ಶುಕ್ರವಾರ, ಮಾರ್ಚ್ 5, 2021
29 °C

ಎಂಥ ಸಾವು ಮಾರಾಯ್ರೆ!

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಎಂಥ ಸಾವು ಮಾರಾಯ್ರೆ!

ಚಿತ್ರ: ಬೂತಯ್ಯನ ಮೊಮ್ಮಗ ಅಯ್ಯು

ನಿರ್ಮಾಪಕ: ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್

ನಿರ್ದೇಶನ: ನಾಗರಾಜ್ ಪೀಣ್ಯ

ತಾರಾಗಣ: ಚಿಕ್ಕಣ್ಣ, ತಬಲಾ ನಾಣಿ, ಶ್ರುತಿ ಹರಿಹರನ್, ರಾಕ್‌ಲೈನ್‌ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಬುಲೆಟ್ ಪ್ರಕಾಶ್, ಪ್ರಶಾಂತ ಸಿದ್ದಿ, ಗಿರಿಜಾ ಲೋಕೇಶ್

ಒಂದು ಗಟ್ಟಿಯಾದ ಚಿತ್ರಕಥೆ ರೂಪಿಸಿ, ಆ ಕಥೆಯಲ್ಲಿನ ಪಾತ್ರಗಳಿಗೆ ಸರಿಹೊಂದುವಂಥ ನಟರನ್ನು ಆಯ್ದು ಸಿನಿಮಾ ತಯಾರಿಸುವುದು ಕ್ರಮ. ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕ್ರಮವೂ ಗಾಂಧಿನಗರದಲ್ಲಿದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಒಂದಿಷ್ಟು ನಟರನ್ನು ಗುಡ್ಡೆ ಹಾಕಿಕೊಂಡು, ನಂತರ ಅವರಿಗೆಲ್ಲರಿಗೂ ಒಂದೊಂದು ಪಾತ್ರ ಸೃಷ್ಟಿಸಿ ‘ಕ್ಯಾಮೆರಾ ಎದ್ರು ಏನಾದ್ರೂ ಮಾಡ್ಕೊಳ್ಳಿ’ ಎಂದು ಬಿಟ್ಟುಬಿಡುವುದು. ತುಸು ವಕ್ರವಾಗಿ ಇದನ್ನು ಸಿನಿಮಾ ಅಕ್ರಮ ಎಂದೂ ಹೇಳಬಹುದು! ಇದಕ್ಕೆ ಒಳ್ಳೆಯ ಉದಾಹರಣೆ ‘ಬೂತಯ್ಯನ ಮೊಮ್ಮಗ ಅಯ್ಯು’.

ಬೂತಯ್ಯನ ಮೊಮ್ಮಗ ಅಯ್ಯುವಿಗೆ ಮದುವೆಯ ಆತುರ. ಆದರೆ ಅವನ ಜತೆಗೇ ಹುಡುಗಿ ನೋಡಲು ಹೋಗುವ ಮಾವ ಎಲ್ಲ ಕಡೆಗಳಲ್ಲಿಯೂ ತನ್ನ ಎಡಬಿಡಂಗಿತನದಿಂದ ಮದುವೆ ತಪ್ಪಿಸುತ್ತಿರುತ್ತಾನೆ. ಈಗ ಕೊನೆಯ ಪ್ರಯತ್ನವಾಗಿ ನೂರನೇ ಹೆಣ್ಣನ್ನು ನೋಡಲು ಮಾವ ಮತ್ತು ಅಳಿಯ ಹೊರಟಿದ್ದಾರೆ. ಇದು ಒಂದು ಎಳೆ. ಇನ್ನೊಂದು ಕಡೆ ಬಡ್ಡಿ ಮುನಿಯಪ್ಪನ ಸಾವಿನ ಪ್ರಹಸನ. ಊರಿನ ತುಂಬೆಲ್ಲ ಬಡ್ಡಿಗೆ ಹಣ ಕೊಟ್ಟಿರುವ ಮುನಿಯಪ್ಪ, ಆಕಸ್ಮಿಕವಾಗಿ ನಿದ್ದೆ ಔಷಧ ಕುಡಿದು ಗಾಢನಿದ್ದೆಗೆ ಜಾರುತ್ತಾನೆ. ಅವನು ಸತ್ತೇ ಹೋಗಿದ್ದಾನೆ ಎಂದು ತಿಳಿದುಕೊಂಡು ಊರಿನವರೆಲ್ಲರೂ ಅವನ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಾರೆ. ಈ ಸಾವಿನ ಪ್ರಹಸನವೂ ಅಯ್ಯುವಿನ ಹೆಣ್ಣು ನೋಡುವ ಸನ್ನಿವೇಶವೂ ಪ್ರತ್ಯೇಕವಾಗಿಯೇ ಸಾಗುತ್ತವೆ. ಏರಿಗೇರಿದ ಎತ್ತನ್ನೂ ನೀರಿಗಿಳಿದ ಕೋಣವನ್ನೂ ಎಳೆದುತಂದು ಒಂದು ಬಂಡಿಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಹೆಣ್ಣಿನ ಸೊಂಟ ಮತ್ತು ಗಂಡಿನ ತೀಟೆ ಇವೆರಡೇ ಹಾಸ್ಯ ಹುಟ್ಟಿಸುವ ಸಂಗತಿಗಳು ಎಂಬ ಗಾಂಧಿನಗರದ ಹಳಸಲು ಮೂಢನಂಬಿಕೆಗೆ ಈ ಚಿತ್ರದ ಹಲವು ಸನ್ನಿವೇಶಗಳು ನಿದರ್ಶನವಾಗುವಂತಿವೆ. ಎಲ್ಲ ಪಾತ್ರಗಳೂ ಕೇಳುಗರ ಕರ್ಣಪಟಲದ ಮೇಲೆ ಆಜನ್ಮ ವೈರ ಇಟ್ಟುಕೊಂಡವರಂತೆ ವಿಪರೀತ ಕಿರುಚುತ್ತಾರೆ. ಈ ಅರಚಾಟ ಎಷ್ಟು ಪರಿಣಾಮಕಾರಿ ಆಗಿದೆಯೆಂದರೆ ಮಧ್ಯಂತರದ ಹೊತ್ತಿಗೆಲ್ಲ ತೆರೆಯ ಮೇಲಿನ ಸಾವಿನ ಮನೆಯೆದುರಿನ ತಮಟೆ ನಮ್ಮ ತಲೆಯೊಳಗೂ ಸಿಡಿಯಲಾರಂಭಿಸುತ್ತದೆ.

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಸಿನಿಮಾಗೂ ಈ ಮೊಮ್ಮಗನಿಗೂ ಶೀರ್ಷಿಕೆಯ ಜನಪ್ರಿಯತೆಯನ್ನು ಬಳಸಿಕೊಳ್ಳುವ ತಂತ್ರದ ಹೊರತಾದ ಯಾವ ಸಂಬಂಧವೂ ಇಲ್ಲ. ಗಟ್ಟಿಯಾದ ಪೋಷಣೆ, ತಾರ್ಕಿಕ ನೆಲೆಗಟ್ಟಿಲ್ಲದೆ ಎಲ್ಲ ಪಾತ್ರಗಳೂ ಹೆಂಡ ಕುಡಿದ ಮಂಗಗಳಂತೆ ಬಂದು ಬಂದು ಕುಣಿದು ಹೋಗುತ್ತವೆ. ಬೀಸುವ ಗಾಳಿಗೆ ಚಿಂದಿ ಕಾಗದಗಳು ಹಾರಾಡುವಂತೆ ಚಿತ್ರಕಥೆ ಎತ್ತಲಿಂದೆತ್ತಲೋ ಹಾರಾಡುತ್ತದೆ. ಮತ್ತದೇ ಕೊಚ್ಚೆಯಲ್ಲಿ ಬಿದ್ದು ನರಳುತ್ತದೆ.

ಒಂದು ಸುಳ್ಳು ಸಾವಿನ ಸುತ್ತ ಇಡೀ ಸಿನಿಮಾ ಹೆಣೆಯಲಾಗಿದೆ. ಅದು ಎಷ್ಟು ಕಿರಿಕಿರಿ ಹುಟ್ಟಿಸುತ್ತದೆ ಎಂದರೆ, ‘ಎಂಥ ಸಾವು ಮಾರಾಯ್ರೆ’ ಎಂದು ಶಪಿಸುತ್ತಾ ಚಿತ್ರಮಂದಿರದಿಂದ ಆಚೆಬರುವಂತೆ ಮಾಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.