲ್ಲಿರುವ ವಲಸಿಗ ಮತದಾರರನ್ನು ಮೂಲ ಊರುಗಳಿಗೆ ಕರೆದೊಯ್ಯಲು ಆಯಾ ಕ್ಷೇತ್ರಗಳ ಕೆಲ ಅಭ್ಯರ್ಥಿಗಳೇ ವಾಹನಗಳ ವ್ಯವಸ್ಥೆ ಮಾಡುತ್ತಿದ್ದಾರೆ.

ಮೇ 11ರ ಸಂಜೆಯಿಂದಲೇ ಖಾಸಗಿ ವಾಹನಗಳಲ್ಲಿ ವಲಸಿಗ ಮತದಾರರು ತಮ್ಮೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಅವರೆಲ್ಲ ತಡರಾತ್ರಿ ಅಥವಾ ಮರುದಿನ ಮೇ 12ರಂದು ಊರು ತಲುಪಲಿದ್ದಾರೆ. ಮತದಾರರ ಪ್ರಯಾಣಕ್ಕಾಗಿ ಕ್ರೂಸರ್‌ ವಾಹನಗಳನ್ನೇ ಹೆಚ್ಚಾಗಿ ಕಾಯ್ದಿರಿಸಲಾಗಿದೆ.

ಮೂರು ದಿನ ರಜೆ; ಪ್ರವಾಸಕ್ಕೆ ಸಿದ್ಧತೆ

ಮತದಾನವಿರುವ ಮೇ 12ರ ಜತೆಗೆ, 11 ಹಾಗೂ 13ರಂದು ನಗರದ ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ರಜೆ ಸಿಗುತ್ತಿದೆ. ಅಂಥ ಉದ್ಯೋಗಿಗಳ ಪೈಕಿ ಹಲವರು, ಪ್ರವಾಸಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ವಾಹನಗಳನ್ನು ಕಾಯ್ದಿರಿಸಿದ್ದಾರೆ.

‘ಸಾಮಾನ್ಯ ದಿನಗಳಿಗಿಂತ ಮೇ 8ರಿಂದ 13ರವರೆಗೆ ನಿರಂತರವಾಗಿ ಬುಕ್ಕಿಂಗ್‌ಗಳು ಬಂದಿವೆ’ ಎಂದು ಟೂರ್ಸ್‌ ಹಾಗೂ ಟ್ರಾವೆಲ್ಸ್‌ ಏಜೆನ್ಸಿಯೊಂದರ ಪ್ರತಿನಿಧಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry