ಅಮಾನತುಗೊಂಡಿದ್ದ ತಹಶೀಲ್ದಾರ್‌ ದುರ್ಮರಣ

7
ಲಂಚ ಕೇಳಿ ಎಸಿಬಿಗೆ ಸಿಕ್ಕಿಬಿದ್ದಿದ್ದ ಅಧಿಕಾರಿ

ಅಮಾನತುಗೊಂಡಿದ್ದ ತಹಶೀಲ್ದಾರ್‌ ದುರ್ಮರಣ

Published:
Updated:
ಅಮಾನತುಗೊಂಡಿದ್ದ ತಹಶೀಲ್ದಾರ್‌ ದುರ್ಮರಣ

ಬೆಂಗಳೂರು: ಬಿಇಎಲ್‌ ವೃತ್ತ ಬಳಿಯ ದೇವಿನಗರ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರು ಗುದ್ದಿದ್ದರಿಂದ, ಎಲ್.ಸತ್ಯಪ್ರಕಾಶ್ (43) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

ಮತ್ತೀಕೆರೆಯಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಈ ಹಿಂದೆ ಬಂಗಾರಪೇಟೆ ತಹಶೀಲ್ದಾರ್‌ ಆಗಿ ಕೆಲಸ ಮಾಡಿದ್ದರು. ಖಾತಾ ಬದಲಾವಣೆಗೆ ಲಂಚ ‍ಕೇಳಿದ್ದ ಆರೋಪದಡಿ 2017ರ ನವೆಂಬರ್‌ನಲ್ಲಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದರು. ನಂತರ, ಸೇವೆಯಿಂದಲೂ ಅಮಾನತು ಮಾಡಲಾಗಿತ್ತು.

ಕೆಲಸ ನಿಮಿತ್ತ ತಮ್ಮ ಖಾಸಗಿ ಕಾರಿನಲ್ಲಿ (ಕೆಎ 05 ಎಂಎಲ್‌ 6762) ಬುಧವಾರ ಕೋಲಾರಕ್ಕೆ ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್‌ ಬರುತ್ತಿದ್ದ ವೇಳೆ ಲಾರಿಗೆ ಕಾರು ಗುದ್ದಿತು. ಅದರಿಂದಾಗಿ ಕಾರಿನಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಹೆಬ್ಬಾಳ ಸಂಚಾರ ಪೊಲೀಸರು ತಿಳಿಸಿದರು.

‘ಡಿಕ್ಕಿಯ ರಭಸ ಹೆಚ್ಚಿದ್ದರಿಂದ, ಕಾರು ಸಂಪೂರ್ಣ ಜಖಂಗೊಂಡಿದೆ. ಲಾರಿಯ ಹಿಂದಿನ ಅರ್ಧ ಭಾಗವೂ ನಜ್ಜುಗುಜ್ಜಾಗಿದೆ. ಅಪಘಾತ ಕಂಡಿದ್ದ ಪ್ರತ್ಯಕ್ಷದರ್ಶಿಗಳು ನಸುಕಿನ 4 ಗಂಟೆ ಸುಮಾರಿಗೆ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಹೋಗಿ ಶವವನ್ನು ಸ್ಥಳಾಂತರಿಸಿದೆವು’ ಎಂದರು.

‘ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ. ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

‘ಕೆಲ ದಿನಗಳವರೆಗೆ ಜೈಲಿನಲ್ಲಿದ್ದ ಸತ್ಯಪ್ರಕಾಶ್, ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದರು. ಅವರು ಬುಧವಾರ ಕೋಲಾರಕ್ಕೆ ಏಕೆ ಹೋಗಿದ್ದರು ಎಂಬುದು ಗೊತ್ತಾಗಿಲ್ಲ. ಕುಟುಂಬದವರು ದುಃಖದಲ್ಲಿರುವುದರಿಂದ ಆ ಬಗ್ಗೆ ನಾವೂ ಕೇಳಿಲ್ಲ’ ಎಂದರು. 

ದಟ್ಟಣೆ: ರಸ್ತೆ ನಡುವೆಯೇ ಅಪಘಾತ ಸಂಭವಿಸಿದ್ದರಿಂದ ಕೋಲಾರ ರಸ್ತೆಯಲ್ಲಿ ನಸುಕಿನಲ್ಲಿ ವಾಹನಗಳ ದಟ್ಟಣೆ ಉಂಟಾಯಿತು.

ತರಕಾರಿ, ಹೂವು–ಹಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಕೋಲಾರದಿಂದ ನಗರಕ್ಕೆ ಸಾಗಿಸುತ್ತಿದ್ದ ವಾಹನಗಳು ದಟ್ಟಣೆಯಲ್ಲಿ ಸಿಲುಕಿದ್ದವು. ಸ್ಥಳಕ್ಕೆ ಬಂದಿದ್ದ ಹೆಬ್ಬಾಳ ಸಂಚಾರ ಪೊಲೀಸರು, ಕಾರು ಹಾಗೂ ಲಾರಿಯನ್ನು ರಸ್ತೆಯಿಂದ ತೆರವು ಮಾಡಿದರು. ಬಳಿಕವೇ ಸಂಚಾರ ಸ್ಥಿತಿ ಯಥಾಸ್ಥಿತಿಗೆ ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry