ಮೋದಿ ಹುಸಿ ಭರವಸೆಗೆ ಜನ ಮರಳಾಗುವುದಿಲ್ಲ

7
ಕೇಂದ್ರದ ವಿರುದ್ಧ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಮೋದಿ ಹುಸಿ ಭರವಸೆಗೆ ಜನ ಮರಳಾಗುವುದಿಲ್ಲ

Published:
Updated:

ಔರಾದ್:  ‘ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಹುಸಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದ ಜನ ಈಗ ಅಂತಹ ಯಾವುದೇ ಹುಸಿ ಭರವಸೆಯನ್ನು ನಂಬುವುದಿಲ್ಲ’ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣ ವಾಪಸ್ ತರುವುದು, ಯುವಕರಿಗೆ ಉದ್ಯೋಗ ಕೊಡುವುದು, ರೈತರು ಮತ್ತು ದಲಿತರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಮೋದಿ ಅವರು ಇವುಗಳಲ್ಲಿ ಒಂದೂ ಕೆಲಸ ಮಾಡದೆ ದೇಶದ ಜನರಿಗೆ ಮೋಸ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಈಚೆಗೆ ಮೋದಿ ಹೇಳಿದ್ದಾರೆ. ಆದರೆ, ಅವರ ಸಂಪುಟದಲ್ಲಿರುವ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡಲೆಂದು ನಾವು ಬಂದಿರುವುದಾಗಿ ಹೇಳುತ್ತಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಮತ್ತೊಮ್ಮೆ ಮನು ಸಂಸ್ಕೃತಿ ಹೇರಲು ಹೊರಟಿದೆ. ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ಕಾಂಗ್ರೆಸ್ ಸುಮ್ಮನೆ ಕೂಡುವುದಿಲ್ಲ’ ಎಂದು ಎಚ್ಚರಿಸಿದರು.

‘ರಾಜ್ಯದ ಚುನಾವಣೆ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಮತ್ತು ಜಾತ್ಯತೀತ ಎತ್ತಿ ಹಿಡಿಯಲು ಕಾಂಗ್ರೆಸ್‌ಗೆ ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ 165 ಪ್ರಣಾಳಿಕೆಯಲ್ಲಿ 155 ಭರವಸೆಗಳು ಈಡೇರಿಸಿದ್ದೇವೆ. ರಾಜ್ಯದ ರೈತರ ಸಂಕಷ್ಟ ಕಂಡ ರಾಹುಲ್ ಗಾಂಧಿ ಅವರು ಹೇಳಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 50 ಸಾವಿರ ವರೆಗಿನ ರೈತರ ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371 (ಜೆ) ಕಲಂ ಜಾರಿ ಮಾಡಲು ಬರುವುದಿಲ್ಲ’ ಎಂದು ಹೇಳಿದ್ದರು.

‘ಕಾಂಗ್ರೆಸ್‌ನ ಡಾ. ಮನ ಮೋಹನ ಸಿಂಗ್ ಸರ್ಕಾರ 371(ಜೆ) ಕಲಂ ಜಾರಿ ಮಾಡಿತ್ತು. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲಗಳಾಗಿವೆ. ರಾಜ್ಯ ಸರ್ಕಾರ ಈ ಭಾಗಕ್ಕೆ ಕಳೆದ ಮೂರು ವರ್ಷಗಳಲ್ಲಿ ₹ 4500 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಸಂಸದ ಕೆ.ಎಚ್. ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ, ಓಬೆದುಲ್ಲ ಶರೀಫ್, ಸಾಕೆ ಸೈಲಜನಾಥ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಕೆ. ಪುಂಡಲಿಕರಾವ್, ಶಂಕರ ದೊಡ್ಡಿ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಬಸವರಾಜ ದೇಶಮುಖ, ಅರುಣ ಪಾಟೀಲ, ಸುಧಾಕರ ಕೊಳ್ಳೂರ್, ಕನ್ನಿರಾಮ ರಾಠೋಡ, ಡಾ. ರತಿಕಾಂತ ಮಜಗೆ, ಆನಂದ ಚವಾಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸವಿತಾ ಪಾಟೀಲ, ಜಿಲ್ಲಾ ಪಂಚಾಯಿತಿ. ಸದಸ್ಯೆ ಗೀತಾ ಚಿದ್ರಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry