ಶುಕ್ರವಾರ, ಮಾರ್ಚ್ 5, 2021
29 °C
ಗಮನ ಸೆಳೆದ ಮತದಾನ ಜಾಗೃತಿ ಮೂಡಿಸುವ ವ್ಯಂಗ್ಯ ಚಿತ್ರಗಳು

ಮತದಾನ ಜಾಗೃತಿಗೆ ದೋಸೆ ಹಾಕಿದ ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಜಾಗೃತಿಗೆ ದೋಸೆ ಹಾಕಿದ ಡಿಸಿ

ಹಾವೇರಿ: ಕಾದ ಹೆಂಚಿಗೆ ಎಣ್ಣೆ ಸವರಿ, ಹಿಟ್ಟಿನಲ್ಲಿ ‘ಮತದಾನ ಜಾಗೃತಿ’ ಎಂದು ದೋಸೆ ಹಾಕುವ ಮೂಲಕ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಗುರುವಾರ ಮತದಾನ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಗುರುವಾರ ಶಿಕ್ಷಕ ನಾಮದೇವ ಕಾಗದಗಾರ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಅಕ್ಷರ ದೋಸೆ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಪ್ರತಿಯೊಬ್ಬ ಮತದಾರರು ಮೇ 12ರಂದು ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಸದೃಢತೆಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಪ್ರಮಾಣ ಶೇ 71ರಷ್ಟಿದ್ದು, ಈ ಬಾರಿ ಶೇ 80ಕ್ಕೂ ಅಧಿಕ ಪ್ರಮಾಣದಲ್ಲಿ ಆಗಬೇಕು. ಸ್ವೀಪ್ ಸಮಿತಿಯು ಹಲವು ಕಾರ್ಯಕ್ರಮಗಳ ಮೂಲಕ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಆಕರ್ಷಕ ವ್ಯಂಗ್ಯ ಚಿತ್ರಗಳು:

ಪ್ರಜಾಪ್ರಭುತ್ವ ಹಾಗೂ ನಿನ್ನ ಭವಿಷ್ಯ ಎರಡೂ ನಿನ್ನ ಬೆರಳ ತುದಿಯಲ್ಲಿದೆ, ಹೋಗು ಮೊದಲು ಓಟ ಮಾಡು, ಸಮೃದ್ಧ ನಾಡು ಕಟ್ಟಲು ಮತದಾನವೇ ಪ್ರಬಲ ಅಸ್ತ್ರ. ಅದನ್ನು ವಿವೇಚನೆಯಿಂದ ಬಳಸಿ, ಭ್ರಷ್ಟಾಚಾರ ತಡೆಯಲು ಯೋಗ್ಯರಿಗೆ ಮತ ಚಲಾಯಿಸಿ, ಚುನಾವಣೆಯಲ್ಲಿ ಅತ್ಯುತ್ತಮ ನಾಗರಿಕರಂತೆ ವರ್ತಿಸಬೇಕು, ಯಾವುದೇ ಆಮಿಷಗಳಿಗೆ ಒಳಗಾಗದೆ ಸಂವಿಧಾನದ ಉಳಿವಿಗಾಗಿ ಕಡ್ಡಾಯವಾಗಿ ಮತ ಚಲಾಯಿಸಿ ಎಂಬಿತ್ಯಾದಿ ಸಂದೇಶ ಸಾರುವ ವ್ಯಂಗ್ಯ ಚಿತ್ರಗಳು ಗಮನ ಸೆಳೆದವು.

ದೋಸೆ ಜಾಗೃತಿ:

ಅಕ್ಷರ ದಾಸೋಹ ಕಾರ್ಯಕರ್ತರು ದೋಸೆಯಲ್ಲಿ ‘ನಮ್ಮ ಮತ, ನಮ್ಮ ಹಕ್ಕು’, ‘ವಿವೇಚನೆಯಿಂದ ಹಾಕಿದ ಮತ ದೇಶಕ್ಕೆ ಹಿತ’, ‘ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ’ ಎಂಬಿತ್ಯಾದಿ ಬರೆದರು. ಇದನ್ನು ನೋಡಲು ಜನ ಮುಗಿಬಿದ್ದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಾಫರ್‌, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್‌.ರಂಗನಾಥ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಅಕ್ಷರ ದಾಸೋಹ ಸಹಾಯ ನಿರ್ದೇಶಕಿ ಎಸ್‌.ಎಸ್‌.ಅಡಿಗ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿರಿ ಎ.ಜಿ.ಪಾಟೀಲ, ಸುರೇಖಾ ಬಿ.ಎನ್‌., ಟಿ.ಎಸ್‌.ಮಲ್ಲಾಡದ, ಬಿ.ಎಂ.ಅಂಗಡಿ, ಎಚ್‌.ಎನ್‌.ಮೆಳ್ಳಿ, ಎಸ್‌.ಎನ್‌.ಬಡಿಗೇರ ಇದ್ದರು.

ಜಾಗೃತಿ ಮೂಡಿಸುವ ವ್ಯಂಗ್ಯ ಚಿತ್ರಗಳು

‘ನಿಮ್ಮ ಬೆರಳಿಗೆ ಇಂಕು ಪ್ರಜಾಪ್ರಭುತ್ವಕ್ಕೆ ಲಿಂಕು, ನಾವು ಜಾಗೃತ ಮತದಾರರು ಆಮಿಷಗಳಿಗೆ ಬಲಿಯಾಗದೇ ಮತ ಹಾಕುತ್ತೇವೆ, ಓಟಿಗಾಗಿ ನೋಟು ಬೇಡ, ವಿವೇಚನೆಯಿಂದ ಮತ ಚಲಾಯಿಸುತ್ತೆವೆ’ ಎಂಬಿತ್ಯಾದಿ ಸಂದೇಶಗಳನ್ನು ಒಳಗೊಂಡ ಮತದಾನದ ಜಾಗೃತಿ ಮೂಡಿಸುವ ಶಿಕ್ಷಕ ನಾಮದೇವ ಕಾಗದಗಾರ ಅವರ ವ್ಯಂಗ್ಯ ಚಿತ್ರಗಳು ಜನರ ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.