ಹಗಲು ರಾತ್ರಿಯೆನ್ನದೇ ಪ್ರಚಾರಕ್ಕೆ ಮುಂದಾದ ಅಭ್ಯರ್ಥಿಗಳು

7

ಹಗಲು ರಾತ್ರಿಯೆನ್ನದೇ ಪ್ರಚಾರಕ್ಕೆ ಮುಂದಾದ ಅಭ್ಯರ್ಥಿಗಳು

Published:
Updated:

ಶಿವಮೊಗ್ಗ: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಶಿವಮೊಗ್ಗ ನಗರಲ್ಲೆಡೆ ಅಬ್ಬರದ ಪ್ರಚಾರ ಕಾರ್ಯ ನಡೆಯುತ್ತಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಬೆಳಿಗ್ಗೆಯಿಂದಲೇ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ರಾತ್ರಿವರೆಗೂ ಪ್ರಚಾರ ಮುಂದುವರೆದಿದ್ದು, ಚುನಾವಣೆ ಕಾವು ಏರತೊಡಗಿದೆ.

ಕೆಲ ಅಭ್ಯರ್ಥಿಗಳು ಸ್ಥಳೀಯ ಮುಖಂಡರನ್ನು ಮುಂದಿಟ್ಟುಕೊಂಡು ಮತ ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ. ಕೆಲವೆಡೆ ಅಭ್ಯರ್ಥಿಗಳೇ ಎಲ್ಲ ಕಡೆ ಪ್ರಚಾರ ನಡೆಸಲು ಸಮಯದ ಅಭಾವದ ಕಾರಣ ಅವರ ಬೆಂಬಲಿಗರೇ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ವಿವಿಧ ಬಡಾವಣೆಯ ಪ್ರಮುಖರು, ಹಿರಿಯ ನಾಗರೀಕರ ಮೂಲಕ ಮತದಾರರನ್ನು ಭೇಟಿಯಾಗಿ ಗಮನ ಸೆಳೆಯಲಾಗುತ್ತಿದೆ. ಇದರೊಂದಿಗೆ ಆಯಾ ಜಾತಿಯ ಮುಖಂಡರನ್ನು ಭೇಟಿಯಾಗಿ ತಮ್ಮ ಸಮುದಾಯದ ಮತಗಳನ್ನು ಸೆಳೆಯುವಂತೆ ಕೋರಲಾಗುತ್ತಿದೆ.

ಶಿವಮೊಗ್ಗ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಗುರುವಾರ ವಿನೋಬನಗರ ವಾರ್ಡ್‌ ನಂ.7ರಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿದ್ದ ಆನಂದ ರಾಜು ಅವರು ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಅಲ್ಲದೇ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದ ತಂಡ ಶಿವಮೊಗ್ಗ ವಿನೋಬನಗರದಲ್ಲಿ ಪಕ್ಷದ ಅಭ್ಯರ್ಥಿ ಪ್ರಸನ್ನಕುಮಾರ್‌ ಪರ ಮತ ಯಾಚಿಸಿದರು.

ಅಲ್ಲದೆ ಶಿವಮೊಗ್ಗ ಬಾಪೂಜಿನಗರ, ವಿನೋಬನಗರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಬೃಹತ್ ಪಾದಯಾತ್ರೆಯೊಂದಿಗೆ ಪ್ರಚಾರ ನಡೆಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡ ಸೇರಿದಂತೆ ಹಲವರು ಸಾಥ್‌ ನೀಡಿದರು.

ಜೆಡಿಎಸ್ ಅಭ್ಯರ್ಥಿ ನಿರಂಜನ್ ಕೂಡ ನಗರದ ಕಾಶಿಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಬೆಂಬಲಿಗರು ಮತ್ತು ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು.

ಪಕ್ಷೇತರ ಅಭ್ಯರ್ಥಿ ಜಿ.ನರಸಿಂಹಮೂರ್ತಿ ಅವರು ಕೂಡ ನಗರದ ರಾಗಿಗುಡ್ಡ, ಶಾಂತಿನಗರ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು.ಅವರ ಬೆಂಬಲಿಗರು ಸಾಥ್‌ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry