ಮಂಗಳವಾರ, ಮಾರ್ಚ್ 2, 2021
31 °C
ಪ್ರೀತಿಸಿ ವಿವಾಹವಾಗಿದ್ದ ದಂಪತಿ * ಜೆ.ಸಿ.ನಗರ ಪೊಲೀಸರಿಂದ ಪತಿ ಸೆರೆ

ಮದುವೆಯಾದ ತಿಂಗಳಿಗೆ ಪತ್ನಿ ಕೊಂದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆಯಾದ ತಿಂಗಳಿಗೆ ಪತ್ನಿ ಕೊಂದ!

ಬೆಂಗಳೂರು: ಜೆ.ಸಿ.ನಗರ ಬಳಿಯ ಮಾರಪ್ಪ ಗಾರ್ಡನ್‌ನಲ್ಲಿ ಸಬೀನಾ ಬಾನು (26) ಎಂಬುವರನ್ನು ಕತ್ತು ಕೊಯ್ದು ಬುಧವಾರ ಕೊಲೆ ಮಾಡಲಾಗಿದೆ. ಈ ಸಂಬಂಧ ಅವರ ಪತಿ ಸಯ್ಯದ್ ತಬ್ರೇಜ್‌ನನ್ನು (28) ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿಯ ನಿವಾಸಿಯಾಗಿದ್ದ ಸಬೀನಾ, ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರಿಗೆ, ಎಲೆಕ್ಟ್ರಿಷಿಯನ್ ಆಗಿದ್ದ ತಬ್ರೇಜ್‌ನ ಪರಿಚಯವಾಗಿತ್ತು. ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡು ಮಾತನಾಡಲಾರಂಭಿಸಿದ್ದ ಅವರಿಬ್ಬರು, ಕ್ರಮೇಣ ಪ್ರೀತಿಸಲು ಶುರು ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಅವರಿಬ್ಬರ ಪ್ರೀತಿಯ ವಿಷಯ ಪೋಷಕರಿಗೆ ಗೊತ್ತಾಗಿತ್ತು. ಎಚ್ಚರಿಕೆ ಸಹ ನೀಡಿದ್ದರು. ಅಷ್ಟಾದರೂ ಪೋಷಕರ ವಿರೋಧ ಕಟ್ಟಿಕೊಂಡು, ತಿಂಗಳ ಹಿಂದಷ್ಟೇ ಸಬೀನಾ ಹಾಗೂ ತಬ್ರೇಜ್‌ ಮದುವೆ ಆಗಿದ್ದರು. ನಂತರ, ಮಾರಪ್ಪ ಗಾರ್ಡನ್‌ನ 4ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.

‘ಮದುವೆಯಾದ ವಾರಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ಅವರಿಬ್ಬರು ಜಗಳ ಮಾಡಲಾರಂಭಿಸಿದ್ದರು. ಬುಧವಾರ ಸಂಜೆಯೂ ದಂಪತಿ ನಡುವೆ ಜಗಳ ಶುರುವಾಗಿತ್ತು. ಅವರಿಬ್ಬರು ಕೂಗಾಡುತ್ತಿದ್ದ ಶಬ್ದ ಅಕ್ಕ–ಪಕ್ಕದ ಮನೆಯವರಿಗೂ ಕೇಳಿಸುತ್ತಿತ್ತು. ದಂಪತಿ ನಿತ್ಯವೂ ಜಗಳ ಮಾಡುತ್ತಿದ್ದರಿಂದ ಆ ಬಗ್ಗೆ ನಿವಾಸಿಗಳು ತಲೆಕೆಡಿಸಿಕೊಂಡಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಜಗಳವು ವಿಕೋಪಕ್ಕೆ ಹೋಗುತ್ತಿದ್ದಂತೆ ತಬ್ರೇಜ್‌, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದ. ಹೊಟ್ಟೆಗೆ ಎರಡು ಬಾರಿ ಚಾಕುವಿನಿಂದ ಇರಿದಿದ್ದ. ಸಹಾಯಕ್ಕಾಗಿ ಕೂಗಾಡಲಾರಂಭಿಸಿದ್ದ ಪತ್ನಿಯ ಬಾಯಿ ಮುಚ್ಚಿದ್ದ ಆರೋಪಿ, ಬಟ್ಟೆಯಿಂದ ಕತ್ತು ಬಿಗಿದಿದ್ದ. ಉಸಿರುಗಟ್ಟಿ ಪತ್ನಿ ಮೃತಪಟ್ಟಿದ್ದನ್ನು ಖಾತ್ರಿಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದ’ ಎಂದು ಹೇಳಿದರು.

‘ಮರುದಿನ ಸಬೀನಾ, ಮನೆಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು, ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪೋಷಕರು ಮನೆಗೆ ಬಂದು ನೋಡಿದಾಗ, ಸಬೀನಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಂತರವೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದರು.

ಅನೈತಿಕ ಸಂಬಂಧ ಹೊಂದಿದ್ದಕ್ಕೆ ಕೃತ್ಯ: ‘ಘಟನೆ ಬಗ್ಗೆ ಪೋಷಕರು ನೀಡಿದ ದೂರಿನನ್ವಯ ತಬ್ರೇಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೆವು. ತಲೆಮರೆಸಿಕೊಂಡಿದ್ದ ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದೆವು. ಗುರುವಾರ ರಾತ್ರಿಯೇ ಆತನನ್ನು ಬಂಧಿಸಿದೆವು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಬೇರೆ ಯುವಕನ ಜತೆ ಪತ್ನಿಯು ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಆ ಬಗ್ಗೆ ವಿಚಾರಿಸಿದರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಅದೇ ವಿಷಯಕ್ಕೆ ಶುರುವಾದ ಜಗಳದ ವೇಳೆ ಈ ಕೃತ್ಯ ಎಸಗಿದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.