ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣಿಸದೇ ನಿಮಗೀಗ ಶಿಥಿಲ ಸೇತುವೆ?

ಟೋಲ್‌ ರಸ್ತೆಗಿಲ್ಲ ನೀರುಣಿಸುವ ಭಾಗ್ಯ, ದೂಳಿನ ಮಜ್ಜನಕ್ಕೆ ಬಸವಳಿದ ಜನ
Last Updated 4 ಮೇ 2018, 10:11 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐನೋಳ್ಳಿ ಮತ್ತು ದೇಗಲಮಡಿ ಕ್ರಾಸ್‌ ಮಧ್ಯೆ ಇರುವ ಸೇತುವೆ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿಯುವ ಅಪಾಯವಿದೆ. ಇದರಿಂದಾಗಿ ನಿತ್ಯವೂ ಈ ಮಾರ್ಗದಲ್ಲಿ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾಗಿದೆ.

ರಾಜ್ಯ ಹೆದ್ದಾರಿ 15ರಲ್ಲಿ ಬರುವ ಚಿಂಚೋಳಿ ಬೀದರ್‌ ಮಾರ್ಗದ ಈ ಸೇತುವೆಯನ್ನು 1970ರ ದಶಕದಲ್ಲಿ ನಿರ್ಮಿಸಲಾಗಿದೆ. ಚಂದ್ರಂಪಳ್ಳಿ ಜಲಾಶಯದ ಹೆಚ್ಚುವರಿ ನೀರು ಹರಿದು ಹೋಗುವ ‘ಸರಳಾ ನದಿ’ಗಾಗಿ ಈ ಸೇತುವೆ ನಿರ್ಮಿಸಲಾಗಿದೆ. ಸದ್ಯ ಮೇಲ್ಭಾಗದಲ್ಲಿ ಸಿಮೆಂಟ್‌ ಕುಸಿದರೆ, ಕೆಳಭಾಗದಲ್ಲಿ ಸಿಮೆಂಟ್‌ ಕಾಂಕ್ರೀಟ್‌ ಬೆಡ್‌ ಪುಡಿಪುಡಿಯಾಗಿದೆ. ಇದರಿಂದ ಕಬ್ಬಿಣದ ರಾಡುಗಳು ಗೋಚರಿಸುತ್ತಿದ್ದು, ಅವುಗಳ ಸಂದಿಯಿಂದ ಸೂರ್ಯನ ಕಿರಣಗಳು ಇಣುಕುವ ಸ್ಥಿತಿ ತಲುಪಿದೆ.

ಮಾತ್ರವಲ್ಲ, ಈ ಸೇತುವೆ ಅಪಾಯದಲ್ಲಿದೆ ಎಂಬ ಸೂಚನಾ ಫಲಕಗಳನ್ನೂ ಹಾಕಲಾಗಿದೆ. ಎಲ್ಲೆಲ್ಲಿ ಕುಸಿತ ಕಂಡಿದೆಯೋ ಅಲ್ಲೆಲ್ಲ ಇಂಥ ಅಪಾಯದ ಸೂಚನೆಗಳು ಕಾಣಿಸುತ್ತವೆ. ಆದರೆ, ಇದರಿಂದ ಪಾರಾಗುವ ಉಪಾಯವನ್ನು ಮಾತ್ರ ಇದೂವರೆಗೂ ಕಂಡುಕೊಂಡಿಲ್ಲ.

ಇನ್ನೊಂದೆಡೆ, ಇದರ ಗುತ್ತಿಗೆ ಪಡೆದ ಸಂಸ್ಥೆ ನದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯ ಸುರಕ್ಷತಾ ಸಲಹೆಗಾರರಾದ ಲೀ ಸಂಸ್ಥೆಯ ಅಧಿಕಾರಿ ಬಸವರಾಜ ಅವರು ಸ್ಥಳ ತಪಾಸಣೆ ನಡೆಸಿದ್ದಾರೆ. ಪರ್ಯಾಯ ರಸ್ತೆ ನಿರ್ಮಾಣವಾದ ಮೇಲೆ ಸೇತುವೆಯ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಸ್ತೆ ಸ್ಥಿತಿಯೂ ಅಧೋಗತಿ: ₹ 216 ಕೋಟಿ ಅಂದಾಜು ವೆಚ್ಚದಲ್ಲಿ ಚಿಂಚೋಳಿಯಿಂದ ಬೀದರ್‌ವರೆಗಿನ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಡಿಪಿ ಜೈನ್‌ ಕಂಪನಿ ಇದನ್ನು ಗುತ್ತಿಗೆ ಪಡೆದಿದೆ. ಅಂದಾಜು 65 ಕಿ.ಮೀ. ರಸ್ತೆಯ ಪೈಕಿ, 10 ಮೀಟರ್‌ ಅಗಲದ 2.5 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.ಆದರೆ, ಅಲ್ಲಿಂದ ಮುಂದೆ ರಸ್ತೆ ತುಂಬ ಹಾಳಾಗಿದ್ದು, ಈ ಕಾಮಗಾರಿಯ ವೇಗ ಮತ್ತು ಗುಣಮಟ್ಟದ ಬಗ್ಗೆ ಸ್ಥಳೀಯರು ಚೆಕಾರವೆತ್ತಿದ್ದಾರೆ. ಇದರ ಮಧ್ಯೆ ಕಳೆದ ಮೂರು ವಾರಗಳಿಂದ ಮುರುಮ್‌ ರಸ್ತೆಗೆ ನೀರುಣಿಸದ ಕಾರಣ ರಸ್ತೆಯ ತುಂಬ ದೂಳು ಹರಡುತ್ತಿದೆ. ಮಧ್ಯಾಹ್ನ ಕೂಡ ವಾಹನಗಳು ದೀಪ ಹಚ್ಚಿಕೊಂಡು ಚಲಿಸುವ ಮಟ್ಟಿಗೆ ಇಲ್ಲಿ ದೂಳು ಆವರಿಸಿಕೊಳ್ಳುತ್ತದೆ!

**
ಯೋಜನಾ ವರದಿಯಲ್ಲಿ ಇರುವಂತೆ ಹಾಲಿ ಸೇತುವೆಯ ಸಿಮೆಂಟ್‌ ಕಾಂಕ್ರೀಟ್‌ ಬೆಡ್‌ ಕಿತ್ತು, ಹೊಸದಾಗಿ ಬೆಡ್‌ ಹಾಕಲು ಪ್ರಸ್ತಾವ ಸಲ್ಲಿಸಲಾಗಿದೆ
– ಬಸವರಾಜ, ಲೀ ಸಂಸ್ಥೆಯ ಅಧಿಕಾರಿ

**
ಚಿಂಚೋಳಿಯಿಂದ ದೇಗಲಮಡಿವರೆಗೆ ಮತ್ತು ಬದಗಲ್‌ ಬಳಿ ರಸ್ತೆ ತುಂಬ ದೂಳೆದ್ದು ಜನರಿಗೆ ತೀವ್ರ ತೊಂದರೆಯಾಗಿದೆ. ಏಪ್ರಿಲ್‌ನಿಂದ ನೀರುಣಿಸಿಲ್ಲ
– ಮಲ್ಲಿಕಾರ್ಜುನ ಪರೀಟ್‌, ದೇಗಲಮಡಿ ನಿವಾಸಿ

**
ದೂಳಿನಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ರಸ್ತೆಗೆ ಶೀಘ್ರ ನೀರು ಸಿಂಪಡಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು
– ಸಚ್ಚಿದಾನಂದ ಸಿಂಗ್‌, ವ್ಯವಸ್ಥಾಪ, ಡಿಪಿ ಜೈನ್‌ ಕಂಪನಿ 
**

 

ಜಗನ್ನಾಥ ಡಿ. ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT