ಫ್ಯಾಷನ್‌ ಪ್ರಿಯರ ಕಲಿಕೆಗೆ ‘ಬಿಎಫ್‌ಟಿ’

7
ಬೆಳಗಾವಿಯ ಕೆಎಲ್‌ಇ ಸಂಸ್ಥೆಯಲ್ಲಿ ಪಿಯು ವಿದ್ಯಾರ್ಹತೆಯವರಿಗೆ ಅವಕಾಶ

ಫ್ಯಾಷನ್‌ ಪ್ರಿಯರ ಕಲಿಕೆಗೆ ‘ಬಿಎಫ್‌ಟಿ’

Published:
Updated:

ಬೆಳಗಾವಿ: ಫ್ಯಾಷನ್‌ ಕುರಿತು ಒಲವು ಹೊಂದಿರುವವರು ಇದಕ್ಕೆ ಸಂಬಂಧಿಸಿದ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದಕ್ಕೆ ಕುಂದಾನಗರಿಯಲ್ಲಿ ಅವಕಾಶವಿದೆ.

ಇಲ್ಲಿನ ಕೆಎಲ್‌ಇ ಸಂಸ್ಥೆಯು ಆರಂಭಿಸಿರುವ ಫ್ಯಾಷನ್‌ ಟೆಕ್ನಾಲಜಿ ಹಾಗೂ ಅಪರಲ್‌ ಡಿಸೈನ್‌ ಕೋರ್ಸ್‌ಗೆ ದ್ವಿತೀಯ ಪಿಯು ವಿದ್ಯಾರ್ಹತೆಯವರು ಪ್ರವೇಶ ಪಡೆಯಬಹುದು.

ಪಿಯು ನಂತರ ವಿಶೇಷ ಕೋರ್ಸ್‌ಗಳಿಗೆ ಸೇರಲು ಉತ್ಸುಕವಾಗಿರುವ ವಿದ್ಯಾರ್ಥಿನಿಯರು ಫ್ಯಾಷನ್‌ ಟೆಕ್ನಾಲಜಿ ಕೋರ್ಸ್‌ ಅನ್ನು ತಮ್ಮ ಆಯ್ಕೆ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ. ನಗರದ ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಕ್ಯಾಂಪಸ್‌ನಲ್ಲಿರುವ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಈ ಕೋರ್ಸ್‌ಗೆ ಮಾನ್ಯತೆ ಪಡೆಯಲಾಗಿದೆ.

ಅವಕಾಶದ ಕ್ಷೇತ್ರ

ಮಾಮೂಲಿ ವಸ್ತ್ರವಿನ್ಯಾಸಕ್ಕಿಂತ ವಿಭಿನ್ನ ಹಾಗೂ ಆಕರ್ಷಕವಾದ ವಸ್ತ್ರವಿನ್ಯಾಸಕ್ಕೆ ಇಂದಿನ ಯುವಮನಸ್ಸುಗಳು ಮುಗಿಬೀಳುತ್ತಿವೆ. ಈ ಅಭಿರುಚಿ ಗ್ರಹಿಸಿಕೊಳ್ಳಬಲ್ಲ ಹಾಗೂ ವಿಭಿನ್ನ ವಸ್ತ್ರವಿನ್ಯಾಸಕ್ಕೆ ರೂಪ ಕೊಡುವ ಕೌಶಲ ಉಳ್ಳವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಫ್ಯಾಷನ್‌ ಕ್ಷೇತ್ರದಲ್ಲಿ ವಿಫುಲ ಉದ್ಯೋಗದ ಅವಕಾಶಗಳೂ ದೊರೆಯುತ್ತಿವೆ. ಕೌಶಲ ಹಾಗೂ ಅತ್ಯಾಕರ್ಷಕ ವಿನ್ಯಾಸಗಳನ್ನು ರೂಪಿಸುವ ಕಲೆಯುಳ್ಳವರನ್ನು ಕ್ಷೇತ್ರವು ಕೈಬೀಸಿ ಕರೆಯುತ್ತಿದೆ. ಇಂತಹ ಸೃಜನಶೀಲ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಬಯಸುವ ಯುವತಿಯರಿಗೆ ಬ್ಯಾಚುಲರ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಬಿಎಫ್‌ಟಿ) ಕೋರ್ಸ್‌ ಲಭ್ಯವಿದೆ.

ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆ, ಸಿದ್ಧ ಉಡುಪುಗಳ ತಯಾರಿಕಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬಂಡವಾಳ ಹೂಡಿಕೆ ಹಾಗೂ ಬೇಡಿಕೆ ಆಧರಿಸಿ ಕೆಎಲ್‌ಇ ಸಂಸ್ಥೆಯು ಕೋರ್ಸ್‌ ರೂಪಿಸಿದೆ. ಆರು ಸೆಮಿಸ್ಟರ್‌ನ (ಮೂರು ವರ್ಷ) ಈ ಕೋರ್ಸ್‌ಗೆ 40 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ರೂಪಿಸುವ ವಸ್ತ್ರವಿನ್ಯಾಸಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಸಲುವಾಗಿ ಪ್ರತಿವರ್ಷ ಇಲ್ಲಿ ‘ವಿನ್ಯಾಸ್‌’ ಫ್ಯಾಷನ್‌ ಷೋ ಕೂಡ ಯೋಜಿಸಲಾಗುತ್ತದೆ. ಕ್ಷೇತ್ರದ ಪರಿಣತರಿಂದ ಉದ್ಯೋಗದ ಮಾರ್ಗದರ್ಶನವನ್ನೂ ಕೊಡಲಾಗುತ್ತದೆ. ಫ್ಯಾಷನ್‌ ಹೌಸ್‌ಗಳು, ಗಾರ್ಮೆಂಟ್‌

ಗಳು, ಸಿದ್ಧ ಉಡುಪು ತಯಾರಿಸುವ ಕಾರ್ಖಾನೆಗಳು, ಪ್ರಖ್ಯಾತ ಬ್ರಾಂಡ್‌ಗಳ ಕಂಪೆನಿಗಳಲ್ಲಿನ ಕಾರ್ಯವೈಖರಿ ಹಾಗೂ ಕೌಶಲದ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಗುತ್ತದೆ. ಪ್ರತಿ ವರ್ಷವೂ ಕ್ಯಾಂಪಸ್‌ ಸಂದರ್ಶನ ನಡೆಸಲಾಗುತ್ತದೆ. ಹಾಸ್ಟೆಲ್‌ ಸೌಲಭ್ಯವೂ ಇದೆ.

ಉದ್ಯೋಗ ಗಳಿಸಿದ್ದಾರೆ

ಬಿಎಫ್‌ಟಿ ಕೋರ್ಸ್‌ ಮಾಡಿದವರಿಗೆ ಮೂರು ವಿಧದ ಅವಕಾಶಗಳಿವೆ. ಉನ್ನತ ವ್ಯಾಸಂಗ ಮಾಡಿ, ಬೋಧನಾ ವೃತ್ತಿಯಲ್ಲಿ ತೊಡಗಬಹುದು. ಗಾರ್ಮೆಂಟ್ಸ್‌ ಉದ್ಯಮದಲ್ಲಿ ಉದ್ಯೋಗ ಕಂಡುಕೊಳ್ಳಬಹುದು ಹಾಗೂ ಸ್ವಂತ ಬೊಟಿಕ್‌ಗಳನ್ನು ಆರಂಭಿಸಬಹುದು. 2006ರಿಂದ ಇಲ್ಲಿ ಒಂಬತ್ತು ಬ್ಯಾಚ್‌ನಲ್ಲಿ ಪದವೀಧರರು ಹೊರಬಂದಿದ್ದಾರೆ. ಇಲ್ಲಿ ಕಲಿತವರು ಗಾರ್ಮೆಂಟ್ಸ್‌ ಉದ್ಯಮದಲ್ಲಿ ಮರ್ಚೆಂಟೈಸರ್, ಕ್ಯಾಡ್ ಆಪರೇಟರ್‌, ಡಿಸೈನರ್‌, ಇಲ್ಲಸ್ಟ್ರೇಟರ್‌ ಹಾಗೂ ಶಿಫ್ಟ್‌ ಸೂಪರ್‌ವೈಸರ್‌ ಉದ್ಯೋಗ ಪಡೆದುಕೊಂಡಿದ್ದಾರೆ. ಖ್ಯಾತ ಕಂಪನಿಗಳಾದ ರೇಮಂಡ್ಸ್‌, ಶಾಹಿ ಎಕ್ಸ್‌ಪೋರ್ಟ್‌, ಗೋಕುಲದಾಸ್‌ ಗಾರ್ಮೆಂಟ್ಸ್‌, ಟೆಕ್ಸ್‌ಪೋರ್ಟ್‌ ಸಿಂಡಿಕೇಟ್‌ ಮೊದಲಾದ ಕಡೆಗಳಲ್ಲಿ ಕೆಲಸ ಪಡೆದಿದ್ದಾರೆ.

ಕಲಿಕೆಗೆ ಹಾಗೂ ಸೃಜನಾತ್ಮಕವಾಗಿ ಯೋಚಿಸಲು ಬೇಕಾದ ಪೂರಕ ವಾತಾವರಣ ಇಲ್ಲಿದೆ. ದ್ವಿತೀಯ ಪಿಯು ಪೂರೈಸಿರುವ ವಿದ್ಯಾರ್ಥಿನಿಯರು ಮಾತ್ರವಲ್ಲದೇ, ಗೃಹಿಣಿಯರೂ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ವಯಸ್ಸಿನ ಮಿತಿ ಇಲ್ಲ. ಉತ್ತಮ ಪ್ರಯೋಗಾಲಯಗಳು ಹಾಗೂ ಕಂಪ್ಯೂಟರ್‌ ಸೌಲಭ್ಯವಿದೆ. ಸೆಮಿಸ್ಟರ್‌ಗೆ ₹ 25,000 ಶುಲ್ಕ ನಿಗದಿಪಡಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ದೂ: 0831– 2404045 ಸಂಪರ್ಕಿಸಬಹುದು. ಜಾಲತಾಣ: http://klefashiontechbgm.org ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry