ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕೋಮುವಾದಿ, ಜೆಡಿಎಸ್ ಅವಕಾಶವಾದಿ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ
Last Updated 4 ಮೇ 2018, 9:07 IST
ಅಕ್ಷರ ಗಾತ್ರ

ಹರಿಹರ: ‘ಬಿಜೆಪಿ, ಜೆಡಿಎಸ್ ಒಪ್ಪಂದದ ಬಗ್ಗೆ ಮಾತನಾಡಿದರೆ ದೇವೇಗೌಡರಿಗೆ ಸಿಟ್ಟು ಬರುತ್ತದೆ. ನಾನು 2004ರಲ್ಲಿ ಬಿಜೆಪಿ ಸೇರಲು ಮುಂದಾಗಿದ್ದೆ ಎಂದು ಅವರು ಸುಳ್ಳು ಆರೋಪ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರಾಮಪ್ಪ ಪರ ಅವರು ಪ್ರಚಾರ ಭಾಷಣ ಮಾಡಿದರು.

‘ಜನತಾದಳ ಇಬ್ಭಾಗವಾದಾಗ ನಾನು, ಇಬ್ರಾಹಿಂ, ಸತೀಶ್‌ ಜಾರಕಿಹೊಳಿ ಉಳಿಯದಿದ್ದರೆ ಜೆಡಿಎಸ್ ಎಲ್ಲಿರುತ್ತಿತ್ತು’ ಎಂದು ದೇವೇಗೌಡರನ್ನು ಪ್ರಶ್ನಿಸಿದರು.

‘ಮೈಸೂರು ಭಾಗದಲ್ಲಿ ಬಿಜೆಪಿ ಹಾಕಿರುವ ಅಭ್ಯರ್ಥಿಗಳನ್ನು ಗಮನಿಸಿದರೆ ಒಪ್ಪಂದ ಆಗಿದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ. ಬಿಜೆಪಿ ಮಾಡಿರುವ ಕೆಲಸ ಎದ್ದು ಕಾಣುತ್ತದೆ. ಪಂಚಾಯ್ತಿ ಚುನಾವಣೆಯಲ್ಲಿ ಸೋತವರು, ಟೀ ಅಂಗಡಿ ಇಟ್ಟುಕೊಂಡವರನ್ನೆಲ್ಲಾ ಚುನಾವಣೆಗೆ ನಿಲ್ಲಿಸಿದ್ದಾರೆ. ಜೆಡಿಎಸ್‌ಗೆ ಬೆಂಬಲವಾಗಿ ಬಿಜೆಪಿ ನಿಂತಿದೆ. ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಎಂದು ಅವಮಾನ ಮಾಡಿದ್ದ ಮೋದಿ, ಗೌಡರನ್ನು ಹೊಗಳಿರುವುದರ ಒಳಗುಟ್ಟು ಎಲ್ಲರಿಗೂ ಗೊತ್ತಿದೆ’ ಎಂದು ಕುಟುಕಿದರು.

ಮೋದಿಗೆ ಕರ್ನಾಟಕದಲ್ಲಿ ಮಾತನಾಡಲು ವಿಚಾರಗಳೇ ಇಲ್ಲ. ಹೀಗಾಗಿ, ದೇವೇಗೌಡರನ್ನು ಹೊಗಳಿದ್ದಾರೆ. ಅವರು ಮಹದಾಯಿ ಬಗ್ಗೆ ಏಕೆ ತುಟಿ ಬಿಚ್ಚಲಿಲ್ಲ ಎಂದು ಪ್ರಶ್ನಿಸಿದರು.

‘ಬಿಜೆಪಿ ಕೋಮುವಾದಿ, ಜೆಡಿಎಸ್ ಅವಕಾಶವಾದಿ ಪಕ್ಷಗಳು. ಎರಡೂ ಪಕ್ಷಗಳು ಒಳ‌ಒಪ್ಪಂದ ಮಾಡಿಕೊಂಡಿವೆ’ ಎಂದು  ಮತ್ತೆ ಆರೋಪಿಸಿದರು.

ರಾಜ್ಯದಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಬಿಜೆಪಿ ಒಂದೂ ಟಿಕೆಟ್‌ ನೀಡಿಲ್ಲ. ಬಿಜೆಪಿಯ ‘ಸಬ್‍ ಕಾ ಸಾಥ್, ಸಬ್‍ ಕಾ ವಿಕಾಸ್’ ಘೋಷಣೆ ಡೋಂಗಿ. ಬಿಜೆಪಿಯಿಂದ ‘ಸಬ್‍ ಕಾ ವಿನಾಶ್’ ಆಗಲಿದೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಕೈಯಲ್ಲಿ ಬರೀ ಸ್ಟೇರಿಂಗ್‌: ಇಬ್ರಾಹಿಂ ವ್ಯಂಗ್ಯ

‘ಜೆಡಿಎಸ್‌ ಹಳೆಯ ಬಸ್‌. ಆ ಬಸ್‌ಗೆ ಸಿದ್ದರಾಮಯ್ಯ ಎಂಜಿನ್‌, ನಾನು ಗೇರ್‌ ಬಾಕ್ಸ್‌ ಆಗಿದ್ದೆವು. ನಾವು ಇಬ್ಬರೂ ಪಕ್ಷ ತೊರೆದು ಹೊರಗೆ ಬಂದೆವು. ಈಗ ಕುಮಾರಸ್ವಾಮಿ ಕೈಯಲ್ಲಿ ಉಳಿದಿರುವುದು ಬರೀ ಸ್ಟೇರಿಂಗ್‌ ಮಾತ್ರ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.

‘ಜೆಡಿಎಸ್ ಆ ಕಡೆ ಅಂದರೆ ಆ ಕಡೆ; ಈ ಕಡೆ ಅಂದರೆ ಈ ಕಡೆ ಹೋಗುವ ಪಕ್ಷ’ ಎಂದು ಛೇಡಿಸಿದರು.

‘ಕೋರ್ಟ್‌ನಲ್ಲಿ ಅಮೀನ್‌ ಕೂಗ್ತಾರೆ’

‘ಬಿಜೆಪಿ ಸಾಧನೆ ಅಂದ್ರೆ ಕೋರ್ಟ್‌ನಲ್ಲಿ ಅಮೀನ್ ಕೂಗ್ತಾರೆ ಯಡಿಯೂರಪ್ಪ ಹಾಜರ್ ಹೋ, ಕಟ್ಟಾ ಹಾಜರ್ ಹೋ, ಜನಾರ್ದನ ರೆಡ್ಡಿ ಹಾಜರ್ ಹೋ’ ಅಂತ. ಇದೇ ಅವರ ಸಾಧನೆ. ನಮ್ಮ ಸರ್ಕಾರದಲ್ಲಿ ಒಬ್ಬ ಮಂತ್ರಿನೂ ಜೈಲಿಗೆ ಹೋಗಿಲ್ಲ’ ಇಬ್ರಾಹಿಂ ಎಂದು ಹೇಳಿದರು.

‘ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು’ ಎಂಬ ವಚನ ಹೇಳಿದ ಇಬ್ರಾಹಿಂ, ಮೋದಿಯ ಧನ ‘ಲಲಿತ ಮೋದಿ’, ‘ನೀರವ್ ಮೋದಿ’ಗಲ್ಲದೇ ಬಡಬಗ್ಗರಿಗೆ ಸಲ್ಲದಯ್ಯಾ ಎಂದು ವ್ಯಂಗ್ಯವಾಡಿದರು.

ಮಾಯಕೊಂಡ: ಮೋದಿಗೆ 56 ಇಂಚಿನ ಎದೆಯಿದ್ದರೆ ಸಾಲದು. ಬಡವರ ಪರ ಕೆಲಸ ಮಾಡುವ ಹೃದಯವಂತಿಕೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆ ಉದ್ಘಾಟಿಸಿದ ಮುಖ್ಯಮಂತ್ರಿ, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

‘ರಾಜ್ಯದ ಸಂಪತ್ತು ಲೂಟಿ ಮಾಡಿದ ಬಿಜೆಪಿಯವರಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಭ್ರಷ್ಟ ಬಿಜೆಪಿಗೆ ಜನರು ಮತ ನೀಡದೇ ಕಾಂಗ್ರೆಸ್‌ ಅನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

‘ಬಳ್ಳಾರಿ ಅಕ್ರಮ ಗಣಿಗಾರಿಕೆಯಿಂದ ಜನಾರ್ದನ ರೆಡ್ಡಿಗೆ ನಿತ್ಯ ₹ 10 ಕೋಟಿ ಆದಾಯ ಬರುತ್ತಿತ್ತು. ಅದರಲ್ಲಿ ಯಡಿಯೂರಪ್ಪಗೂ ಪಾಲು ಇತ್ತು. ಜೈಲಿಗೆ ಹೋಗಿಬಂದ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪ... ಹೀಗೆ ಲೂಟಿಕೋರರೆಲ್ಲಾ ಒಂದಾಗಿ ನನ್ನ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಜೈಲಿಗೆ ಹೋದವರಿಗೆ ಜನ ಮತಹಾಕಲ್ಲ. ಇವರದು ‘ಅಲಿಬಾಬಾ ಮತ್ತು 40 ಕಳ್ಳರ ಕಥೆ’ ಎಂದು ಛೇಡಿಸಿದರು.

2 ವರ್ಷಗಳಿಂದ ‘ಮಿಷನ್ -150’ ಎಂದು ಬೊಬ್ಬಿಡುತ್ತಿದ್ದ ಬಿಜೆಪಿ ಉಪ ಚುನಾವಣೆಯಲ್ಲಿ ಸೋಲು ಕಂಡು, ಈಗ ‘ಮಿಷನ್–50’ಗೆ ಬಂದು ನಿಂತಿದೆ ಎಂದು ಲೇವಡಿ ಮಾಡಿದರು.

‘ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರಿಟ್ಟಿದ್ದು, ಕೆಂಪೇಗೌಡ ಜಯಂತಿ ಮಾಡಿಸಿದ್ದು ನಾವು. ಆದರೆ, ಕುಮಾರಸ್ವಾಮಿ ತಮ್ಮ ಫೋಟೊ ಹಾಕಿಕೊಂಡು ನಾವು ಕನ್ನಡಿಗರು ಅಂಥಾ ಪೋಸು ಕೊಡ್ತಾರೆ. ಇಂಥ ಡೋಂಗಿಗಳಿಗೆ ಅವಕಾಶ ನೀಡದಿರಿ ಎಂದು ಮನವಿ ಮಾಡಿದರು.

ಮುಖಂಡ ಸಿ.ಎಂ. ಇಬ್ರಾಹಿಂ, ‘ಯಾವುದೇ ಸಮಾಜಕ್ಕೆ ಅನ್ಯಾಯ ಮಾಡದೇ ಬಸವಣ್ಣನ ಹಾದಿಯಲ್ಲಿ ಕಾಂಗ್ರೆಸ್‌ ಸರ್ಕಾರ ನಡೆದಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಲ್ಲಿ ಮೀಸಲಾತಿ ನೀಡಬಾರದೆಂದು ಕೋರ್ಟ್ ಮೆಟ್ಟಿಲೇರಿದ ಬಿಜೆಪಿಗೆ ದಲಿತರ ಬಗ್ಗೆ ಮಾತಾಡುವ ಹಕ್ಕಿಲ್ಲ. ಸಂವಿಧಾನ ಬದಲಿಸುತ್ತೇವೆ; ಜಾತ್ಯತೀತರಿಗೆ ತಂದೆ ತಾಯಿಯಿಲ್ಲ ಎಂದು ಹೇಳುವ ಬಿಜೆಪಿ ನಾಯಕರು ಸಂವಿಧಾನ ವಿರೋಧಿಗಳು’ ಎಂದು ದೂರಿದರು.

ಮೋದಿ ಸರ್ಕಾರದಲ್ಲಿ ಅಡುಗೆ ಅನಿಲದ ಬೆಲೆ ₹ 800ಕ್ಕೆ ಏರಿದೆ. ಆಹಾರ ಸಾಮಗ್ರಿ ಬೆಲೆ ಹೆಚ್ಚಿದ್ದು, ಜನಜೀವನ ದುಸ್ತರವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ, ‘ಮಾಯಕೊಂಡವನ್ನು ತಾಲ್ಲೂಕು ಕೇಂದ್ರವಾಗಿಸಲು ಹೋರಾಡು
ತ್ತೇನೆ. ಹಿರೇಮದಕರಿ ನಾಯಕರ ಸಮಾಧಿ ಸ್ಥಳವನ್ನು ಪ್ರವಾಸಿ ತಾಣವಾಗಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಪಕ್ಷದ ಅಭಿಮಾನಿಗಳು ಭಾರಿ ಗಾತ್ರದ ಹಾರ ಹಾಕಿ, ಕುರಿ ನೀಡಿ, ಕಂಬಳಿ ಹೊದಿಸಿ ಅಭಿನಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವರಾಜಪ್ಪ, ಸದಸ್ಯ ಓಬಳಪ್ಪ, ಮಾಜಿ ಸದಸ್ಯ ಎಸ್. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಟಿ. ಹನುಮಂತಪ್ಪ, ಬಿ.ಜಿ. ನಾಗರಾಜ, ವೀಕ್ಷಕ ಶ್ರೀಶೈಲಂ, ಮುಖಂಡರಾದ ಕೆಂಗೋ ಹನುಮಂತಪ್ಪ, ಚಂದ್ರಶೇಖರ್, ಜಾಲತಾಣ ವಿಭಾಗದ ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಸಿದ್ದಪ್ಪ, ಕೆ. ಆರ್. ಲಕ್ಷ್ಮಣ, ಜಯದೇವನಾಯ್ಕ, ಶಂಭಣ್ಣ ಇದ್ದರು.

**
ದೇವೇಗೌಡರು ಸಂಸದರಲ್ಲವೇ? ರೈತರ ಸಾಲ ಮನ್ನಾ ಮಾಡಿ ಎಂದು ಒಮ್ಮೆಯೂ ಸದನದಲ್ಲಿ ಏಕೆ ಧ್ವನಿ ಎತ್ತಲಿಲ್ಲ?
– ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT