ರಾಷ್ಟ್ರಪ್ರೇಮಿಗಳು ಗೆಲ್ಲಬೇಕೋ, ಜಿಹಾದಿಗಳು ಗೆಲ್ಲಬೇಕೋ ನಿರ್ಧರಿಸಿ

7
ಬೇಲೂರು: ಬಿಜೆಪಿ ಅಭ್ಯರ್ಥಿ ಪರ ಯೋಗಿ ಆದಿತ್ಯನಾಥ್‌ ಪ್ರಚಾರ; ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ

ರಾಷ್ಟ್ರಪ್ರೇಮಿಗಳು ಗೆಲ್ಲಬೇಕೋ, ಜಿಹಾದಿಗಳು ಗೆಲ್ಲಬೇಕೋ ನಿರ್ಧರಿಸಿ

Published:
Updated:
ರಾಷ್ಟ್ರಪ್ರೇಮಿಗಳು ಗೆಲ್ಲಬೇಕೋ, ಜಿಹಾದಿಗಳು ಗೆಲ್ಲಬೇಕೋ ನಿರ್ಧರಿಸಿ

ಬೇಲೂರು: ‘ಕರ್ನಾಟಕದ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ರಾಷ್ಟ್ರಪ್ರೇಮಿಗಳು ಗೆಲ್ಲಬೇಕೋ ಅಥವಾ ಜಿಹಾದಿಗಳು ಗೆಲ್ಲಬೇಕೋ ಎಂಬುದನ್ನು ಮತದಾರರೇ ತೀರ್ಮಾನಿಸಬೇಕು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

ಹಳೇಬೀಡು ರಸ್ತೆಯ ಸೋಂಪುರದ ಬಳಿ ಗುರುವಾರ ಇಲ್ಲಿನ ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಪರ ಪ್ರಚಾರ ಭಾಷಣ ಮಾಡಿದ ಅವರು ‘ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಜಿಹಾದಿ ತತ್ವಗಳನ್ನು ಅಳವಡಿಸಿಕೊಂಡಿರುವುದು ದೇಶದ ಭದ್ರತೆಗೆ ಧಕ್ಕೆಯುಂಟು ಮಾಡಿದೆ. ಚುನಾವಣೆಯಲ್ಲಿ ರಾಷ್ಟ್ರಪ್ರೇಮಿಗಳ ಸರ್ಕಾರ ಬೇಕೋ ಅಥವಾ ಒವೈಸಿ, ಯಾಸಿನ್‌ ಭಟ್ಕಳ್‌ ಅಂತಹವರಿಗೆ ಬೆಂಬಲ ನೀಡುತ್ತಿರುವ ಸರ್ಕಾರ ಬೇಕೇ ಎಂಬುದನ್ನು ಜನರೇ ನಿರ್ಧರಿಸಲಿ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ರೈತ ವಿರೋಧಿ, ಯುವಜನರ ವಿರೋಧಿ ಸರ್ಕಾರವಾಗಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ 86 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿತು.

ಐದು ವರ್ಷ ಆಳ್ವಿಕೆ ನಡೆಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಇದು ಏಕೆ ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. 23 ಹಿಂದೂ ಯುವಕರ ಹತ್ಯೆಯಾಗಿದೆ. ಇದನ್ನು ತಡೆಗಟ್ಟಲು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.

‘ಕರ್ನಾಟಕ ಮತ್ತು ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದರೆ, ಕರ್ನಾಟಕದಲ್ಲಿ ರಾಮ ಭಕ್ತ ಹನುಮಂತನ ಜನನವಾಯಿತು. ಉತ್ತರಪ್ರದೇಶದ ಗೋರಕ್‌ನಾಥರು ಕರ್ನಾಟಕದಲ್ಲಿ ಮಂಜುನಾಥನ ಅವತಾರದಲ್ಲಿದ್ದಾರೆ. ಹನುಮಂತ, ಕಾಲಭೈರವ, ಮಂಜುನಾಥ ಎಲ್ಲರೂ ಕರ್ನಾಟಕದಲ್ಲಿದ್ದಾರೆ’ ಎಂದು ಬಣ್ಣಿಸಿದರು.

ಶಾಸಕ ಸಿ.ಟಿ. ರವಿ ಮಾತನಾಡಿ, ‘ನೀವು ಬಿಜೆಪಿಗೆ ಹಾಕುವ ಮತ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. 1 ಸ್ಥಾನ ಕಡಿಮೆಯಾದರೂ ಕಳ್ಳ–ಮಳ್ಳರು ಒಂದಾಗುತ್ತಾರೆ. ಕಳ್ಳ–ಮಳ್ಳರ ಆಡಳಿತ ಬೇಡ ಎಂದರೆ, ಬಿಜೆಪಿಗೆ ಮತ ನೀಡಿ’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್‌, ಬೇಲೂರು ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌, ಮುಖಂಡರಾದ ಇ.ಎಚ್.ಲಕ್ಷ್ಮಣ್‌, ನವಿಲೆ ಅಣ್ಣಪ್ಪ, ರೇಣುಕುಮಾರ್‌, ಬಿ.ವಿ.ಕರಿಗೌಡ, ಜಿ.ಕೆ.ಕುಮಾರ್‌, ಅಭಿಗೌಡ, ಶೋಭಾ ಗಣೇಶ್‌, ಅಮಿತ್‌ ಶೆಟ್ಟಿ ಇದ್ದರು.

ಲ್ಯಾಂಡಿಂಗ್‌ಗೆ ಅಡ್ಡಿಯಾದ ಮಳೆ

ಬೇಲೂರು: ಚುನಾವಣಾ ಪ್ರಚಾರಕ್ಕೆಂದು ಬಾಳೆಹೊನ್ನೊರಿನಿಂದ ಬೇಲೂರಿಗೆ ಬಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿದ್ದ ಹೆಲಿಕಾಪ್ಟರ್‌ ಭಾರಿ ಮಳೆಯ ಕಾರಣ 10 ನಿಮಿಷ ತಡವಾಗಿ ಲ್ಯಾಂಡಿಂಗ್‌ ಆಯಿತು.

ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಸಂಜೆ ಇಳಿಯಬೇಕಾಗಿತ್ತು. ಕಾಲೇಜು ಬಳಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ಈ ಕಾರಣ ಹೆಲಿಕಾಪ್ಟರ್‌ ಅನ್ನು ಹಾಸನ ರಸ್ತೆಯ ಬಳಿ ಸುಮಾರು 10 ನಿಮಿಷಗಳ ಕಾಲ ಸುತ್ತಾಡಿಸಲಾಯಿತು.

ಮಳೆ ಕಡಿಮೆಯಾದ ಬಳಿಕ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಆಯಿತು. ವೈಡಿಡಿ ಕಾಲೇಜು ಬಳಿ ಭಾರಿ ಮಳೆ, ಬೇಲೂರು ಪಟ್ಟಣದಲ್ಲಿ ಸಾಧಾರಣ ಮಳೆ ಸುರಿಯಿತಾದರೂ ಯೋಗಿ ಆದಿತ್ಯನಾಥ್‌ ಅವರ ಕಾರ್ಯಕ್ರಮ ಆಯೋಜಿಸಿದ್ದ ಹಳೇಬೀಡು ರಸ್ತೆಯ ಸೋಂಪುರ ಬಳಿ (ಹೆಲಿಪ್ಯಾಡ್‌ನಿಂದ 5 ಕಿ.ಮೀ.) ಒಂದು ಹನಿ ಮಳೆಯೂ ಬರಲಿಲ್ಲ.

ಇದು ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯುಂಟು ಮಾಡಲಿಲ್ಲ. ವೇದಿಕೆಯ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬ್ಲಾಕ್‌ ಕ್ಯಾಟ್‌ ಕಮಾಂಡೊಗಳು ವೇದಿಕೆಯನ್ನು ಸುತ್ತುವರಿದಿದ್ದರು. ‘ಬೇಲೂರಿನ ಮಹಾ ಜನತೆಗೆ ಆದರಪೂರ್ವಕ ನಮಸ್ಕಾರಗಳು’ ಎಂದು ಯೋಗಿ ಆದಿತ್ಯನಾಥ್‌ ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry