ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳ್ಳಂದೂರು ಕೆರೆಯಲ್ಲಿರುವುದು ಕಾಂಗ್ರೆಸ್‌ ಕಸ’

ಅರವಿಂದ ಲಿಂಬಾವಳಿ ಸಂದರ್ಶನ
Last Updated 3 ಮೇ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿಪಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿ ಹಲವು ತಿಂಗಳು ಕಳೆದವು. ಆದರೆ, ಜಲಮೂಲದ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ಈ ಕೆರೆಯಲ್ಲಿರುವುದು ಕಾಂಗ್ರೆಸ್‌ ಕಸ’ ಎಂದು ಶಾಸಕ ಅರವಿಂದ ಲಿಂಬಾವಳಿ ಕಿಡಿಕಾರಿದರು.

‘ಎರಡು ಯಂತ್ರಗಳನ್ನು ಬಳಸಿಕೊಂಡು ಕಳೆ ತೆಗೆಯಲಾಗುತ್ತಿದೆ. ಒಂದು ತಿಂಗಳು ಕಳೆಯುವಷ್ಟರಲ್ಲಿ ಕಳೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಅವ್ಯವಹಾರ ನಡೆಯುತ್ತಿದೆಯೋ ಎಂಬ ಅನುಮಾನ ಮಾಡುತ್ತಿದೆ. 10 ಯಂತ್ರಗಳನ್ನು ಬಳಸಿಕೊಂಡು ಸಮರೋಪಾದಿಯಲ್ಲಿ ಕಳೆ ತೆಗೆಯುವ ಕೆಲಸ ಮಾಡಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು. ಬೆಳ್ಳಂದೂರು ಕೆರೆ ಬೆಂಕಿ, ಮೂಲಸೌಕರ್ಯದ ಸಮಸ್ಯೆ, ನೀರಿನ ಅಭಾವ, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ‘ಪ್ರಜಾವಾಣಿ’ ಜತೆಗೆ ಅನಿಸಿಕೆ ಹಂಚಿಕೊಂಡರು.

*→ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹800 ಕೋಟಿ ಅನುದಾನ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌ ಹೇಳಿದ್ದರು. ಕೇಂದ್ರ ಸರ್ಕಾರ ನಯಾಪೈಸೆ ಅನುದಾನ ಕೊಟ್ಟಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆರೋಪಿಸಿದ್ದರು. ಹಾಗಿದ್ದರೆ
ವಾಸ್ತವಾಂಶ ಏನು?

ಜಲಮೂಲ ಅಭಿವೃದ್ಧಿಗೆ ₹800 ಕೋಟಿ ಕೊಡುವುದಾಗಿ ಜಾವಡೇಕರ್‌ ಹೇಳಿರುವುದು ನಿಜ. ಅಮೃ‌ತ್‌ ಯೋಜನೆ ಮೂಲಕ ಹಣ ಕೊಡುತ್ತೇವೆ ಎಂದಿದ್ದರು. ಈ ಸಂಬಂಧ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕಿತ್ತು. ಅದರ ಬದಲು ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತು. ಪರಿಸರ ಸಚಿವಾಲಯದ ಬಳಿ ದುಡ್ಡು ಎಲ್ಲಿದೆ.

*→ಬೆಳ್ಳಂದೂರು ಕೆರೆಯ ಹಾದಿಯಲ್ಲೇ ವರ್ತೂರು ಕೆರೆ ಸಾಗುತ್ತಿದೆಯಲ್ಲ?

ಕೋಲಾರ ಜಿಲ್ಲೆಗೆ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆಗೆ ವರ್ತೂರು ಕೆರೆಯೊಳಗೆ ಪೈಪ್‌ಲೈನ್‌ ಹಾಕುತ್ತಿದ್ದಾರೆ. ಅದರ ಬದಲು ಕೆರೆಯ ಅಂಚಿನಲ್ಲಿ ಪಿಲ್ಲರ್‌ ಹಾಕಿ ಕಾಮಗಾರಿ ನಡೆಸಬೇಕಿತ್ತು. ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಈ ರೀತಿ ಕೆಲಸ ಮಾಡಲಾಗುತ್ತಿದೆ. ಜಲಮೂಲದ 75 ಮೀಟರ್‌ ಮೀಸಲು ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ ಎಂದು ಎನ್‌ಜಿಟಿ ತಾಕೀತು ಮಾಡಿದೆ. ಆದರೂ, ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ 10 ಸಲ ದೂರು ನೀಡಿದ್ದೇನೆ. ಭಂಡ ಸರ್ಕಾರ ಸ್ಪಂದಿಸಿಲ್ಲ.

*→ಕ್ಷೇತ್ರಕ್ಕೆ ಐಟಿ ಹಬ್‌ ಎಂಬ ಹೆಗ್ಗಳಿಕೆ ಇದೆ. ಆದರೂ, ಮೂಲಸೌಕರ್ಯದ ಸಮಸ್ಯೆ ಇದೆಯಲ್ಲ?

ಮೊದಲಿನಿಂದಲೂ ನಗರದ ಪೂರ್ವ ಭಾಗವನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಇದು ಬೆಂಗಳೂರಿನ ಎರಡನೇ ದೊಡ್ಡ ಕ್ಷೇತ್ರ. ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್‌ ಸರ್ಕಾರವಂತೂ ಸಾಕಷ್ಟು ತಾರತಮ್ಯ ಮಾಡಿದೆ. ಬಿಜೆಪಿ ಸರ್ಕಾರವಿದ್ದಾಗ ಕ್ಷೇತ್ರಕ್ಕೆ ₹1400 ಕೋಟಿ ಬಿಡುಗಡೆಯಾಗಿತ್ತು. ಈ ಸರ್ಕಾರ ₹798 ಕೋಟಿಯಷ್ಟೇ ಕೊಟ್ಟಿದೆ. ಕ್ಷೇತ್ರದ ಜನರು ಪಾಲಿಕೆಗೆ ₹1700 ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಆದರೆ, ಮಂಜೂರಾದ ಅನುದಾನವನ್ನೂ ರದ್ದುಪಡಿಸಿದ್ದಾರೆ. ವರ್ತೂರು ಮಾರುಕಟ್ಟೆ ಸ್ಥಳಾಂತರಕ್ಕೆ ಪ್ರಸ್ತಾವ ಸಿದ್ಧಪಡಿಸಿ ₹25 ಲಕ್ಷ ಮೀಸಲಿಡಲಾಗಿತ್ತು. ಅದನ್ನು ವಾಪಸ್‌ ಪಡೆಯಲಾಗಿದೆ. ಐಟಿಪಿಎಲ್‌ ಮುಖ್ಯ ರಸ್ತೆ ವಿಸ್ತರಣೆಗೆ ಭೂಸ್ವಾಧೀನಕ್ಕೆ ಭೂಮಾಲೀಕರನ್ನು ಒಪ್ಪಿಸಿದ್ದೆ. ಟಿಡಿಆರ್‌ ಬದಲು ಪರಿಹಾರ ನೀಡುವಂತೆ ವಿನಂತಿಸಿದ್ದರು. ಇದಕ್ಕೂ ಸರ್ಕಾರ ಸ್ಪಂದಿಸಿಲ್ಲ. ದೊಡ್ಡನೆಕ್ಕುಂದಿ ಮೇಲ್ಸೇತುವೆ ಪಕ್ಕದ ಸರ್ವಿಸ್‌ ರಸ್ತೆ ಕಾಮಗಾರಿ ಅಭಿವೃದ್ಧಿಗೂ ಕುಂಟು ನೆಪ ಹೇಳಲಾಗುತ್ತಿದೆ. ಇಂತಹ ನೂರು ಉದಾಹರಣೆಗಳಿವೆ.

*→ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆಯಲ್ಲ?

ಐಟಿಪಿಎಲ್‌ ಭಾಗದಲ್ಲಿ ಮೆಟ್ರೊ ಕಾಮಗಾರಿ ಆರಂಭವಾಗಿದೆ. ಸಿಲ್ಕ್‌ ಬೋರ್ಡ್–ಟಿನ್‌ ಫ್ಯಾಕ್ಟರಿ ನಡುವೆ ಮೆಟ್ರೊ ಮಾರ್ಗ ನಿರ್ಮಾಣವಾಗಲಿದೆ. ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹17 ಸಾವಿರ ಕೋಟಿ ನೀಡುವುದಾಗಿ ಪ್ರಕಟಿಸಿದೆ. ಆರಂಭದಲ್ಲಿ ₹1 ಕೋಟಿ ನೀಡಿದೆ. ನಮ್ಮ ಸರ್ಕಾರ ಬಂದ ಬಳಿಕ ಈ ಯೋಜನೆಗೆ ಮತ್ತಷ್ಟು ವೇಗ ಸಿಗಲಿದೆ.

*→ಮಂಡೂರಿನಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆ ಎಲ್ಲಿಯವರೆಗೆ ಬಂತು?

ಗ್ರಾಮದಲ್ಲಿ ಕಸ ಸುರಿಯದಂತೆ ತಡೆದಿದ್ದೇವೆ. ಬೆಟ್ಟದಂತೆ ರಾಶಿ ಬಿದ್ದಿರುವ ಕಸವನ್ನು ತೆಗೆಸಿ ಎಂದು ಹೇಳಿ ನಾಲ್ಕೈದು ವರ್ಷಗಳು ಕಳೆದಿವೆ. ಟೆಂಡರ್‌ ಕರೆಯುವುದರಲ್ಲೇ ಬಿಬಿಎಂಪಿ ಕಾಲಹರಣ ಮಾಡುತ್ತಿದೆ. ಕಸದಿಂದ ವಿದ್ಯುತ್‌ ಉತ್ಪಾದನೆ ಪ್ರಸ್ತಾವ ಸಿದ್ಧಪಡಿಸಿ 14 ವರ್ಷಗಳು ಕಳೆದವು. ಇದೊಂದು ದೊಡ್ಡ ಅವ್ಯವಹಾರ. ವಿದ್ಯುತ್‌ ಉತ್ಪಾದಿಸಲು ಬಿಬಿಎಂಪಿ ₹73.34 ಕೋಟಿ ವೆಚ್ಚ ಮಾಡಿರುವ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಬೇಕು ಎಂದು ಸದನ ಸಮಿತಿ ನಿರ್ದೇಶನ ನೀಡಿದೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಗೆ ಬಿಬಿಎಂಪಿ ಜಾಗ ನೀಡಿದೆ. ಈ ಜಾಗವನ್ನು ಅಡವಿಟ್ಟು ಕಂಪೆನಿಯವರು ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಅದೊಂದು ಬೋಗಸ್‌ ಕಂಪನಿ. ಇಲ್ಲಿಯವರೆಗೆ ಒಂದು ಯುನಿಟ್‌ ವಿದ್ಯುತ್‌ ಉತ್ಪಾದನೆ ಆಗಿಲ್ಲ.

*→ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಆನ್‌ಲೈನ್‌ ಮೂಲಕ ಕ್ಷೇತ್ರದ 15 ಸಾವಿರಕ್ಕೂ ಹೆಚ್ಚು ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ಬಿಬಿಎಂಪಿ ತಿರಸ್ಕರಿಸಿದೆ. ಈ ಬಗ್ಗೆ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಹೈಕೋರ್ಟ್‌ ಮೆಟ್ಟಿಲೇರಿದೆ. ಹೆಸರು ಸೇರ್ಪಡೆಗೆ ವಿಳಂಬ ಏಕೆ?

ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅನೇಕ ಮಂದಿಯ ಹೆಸರು ಸೇರ್ಪಡೆಯಾಗಿದೆ. ಅರ್ಹರ ಅರ್ಜಿಗಳನ್ನು ತಿರಸ್ಕಾರ ಮಾಡಿರುವುದು ತಪ್ಪು. 7,000 ಬಾಂಗ್ಲಾದೇಶಿಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಕಾಂಗ್ರೆಸ್‌ಗೆ ಮತ ಸಿಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಆದರೆ, ದೇಶದ ನಿವಾಸಿಗಳಿಗೆ ಮತ ಹಕ್ಕು ನೀಡಲು ತಕರಾರು ಮಾಡಲಾಗುತ್ತಿದೆ. ಇದು ಅಕ್ಷಮ್ಯ.

*→ಕ್ಷೇತ್ರದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ದುಪ್ಪಟ್ಟು ಬೆಲೆಗೆ ಟ್ಯಾಂಕರ್‌ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ನೀರಿನ ಸಮಸ್ಯೆ ನಿವಾರಣೆಗೆ ನಿಮ್ಮ ಕಾರ್ಯಸೂಚಿ ಏನು?

ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 31 ಹಳ್ಳಿಗಳು ನನ್ನ ಕ್ಷೇತ್ರದಲ್ಲೇ ಇದೆ. ಕೊಳವೆಬಾವಿಗಳನ್ನು ಕೊರೆದು ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಒಂದೆರಡು ವರ್ಷದಲ್ಲಿ ಈ ಹಳ್ಳಿಗಳಿಗೆ ಕಾವೇರಿ ನೀರು ಸಿಗಲಿದೆ. ಇದಲ್ಲದೆ 11 ಗ್ರಾಮ ಪಂಚಾಯಿತಿಗಳ 60 ಹಳ್ಳಿಗಳಿಗೆ ಬೋರ್‌ವೆಲ್‌ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿಗೂ ಕಾವೇರಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT