ಮಹಿಳೆಯರ ಸೆಳೆಯಲು ‘ಪಿಂಕ್‌’ ಮತಗಟ್ಟೆ

7
ತೋಟಗಾರಿಕೆ ನಿರ್ದೇಶಕರ ಕಚೇರಿಗೆ ವಿಶೇಷ ಅಲಂಕಾರ

ಮಹಿಳೆಯರ ಸೆಳೆಯಲು ‘ಪಿಂಕ್‌’ ಮತಗಟ್ಟೆ

Published:
Updated:
ಮಹಿಳೆಯರ ಸೆಳೆಯಲು ‘ಪಿಂಕ್‌’ ಮತಗಟ್ಟೆ

ಹೂವಿನಹಡಗಲಿ: ಮೇ 12ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪಿಂಕ್‌ ಮತಗಟ್ಟೆಯೊಂದು ಸಜ್ಜುಗೊಂಡಿದೆ.

ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಮಹಿಳಾ ಸ್ನೇಹಿ ಮತಗಟ್ಟೆಗಳೆಂದು ಪರಿಗಣಿಸಿ ವಿಶೇಷವಾಗಿ ರೂಪುಗೊಳಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಪಟ್ಟಣದ ಹಂಪಸಾಗರ ಮುಖ್ಯ ರಸ್ತೆಯಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 82 ಈಗ ‘ಸಖೀ ಪಿಂಕ್‌ ಮತಗಟ್ಟೆ’ಯಾಗಿ ರೂಪುಗೊಂಡಿದೆ.

ಇಡೀ ಮತಗಟ್ಟೆಗೆ ತಿಳಿ ಗುಲಾಬಿ (ಪಿಂಕ್‌) ಬಣ್ಣ ಬಳಿಯಲಾಗಿದೆ. ತೋಟಗಾರಿಕೆ ಇಲಾಖೆ ಕಚೇರಿಯ ಎಲ್ಲ ಕೊಠಡಿಗಳು, ಕಾಂಪೌಂಡ್‌ ಸೇರಿದಂತೆ ಪಿಂಕ್‌ ಬಣ್ಣದಿಂದ ಕಂಗೊಳಿಸುತ್ತಿದೆ. ಕಚೇರಿ ಮುಂಭಾಗದ ಗಿಡಗಳಲ್ಲಿ ಅರಳಿ ನಿಂತಿರುವ ತಿಳಿಕೆಂಪು ಬಣ್ಣದ ಕಾಗದ ಹೂಗಳು ಕೂಡ ಸಹಜ ಸೌಂದರ್ಯ ಬೀರುತ್ತಿವೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಮತಗಟ್ಟೆ ಗುಲಾಬಿ ಬಣ್ಣದಿಂದ ಸಿಂಗಾರಗೊಂಡು ಆಕರ್ಷಣೆಯ ಕೇಂದ್ರವಾಗಿದೆ.

ತೋಟಗಾರಿಕೆ ಕಚೇರಿಯ ಮತಗಟ್ಟೆ ಸಂಖ್ಯೆ 82ರಲ್ಲಿ ಒಟ್ಟು 1,117 ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ 530 ಪುರುಷ ಹಾಗೂ 587 ಮಹಿಳಾ ಮತದಾರರು ಇದ್ದಾರೆ. ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಇದು ಪಿಂಕ್‌ ಮತಗಟ್ಟೆಯಾಗಿ ರೂಪುಗೊಂಡಿದೆ.

‘ಬರೀ ಮತಗಟ್ಟೆಯ ಗೋಡೆಗಳು ಮಾತ್ರ ಪಿಂಕ್‌ ಆಗಿ ಬದಲಾಗುವುದಿಲ್ಲ. ಕಿಟಕಿಯ ಪರದೆ, ಸಿಬ್ಬಂದಿಯ ಸಮವಸ್ತ್ರವೂ ಪಿಂಕ್‌ ಆಗಿರಲಿದೆ. ಮಹಿಳೆಯರು ಪಿಂಕ್‌ ಬಣ್ಣವನ್ನು ಹೆಚ್ಚು ಇಷ್ಟಪಡುವ ಕಾರಣ ಚುನಾವಣಾ ಆಯೋಗ ಮಹಿಳೆಯರನ್ನು ಸೆಳೆಯಲು ಈ ವಿನೂತನ ಪ್ರಯೋಗ ನಡೆಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಮತಗಟ್ಟೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪೊಲೀಸರು ಸೇರಿದಂತೆ ಎಲ್ಲ ಐದೂ ಜನ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ’ ಎಂದು ಕ್ಷೇತ್ರ ಚುನಾವಣಾಧಿಕಾರಿ ಎಂ.ಎಸ್. ದಿವಾಕರ ತಿಳಿಸಿದರು.

**

ಮಹಿಳೆಯರು ಭಯ, ಒತ್ತಡ ಇಲ್ಲದೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲ ಆಗುವಂತೆ ಮಹಿಳಾ ಸ್ನೇಹಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳಲ್ಲಿ ಶೇ 100ರಷ್ಟು ಮತದಾನ ನಿರೀಕ್ಷಿಸಿದ್ದೇವೆ

– ಎಂ.ಎಸ್.ದಿವಾಕರ, ಚುನಾವಣಾಧಿಕಾರಿ, ಹಡಗಲಿ ಕ್ಷೇತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry