ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತ

ಮಾಗಿ ಉಳುಮೆ ಮಾಡುತ್ತಿರುವ ಗದಗ ಜಿಲ್ಲೆಯ ಅನ್ನದಾತರು
Last Updated 4 ಮೇ 2018, 9:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಲೋಕದೊಳೇನೆ ನಡೆಯುತಲಿದ್ದರೂ ತನ್ನೀ ಕಾಯಕ ಬಿಡನೆಂದೂ... ಉಳುವಾ ಯೋಗಿಯ ನೋಡಲ್ಲಿ’ ಎಂಬ ಕವಿ ಕುವೆಂಪುರವರ ಮಾತು ಸತ್ಯ. ಸದ್ಯ ತಾಲ್ಲೂಕಿನಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದ್ದರೂ ಸಹ ರೈತರು ಮಾತ್ರ ತಮಗೆ ಏನೂ ಸಂಬಂಧ ಇಲ್ಲ ಎನ್ನುವಂತೆ ಮುಂಗಾರು ಹಂಗಾಮಿಗಾಗಿ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರತಿ ವರ್ಷ ಯುಗಾದಿ ಪಾಡ್ಯದ ದಿನ ಬಿತ್ತನೆಗಾಗಿ ಭೂಮಿ ತಯಾರಿ ನಡೆಸುವುದು ವಾಡಿಕೆ. ಹೀಗಾಗಿ ಅಂದು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ರೈತರು ‘ಈ ವರ್ಷವಾದರೂ ಒಳ್ಳೆ ಮಳೆ ಬೆಳೆ ಕೊಡು ದೇವರೇ’ ಎಂದು ಪ್ರಾರ್ಥಿಸಿ ರಂಟೆ ಹೊಡೆಯುವ, ಹರಗುವ ಹಾಗೂ ತಿಪ್ಪೆ ಗೊಬ್ಬರ ಹೇರುವ ಕೆಲಸಗಳಲ್ಲಿ ತೊಡಗುತ್ತಾರೆ. ಅದರಂತೆ ಈ ವರ್ಷವೂ ರೈತರು ಮಾಗಿ ಉಳುಮೆ ಮಾಡುವಲ್ಲಿ ನಿರತರಾಗಿದ್ದಾರೆ.

ಈ ವರ್ಷ ಬಿಸಿಲಿನ ತಾಪ ಹೆಚ್ಚಿರುವುದರಿಂದ ರೈತರು ನಸುಕಿನಲ್ಲಿಯೇ ಹೊಲಗಳಿಗೆ ತೆರಳಿ ರಂಟಿ ಹೊಡೆದು, ಹರಗಿ, ಕಸಕಡ್ಡಿ ಆರಿಸುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ರಾಸಾಯನಿಕ ಗೊಬ್ಬರದಿಂದ ಆಗುವ ಅನಾಹುತಗಳನ್ನು ಅರಿತ ರೈತರು ಹೊಲಗಳಿಗೆ ತಿಪ್ಪೆ ಗೊಬ್ಬರವೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಈಗ ತಿಪ್ಪೆ ಗೊಬ್ಬರಕ್ಕೂ ಸಾಕಷ್ಟು ಡಿಮ್ಯಾಂಡ್‌ ಬಂದಿದ್ದು ಬೆಲೆಯೂ ಗಗನಕ್ಕೇರಿದೆ.

ತಾಲ್ಲೂಕಿನಲ್ಲಿ ಅಂದಾಜು 70 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶ ಇದ್ದು ಅದರಲ್ಲಿ ಮಸಾರಿ ಹಾಗೂ ಎರೆ ಭೂಮಿ ಇದೆ. ಮುಂಗಾರು ಹಂಗಾಮಿನಲ್ಲಿ ಮಸಾರಿ ಭೂಮಿಯಲ್ಲಿ ಹೆಸರು, ಅಲಸಂದಿ, ಬಿಟಿ ಹತ್ತಿ, ಬಳ್ಳಿಶೇಂಗಾ, ಎಳ್ಳು, ಹೈಬ್ರಿಡ್‌ ಜೋಳ, ಸೂರ್ಯಕಾಂತಿಗಳನ್ನು ಬೆಳೆದರೆ ಕಪ್ಪು ಮಣ್ಣಿನ ಹೊಲಗಳಲ್ಲಿ ಹೆಸರು, ಈರುಳ್ಳಿ, ಬೆಳ್ಳುಳ್ಳಿ, ಹವೀಜ, ಮೆಣಸಿನಕಾಯಿ ಬೆಳೆಯುತ್ತಾರೆ.

ಹಿಂದೆ ರೈತರು ತಮಗೂ ಹಾಗೂ ತಮ್ಮ ದನ ಕರುಗಳಿಗೂ ಆಹಾರ ಒದಗಿಸುತ್ತಿದ್ದ ಏಕದಳ ಧಾನ್ಯಗಳಾದ ಜೋಳ, ಸಜ್ಜೆ, ನವಣೆ, ಹುಳ್ಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆಗ ರೈತನ ಹೊಟ್ಟೆ ತುಂಬುವುದರ ಜೊತೆಗೆ ದನ ಕರುಗಳ ಹೊಟ್ಟೆಯೂ ತುಂಬುತ್ತಿತ್ತು.

ಆದರೆ ಒಂದೂವರೆ ದಶಕದಿಂದ ಬಿಟಿ ಹತ್ತಿ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಏಕದಳ ಧಾನ್ಯಗಳು ಒಂದೊಂದಾಗಿ ಮೂಲೆ ಗುಂಪಾಗುತ್ತಿವೆ.

‘ಮದ್ಲ ನಾವು ಜ್ವಾಳ, ನವಣಿ, ಸಜ್ಜಿ ಬೆಳಿತಿದ್ವಿ. ಆದರ ಅದಕ್ಕ ರೇಟ್‌ ಇರಂಗಿಲ್ಲ. ಹಿಂಗಾಗಿ ಬಿಟಿ ಹತ್ತಿ ಬೆಳ್ಯಾಕತ್ತೇವಿ’ ಎಂದು ರಾಮಗಿರಿ ಗ್ರಾಮದ ಪ್ರಗತಿಪರ ರೈತ ಶಂಕ್ರಣ್ಣ ಕಾಳೆ ಹೇಳುತ್ತಾರೆ.

ಬಿತ್ತನೆ ಬೀಜ: ಹಿಂದೆ ರೈತರು ತಾವು ಬಿತ್ತನೆ ಮಾಡಬೇಕಿದ್ದ ಬೀಜಗಳನ್ನು ತಾವೆ ಬೆಳೆಯುತ್ತಿದ್ದ ಫಸಲಿನಿಂದ ಗುಣಮಟ್ಟದ ಬೀಜಗಳನ್ನು ಮುಂದಿನ ಹಂಗಾಮಿಗಾಗಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಆದರೆ ಬೀಜ ಮಾರಾಟ ನಿಗಮ ಅಸ್ತಿತ್ವಕ್ಕೆ ಬಂದಾಗಿನಿಂದ ರೈತರು ಸರ್ಕಾರ ವಿತರಿಸುವ ರಿಯಾಯ್ತಿ ದರದ ಬೀಜಕ್ಕಾಗಿ ಕಾಯುತ್ತಿದ್ದಾರೆ. ಆದರೂ ಅಲ್ಲೊಬ್ಬ ಇಲ್ಲೊಬ್ಬ ರೈತರು ಬಿತ್ತನೆ ಬೀಜಗಳನ್ನು ಈಗಲೂ ತಾವೇ ಸಂಗ್ರಹಿಸುತ್ತಾರೆ.

ಸಮೀಪದ ಅಡರಕಟ್ಟಿ ಗ್ರಾಮದ ಸಾಕಷ್ಟು ರೈತರು ಈರುಳ್ಳಿ ಬಿತ್ತನೆ ಬೀಜವನ್ನು ವೈಜ್ಞಾನಿಕವಾಗಿ ಬೆಳೆದು ಮಾರಾಟ ಮಾಡಿ ಅದರಿಂದ ಲಾಭವನ್ನೂ ಗಳಿಸುತ್ತಾರೆ ಎಂಬುದು ವಿಶೇಷ.

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT