ಅಧಿಕಾರಕ್ಕೆ ಬಂದರೆ ಭೈರನಪಾದ ಯೋಜನೆ ಅನುಷ್ಠಾನ

7
ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಅಧಿಕಾರಕ್ಕೆ ಬಂದರೆ ಭೈರನಪಾದ ಯೋಜನೆ ಅನುಷ್ಠಾನ

Published:
Updated:

ಹರಿಹರ (ದಾವಣಗೆರೆ): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು. ಹರಿಹರ ಕ್ಷೇತ್ರದ ಭೈರನಪಾದ ಯೋಜನೆ ಅನುಷ್ಠಾನಕ್ಕೂ ಆದ್ಯತೆ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ಕಾಂಗ್ರೆಸ್‌ ಏರ್ಪಡಿಸಿದ್ದ ಸಮಾವೇಶದಲ್ಲಿ ಅಭ್ಯರ್ಥಿ ಎಸ್‌. ರಾಮಪ್ಪ ಪರ ಪ್ರಚಾರ ಮಾಡಿದರು.

ಕುಡಿಯಲು ಮೀಸಲಿಟ್ಟು, ಉಳಿದ ಭದ್ರಾ ಜಲಾಶಯದ ನೀರನ್ನು ಕೃಷಿಗೆ ಒದಗಿಸಲಾಗುವುದು. ನೀರಿನ ಲಭ್ಯತೆ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ 22 ಲಕ್ಷ ರೈತರ ₹8 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ರಾಷ್ಟೀಕೃತ ಬ್ಯಾಂಕ್‍ಗಳಲ್ಲಿ ರೈತರ ₹ 42ಸಾವಿರ ಕೋಟಿ ಮನ್ನಾ ಮಾಡಲು ಕೇಂದ್ರಕ್ಕೆ ನಿಯೋಗ ಕೊಂಡೊಯ್ದರೂ ಸ್ಪಂದನೆ ದೊರೆಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಎಂಟರಲ್ಲಿ ಏಳು ಕ್ಷೇತ್ರಗಳನ್ನು ಗೆದ್ದಿದ್ದೆವು. ಈ ಬಾರಿ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮದು ಸಾಮಾಜಿಕ ನ್ಯಾಯ ಚಿಂತನೆಯುಳ್ಳ ಪಕ್ಷ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ ಇದಕ್ಕೆ ವಿರುದ್ಧವಾದ ಪಕ್ಷಗಳು. ಬಿಜೆಪಿ, ಆರ್‍ಎಸ್‍ಎಸ್, ಬಜರಂಗದಳ ಹಾಗೂ ಸಂಘ ಪರಿವಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿದಿರುವ ಪಕ್ಷ, ಸಂವಿಧಾನದ ಮೂಲ ಸ್ವರೂಪ ಬದಲಿಸಲು ಮುಂದಾದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದರು.

ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ‘ಮಠಗಳು ಒಂದೆರಡು ಸಾವಿರ ಜನರಿಗೆ ದಾಸೋಹ ಮಾಡಬಹುದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆ ಮೂಲಕ ನಿತ್ಯ 4 ಕೋಟಿ ಜನರಿಗೆ ಅನ್ನ ದಾಸೋಹ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮಹಾ ದಾಸೋಹಿ ಎಂದು ಶ್ಲಾಘಿಸಿದರು.

‘ಗುಜರಾತ್‌ ಅಭಿವೃದ್ಧಿ ಎಂದು ಅರಚುತ್ತಾರೆ. ನಮ್ಮೂರಿನಲ್ಲಿ ಪಾನಿಪೂರಿ ಮಾರುವವ ಗುಜರಾತ್‌ ನವನು. ಅಲ್ಲಿ ಅಭಿವೃದ್ಧಿ ಆಗಿದ್ದರೆ, ಅವನ್ಯಾಕೆ ಇಲ್ಲಿಗೆ ಬರುತ್ತಿದ್ದ. ಗುಜರಾತ್‍ನಲ್ಲಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತರ ಮದುವೆ ಮೆರವಣಿಗೆಗೆ ನಿಯಂತ್ರಣ ಹೇರಲಾಗುತ್ತಿದೆ. ಸಂವಿಧಾನಾತ್ಮಕ ಹಕ್ಕುಗಳನ್ನು ಅಳಿಸಿ, ಏಕಾಧಿಪತ್ಯ ನಡೆಸುವ ಹುನ್ನಾರವನ್ನು ಮೋದಿ ಹಾಗೂ ಶಾ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಡಿ. ಬಸವರಾಜ್, ಕಾಂಗ್ರೆಸ್‌ ಮುಖಂಡ ರಾಮಚಂದ್ರ ಖುಲಾಲ್‌ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯ ಮೋಹನ ಕೊಂಡಜ್ಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಎಐಸಿಸಿ ಕಾರ್ಯದರ್ಶಿ ಬಲ್ಕಿಷ್‍ಬಾನು ಅವರೂ ಇದ್ದರು.

ಅಭಿವೃದ್ಧಿಯಾದ ಜೆಡಿಎಸ್ ಶಾಸಕ

‘ಐದು ವರ್ಷಗಳಲ್ಲಿ ಹರಿಹರ ಕ್ಷೇತ್ರದ ಜೆಡಿಎಸ್‌ ಶಾಸಕ ಸ್ವಂತಕ್ಕೆ ಅಭಿವೃದ್ಧಿ ಮಾಡಿಕೊಂಡರು. ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

‘ರಾಮಪ್ಪ ಸೋತರೂ ಕ್ಷೇತ್ರದಲ್ಲಿ ಜನರ ಕೆಲಸ ಮಾಡಿದರು. ಮಲೇಬೆನ್ನೂರು ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಶ್ರಮಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಕಡತಗಳನ್ನು ಹಿಡಿದುಕೊಂಡು ಕಚೇರಿಗಳನ್ನು ಅಲೆದರು. ಶಾಸಕನಿಗಿಂತ ಹೆಚ್ಚು ಕೆಲಸ ಮಾಡಿದರು. ರಾಮಪ್ಪಗೆ ಹಮ್ಮು–ಬಿಮ್ಮು ಇಲ್ಲ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತಾರೆ. ರಾಮಪ್ಪಗೆ ಮತದಾರರು ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

ಗಾಂಧಿ ಟೋಪಿಯಲ್ಲಿ ಮಿಂಚಿದರು

ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ, ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಇನ್ನುಳಿದ ಕಾಂಗ್ರೆಸ್‌ ನಾಯಕರಿಗೆ ಸೇವಾದಳದ ಕಾರ್ಯಕರ್ತರು ಗಾಂಧಿ ಟೋಪಿ ತೊಡಿಸಿದರು. ತ್ರಿವರ್ಣದ ಖಾದಿನೂಲಿನ ಹಾರ ಹಾಕಿದರು. ಗಾಂಧಿ ಟೋಪಿಯಲ್ಲಿ ಕಾಂಗ್ರೆಸ್‌ ನಾಯಕರು ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry