ಶುಕ್ರವಾರ, ಫೆಬ್ರವರಿ 26, 2021
28 °C
ಮತದಾರರ ಜಾಗೃತಿ ಅಭಿಯಾನದಲ್ಲಿ ಬಹುಭಾಷಾ ನಟ ಪ್ರಕಾಶ್‌ ರೈ ಹೇಳಿಕೆ

ರಾಜಕೀಯ ಪಕ್ಷ ಸೇರಿದ್ದರೆ ಹಾಳಾಗುತ್ತಿದ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಪಕ್ಷ ಸೇರಿದ್ದರೆ ಹಾಳಾಗುತ್ತಿದ್ದೆ

ಕುಷ್ಟಗಿ: ‘ಪ್ರಸಕ್ತ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ. ನಾನೂ ಹಾಳಾಗಿ ಹೋಗುತ್ತೇನೆ ಎಂಬ ಕಾರಣಕ್ಕೆ ಯಾವುದೇ ರಾಜಕೀಯ ಪಕ್ಷ ಸೇರಿಲ್ಲ’  ಎಂದು ನಟ ಪ್ರಕಾಶ್‌ ರೈ ಹೇಳಿದರು.

ಬುಧವಾರ ಇಲ್ಲಿ ನಡೆದ ಜನಾಂದೋಲನ ಮಹಾಮೈತ್ರಿ ಸಂಘಟನೆ ವತಿಯಿಂದ ಸಂವಿಧಾನ ಉಳಿಸುವತ್ತ ಮತದಾರರ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ದೇಶದ ಉದ್ಧಾರಕ್ಕಾಗಿ ಜನರ ಬಳಿ ನಿಂತುಕೊಂಡು ಅಧಿಕಾರದ ಗದ್ದುಗೆ ಏರಿದವರನ್ನು ಪ್ರಶ್ನಿಸುವ ಶಕ್ತಿಯನ್ನು ಜನರಲ್ಲಿ ತುಂಬುವ ಕೆಲಸದಲ್ಲಿ ತೊಡಗಿದ್ದೇನೆ. ಮುಂದೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಮಸ್ಯೆಗಳ ವಿರುದ್ಧ ಜನರ ಜೊತೆಯಾಗಿ ಧ್ವನಿ ಎತ್ತುತ್ತೇನೆ’ ಎಂದರು.

‘ಆರ್‌ಎಸ್‌ಎಸ್‌ ಮತ್ತು ವಿಶ್ವ ಹಿಂದೂ ಪರಿಷತ್ತಿನ ಬೆದರುಬೊಂಬೆಯಾಗಿರುವ ಬಿಜೆಪಿ ದೇಶದ ಜನರ ಒಳಿತಿಗಾಗಿ ಹಿಂದೆ ಏನನ್ನೂ ಮಾಡಲಿಲ್ಲ, ಮುಂದೆಯೂ ಮಾಡುವುದಿಲ್ಲ. ಹಾಗಾಗಿ ಆ ಪಕ್ಷದ ಬಗ್ಗೆ ಜನ ನಿರೀಕ್ಷೆ ಇಟ್ಟುಕೊಳ್ಳಬಾರದು’ ಎಂದರು.

‘ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟಿಯಾಯಿತು. ಆದರೆ, ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರಿದ ಅನೇಕ ಕುಳಗಳು ಲಾರಿಗಟ್ಟಲೆ ಹೊಸ ನೋಟುಗಳನ್ನು ಸಂಗ್ರಹಿಸಿಕೊಂಡವು. ಅದೇ ಹಣವನ್ನು ಬಿಜೆಪಿ ಈಗಿನ ಚುನಾವಣೆಯಲ್ಲಿ ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು.

‘ದೇಶದೆಲ್ಲೆಡೆ ನಿರುದ್ಯೋಗ ತಾಂಡವಾಡುತ್ತಿದೆ. ಯುವಕರಿಗೆ ಉದ್ಯೋಗವಿಲ್ಲ. ಮಹಿಳೆಯರು, ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ. ಬೆಂಬಲ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರಿಗೆ ಈ ವಿಷಯಗಳು ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.

‘ಖನಿಜ ಸಂಪತ್ತನ್ನು ಲೂಟಿ ಹೊಡೆದು ಜೈಲು ಸೇರಿ ಬಂದ ಬಳ್ಳಾರಿಯ ರೆಡ್ಡಿಗಳನ್ನು ಚುನಾವಣೆಯಲ್ಲಿ ಮುಂಚೂಣಿಗೆ ತಂದಿರುವ ಬಿ.ಎಸ್‌.ಯಡಿಯೂರಪ್ಪ ರೆಡ್ಡಿಗಳನ್ನು ಕ್ಷಮಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಕ್ಷಮಿಸಬೇಕಾದವರು ಈ ನಾಡಿನ ಪ್ರಜೆಗಳು ಹೊರತು ಯಡಿಯೂರಪ್ಪ ಅಲ್ಲ. ಬಿಜೆಪಿಯವರು ದಲಿತರ ಮನೆಗೆ ಹೋಗಿ ಊಟ ಮಾಡಿರುವುದು ಆ ಸಮುದಾಯದವರಿಗೆ ಮಾಡಿದ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಾಂದೋಲನ ಮಹಾಮೈತ್ರಿ ರಾಜ್ಯ ಘಟಕದ ಸಂಚಾಲಕ ರಾಘವೇಂದ್ರ ಕುಷ್ಟಗಿ ಮಾತನಾಡಿ,  ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ ಶಕ್ತಿ ಮತದಾರರಲ್ಲಿದೆ ಎಂದರು.

ಲಕ್ನೊದ ಪ್ರಗತಿಪರ ಚಿಂತಕರಾದ ಅಖಿಲೇಂದ್ರ ಪ್ರತಾಪಸಿಂಗ ಮಾತನಾಡಿ, ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆರಂಭವಾಗಿದೆ. ಸುಳ್ಳು ಹೇಳುವ ಸ್ಪರ್ಧೆ ಏರ್ಪಡಿಸಿದರೆ ಬಿಜೆಪಿ ನಾಯಕರು ಪ್ರಪಂಚದಲ್ಲಿ ನಂಬರ್‌ 1 ಸ್ಥಾನ ಪಡೆಯುತ್ತಾರೆ ಎಂದರು.

ಉತ್ತರ ಪ್ರದೇಶದ ದಿನಕರ ಕಪೂರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಎಚ್‌.ಪೂಜಾರ, ತಾಜುದ್ದೀನಸಾಬ್‌ ಹುಮನಾಬಾದ, ಹಸನುದ್ದೀನ ಅಲಂಬರ್ದಾರ್ ಮಾತನಾಡಿದರು. ಅಲಹಾಬಾದ ವಿವಿಯ ನಿರ್ದೇಶಕಿ ರೇಖಾ ಸಿಂಗ್‌, ಆರ್‌.ಕೆ.ದೇಸಾಯಿ,  ಆನಂದ ಭಂಡಾರಿ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.