ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್–ಬಿಜೆಪಿ ನೇರ ಹಣಾಹಣಿ

ಬಾಗಲಕೋಟೆ ಕ್ಷೇತ್ರ: ಕಳೆದ ಚುನಾವಣೆ ಚಿತ್ರಣ ಅದಲು–ಬದಲು!
Last Updated 4 ಮೇ 2018, 6:04 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಸಿಲ ಝಳ ಏರುತ್ತಿದ್ದಂತೆಯೇ ಘಟಪ್ರಭಾ ತಟದಲ್ಲಿ ಜಿದ್ದಾ ಜಿದ್ದಿನ ಪ್ರಚಾರ ಸದ್ದು ಮಾಡುತ್ತಿದೆ. ರಣ ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಉತ್ಸಾಹದಿಂದ ಮನೆ ಮನೆಗೆ ಎಡತಾಕುತ್ತಿದ್ದಾರೆ. ಹೀಗಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದೆ.

ಚುನಾವಣೆಯಲ್ಲಿ ಅಂತಿಮ ಕಣದಲ್ಲಿ 12 ಮಂದಿ ಇದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಎಚ್.ವೈ.ಮೇಟಿ ಹಾಗೂ ಬಿಜೆಪಿಯ ಹುರಿಯಾಳು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನಡುವೆ ಇಲ್ಲಿ ನೇರ ಪೈಪೋಟಿ ಕಾಣಬಹುದು.

ಮೂರೂವರೆ ದಶಕಗಳ ಸುದೀರ್ಘ ಅವಧಿಯ ನಂತರ ಕೈಗೆ ಬಂದಿರುವ ಕ್ಷೇತ್ರವನ್ನು ಈ ಬಾರಿಯೂ ಉಳಿಸಿಕೊಳ್ಳುವ ಸವಾಲು ಎಚ್‌.ವೈ.ಮೇಟಿಗೆ ಎದುರಾಗಿದೆ. ‘ಕಳೆದ ಬಾರಿ ದಾಯಾದಿ ಕಲಹದಲ್ಲಿ ನಾವೇ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಉಡುಗೊರೆ ಕೊಟ್ಟಿದ್ದೆವು’ ಎನ್ನುವ ವೀರಣ್ಣ ಚರಂತಿಮಠ, ಮತ್ತೆ ಕ್ಷೇತ್ರದಲ್ಲಿ ಕಮಲ ಅರಳಿಸುವ ಉಮೇದಿಯಲ್ಲಿದ್ದಾರೆ.

ಕಾಂಗ್ರೆಸ್‌ಗೆ ಬಂಡಾಯದ ಬಿಸಿ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷ ತ್ಯಜಿಸಿದ ಮಾಜಿ ಶಾಸಕ ಪಿ.ಎಚ್.ಪೂಜಾರ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕೊನೆಯ ಗಳಿಗೆಯಲ್ಲಿ ಬಿಜೆಪಿ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ ಮುಖಂಡ, ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್‌.ಪಾಟೀಲ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೂವರು ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ಇದು ಬಿಜೆಪಿ ಉತ್ಸಾಹ ಹೆಚ್ಚಿಸಿದೆ.

2013ರ ಚುನಾವಣೆಯಲ್ಲಿ ಪೂಜಾರ ಹಾಗೂ ತಪಶೆಟ್ಟಿ ಶಾಸಕ ಎಚ್.ವೈ.ಮೇಟಿ ಬೆನ್ನಿಗೆ ನಿಂತಿದ್ದರು. ಆ ಚಿತ್ರಣವೀಗ ಅದಲು ಬದಲಾಗಿದೆ. ಸುದೀರ್ಘ 15 ವರ್ಷಗಳ ನಂತರ ಪಿ.ಎಚ್.ಪೂಜಾರ ಬಿಜೆಪಿಗೆ ಮರಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅವರು ಹೊಂದಿರುವ ಹಿಡಿತ, ರಡ್ಡಿ ಸಮುದಾಯದ ಬೆಂಬಲ ಪಕ್ಷಕ್ಕೆ ಮುನ್ನಡೆ ತಂದುಕೊಡಲಿದೆ. ನಗರದಲ್ಲಿ ತಪಶೆಟ್ಟಿ ಅವರ ಸಂಘಟನಾ ಶಕ್ತಿ ನೆರವಾಗಲಿದೆ. ಜೊತೆಗೆ ವೀರಣ್ಣ ಚರಂತಿಮಠ ಮೊದಲಿಗಿಂತ ಹೆಚ್ಚು ಮಾಗಿದ್ದಾರೆ. ಎಲ್ಲರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದಾರೆ ಎಂಬುದು ಬಿಜೆಪಿ ಬೆಂಬಲಿಗರ ಲೆಕ್ಕಾಚಾರ.

ಮೇಟಿ ನಿರ್ಲಕ್ಷಿಸುವಂತಿಲ್ಲ: ‘ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಂಘಟನಾ ಬಲ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಐದು ವರ್ಷಗಳಲ್ಲಿ ಮೇಟಿ ಸಾಕಷ್ಟು ಪ್ರಬಲರಾಗಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಅವರ ಹಿಡಿತ ತಪ್ಪಿಲ್ಲ. ಎರಡು ಅವಧಿಗೆ ಪೂಜಾರ ಚುನಾವಣಾ ಕಣದಲ್ಲಿ ಇರಲಿಲ್ಲ. ಹಾಗಾಗಿ ಅವರಿಗೆ ಹೊಸ ಮತದಾರರ ಸಂಪರ್ಕ ಇಲ್ಲ. ಪೂಜಾರ ಸ್ಥಾನ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ ತುಂಬಲಿದ್ದಾರೆ. ಹಾಗಾಗಿ ಮೇಟಿ ಅವರನ್ನು ನಿರ್ಲಕ್ಷಿಸುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಪಕ್ಕದ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದೂ ಪ್ರಭಾವ ಬೀರಲಿದೆ’ ಎಂಬುದು ಕಾಂಗ್ರೆಸ್ ಬೆಂಬಲಿಗರ ವಾದ.

ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ವ್ಯಾಪಕ ಲೂಟಿ ನಡೆದಿದೆ ಎಂಬ ಆರೋಪ ಹಾಗೂ ಶಾಸಕ ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಎದುರಾದ ಪ್ರಸಂಗವನ್ನು ಪ್ರಚಾರದ ವೇಳೆ ಮುಖ್ಯವಾಗಿ ಪ್ರಸ್ತಾಪಿಸುತ್ತಿರುವ ಬಿಜೆಪಿ ನಾಯಕರು, ಯಡಿಯೂರಪ್ಪ ಮುಂದಿನ ಸಿಎಂ ಹಾಗೂ ಸ್ಥಳೀಯವಾಗಿ ನಾವು ಒಗ್ಗಟ್ಟಾಗಿದ್ದೇವೆ’ ಎಂಬ ಸಂದೇಶವನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

‘ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಹಿಂದೆ ಯಾವುದೇ ಸರ್ಕಾರದ ಅವಧಿಯಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯ ಈ ಅವಧಿಯಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದ ‘ಭಾಗ್ಯ’ಗಳ ಕೊಡುಗೆ ನೋಡಿಯಾದರೂ ಮತ ಕೊಡಿ ಎಂದು ಕೇಳುತ್ತಿರುವ ಕಾಂಗ್ರೆಸ್‌ ನಾಯಕರು, ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಂಗದ ಹಿಂದೆ ವಿರೋಧಿಗಳ ಹುನ್ನಾರ ಅಡಗಿದೆ’ ಎಂದು ಆರೋಪಿಸುತ್ತಾರೆ.

ಜೆಡಿಎಸ್–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೋಹನ ಜಿಗಳೂರ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಪರಶುರಾಮ ನೀಲನಾಯಕ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರು, ಮೈಕ್ರೊ ಫೈನಾನ್ಸ್ ಫಲಾನುಭವಿಗಳನ್ನು ಸಂಘಟಿಸಿ ಸದ್ದು ಮಾಡಿದ್ದ ನೀಲನಾಯಕ ಸ್ಪರ್ಧೆ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಆಮ್‌ಆದ್ಮಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ ಕಲಕುಟಿಗರ ಕೂಡ ತಳಹಂತದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT