ಸೂಚ್ಯಂಕ ಅಲ್ಪ ಇಳಿಕೆ

7

ಸೂಚ್ಯಂಕ ಅಲ್ಪ ಇಳಿಕೆ

Published:
Updated:

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ನಾಲ್ಕು ದಿನಗಳ ಏರುಮುಖ ವಹಿವಾಟಿನಿಂದ ಕೆಳಗೆ ಇಳಿದಿದೆ.

ಗುರುವಾರ 73 ಅಂಶ ಇಳಿಕೆ ಕಂಡು 35,103 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ವಿದೇಶಿ ಬಂಡವಾಳ ಹೊರಹರಿವು ನಿರಂತರವಾಗಿದ್ದು, ದೇಶಿ ಮಟ್ಟದಲ್ಲಿ ಕೆಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶವು ಮಾರುಕಟ್ಟೆಯ ನಿರೀಕ್ಷೆಯಂತೆ ಇಲ್ಲದೇ ಇರುವುದು ಇಳಿಮುಖ ವಹಿವಾಟು ನಡೆಯುವಂತೆ ಮಾಡಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

‘ವಾಣಿಜ್ಯ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ಮಾತುಕತೆ ನಡೆಸುತ್ತಿವೆ. ಒಂದೊಮ್ಮೆ ಮಾತುಕತೆ ವಿಫಲವಾದರೆ ಮತ್ತೆ ವಾಣಿಜ್ಯ ಸಮರ ಆರಂಭವಾಗುವ ಸಾಧ್ಯತೆ ಇದೆ. ಇದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 39 ಅಂಶ ಇಳಿಕೆ ಕಂಡು 10,679 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಿಯಲ್ ಎಸ್ಟೇಟ್‌, ಐ.ಟಿ, ತಂತ್ರಜ್ಞಾನ, ಮೂಲಸೌಕರ್ಯ, ಎಫ್‌ಎಂಸಿಜಿ, ಗ್ರಾಹಕ ಬಳಕೆ ವಸ್ತುಗಳು, ವಾಹನ, ತೈಲ ಮತ್ತು ಅನಿಲ ಕಂಪನಿ ಷೇರುಗಳು ನಷ್ಟ ಅನುಭವಿಸಿದವು.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ವಿಪ್ರೊ ಸಂಸ್ಥೆ ಶೇ 1.94 ರಷ್ಟು ಗರಿಷ್ಠ ನಷ್ಟ ಅನುಭವಿಸಿದೆ. ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಶೇ 1.90ರಷ್ಟು ನಷ್ಟ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry