ಸೋಮವಾರ, ಮಾರ್ಚ್ 8, 2021
31 °C
ಕಳಂಕಿತ ಯಡಿಯೂರಪ್ಪ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ

‘ಜನರಿಗೆ ಬಿಜೆಪಿ ಏನು ಸಂದೇಶ ನೀಡುತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜನರಿಗೆ ಬಿಜೆಪಿ ಏನು ಸಂದೇಶ ನೀಡುತ್ತಿದೆ’

ಉಡುಪಿ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ಬಿಜೆಪಿ ರಾಜ್ಯದ ಜನರಿಗೆ ಯಾವ ಸಂದೇಶ ನೀಡಲು ಹೊರಟಿದೆ ಎಂದು ಉಡುಪಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಬುಧ ವಾರ ನಡೆದ ಚುನಾವಣಾ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅಸ್ಥಿರತೆಯಿಂದ ಕೂಡಿತ್ತು, ಮೂರು ಮಂದಿ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿರ ಸರ್ಕಾರವನ್ನು ನೀಡಿದೆ. ಜನಶಕ್ತಿಯೇ ಪಕ್ಷಕ್ಕೆ ಆಧಾರವಾಗಿದ್ದು, ಸಮುದಾಯದ ಅಭಿವೃದ್ಧಿಯೇ ಗುರಿಯಾಗಿದೆ. ಭ್ರಷ್ಟಾಚಾರರಹಿತ ಆಡಳಿತ ಮತ್ತು ಕಾರ್ಯವೈಖರಿಯೇ ಕಾಂಗ್ರೆಸ್ ಪಕ್ಷಕ್ಕೆ ಸ್ಫೂರ್ತಿ ಎಂದರು.

ಕೇಂದ್ರ ಸರ್ಕಾರ ನೋಟು ಅಮಾ ನ್ಯಗೊಳಿಸಿ, ಜಿಎಸ್‌ಟಿ ಜಾರಿಗೊಳಿಸಿದ ಪರಿಣಾಮ ಜನಸಾಮಾನ್ಯರು ತೊಂದರೆ ಅನುಭವಿಸಿದರು. ಬಡ ಮಧ್ಯಮ ವರ್ಗದವರಿಗೆ ಬೆಲೆ ಏರಿಕೆ ಹೊಡೆತ ನೀಡಿತು. ಆದರೆ ಬಿಜೆಪಿ ತನ್ನ ಆದಾಯವನ್ನು ಏರಿಸಿಕೊಂಡಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇತ್ತೀಚಿಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ನಿರಂತರ ಸೋಲನ್ನು ಅನುಭವಿಸಿರುವುದು ಅದರ ಜನವಿರೋಧಿ ನೀತಿಗೆ ಸಾಕ್ಷಿ. ದೇಶದ ಜನರು ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಪ್ರಚಾರ ಸಮಿತಿ ಪದಾಧಿಕಾರಿಗಳಾದ ರಮೇಶ್ ಕಾಂಚನ್, ಕೃಷ್ಣಮೂರ್ತಿ ಕಾರ್ಕಳ, ವಿಕಾಸ್ ಹೆಗ್ಡೆ ಕುಂದಾಪುರ, ಪ್ರಕಾಶ್ಚಂದ್ರ ಶೆಟ್ಟಿ ಬೈಂದೂರು, ಅಮೃತ್ ಶೆಣೈ, ಡಾ.ಸುನೀತಾ ಶೆಟ್ಟಿ, ದಿನೇಶ್ ಕೋಟ್ಯಾನ್ ಕಾಪು, ಜನಾರ್ದನ ಭಂಡಾರ್ಕರ್‌, ಲಕ್ಷ್ಮೀನಾರಾಯಣ ಪ್ರಭು ಹಿರಿಯಡ್ಕ, ತಿಮ್ಮ ಪೂಜಾರಿ ಕೋಟ, ಜಾಕೋಬ್‌ ಡಿಸೋಜ ಕುಂದಾಪುರ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

ಏಕವ್ಯಕ್ತಿ ಆಲೋಚನೆಯಿಂದ ಆಪತ್ತು

ಏಕವ್ಯಕ್ತಿಯ ಆಲೋಚನೆಗಳಿಂದ ದೇಶಕ್ಕೆ ಅಪಾಯ ಬಂದೊದಗಿದೆ. ಉದ್ಯೋಗ, ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಬೇರೆಯವರ ಆಲೋಚನೆಗಳಿಗೆ, ಚಿಂತನೆಗಳಿಗೆ ಆಸ್ಪದವೇ ಇಲ್ಲದಂತಾಗಿದೆ. ಕೇಂದ್ರವು ಜನತೆಯ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಬಿಜೆಪಿಯು ಒಡೆದು ಆಳುವ ನೀತಿನ್ನು ಅನುಸರಿಸುತ್ತಿದೆ. ಮತಯಾಚಿಸುವ ಯಾವುದೇ ನೈತಿಕತೆ ಇಲ್ಲದ ರಾಜ್ಯದ ಮುಖಂಡರು ಮತಗಳಿಕೆಗಾಗಿ ಮೋದಿಯವರನ್ನೇ ಅವಲಂಬಿಸಿರುವುದು ಜನತೆಗೆ ದ್ರೋಹ ಬಗೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ವಿಷಯಗಳನ್ನು ಅರಿತು ರಾಜ್ಯದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಭದ್ರ ಹಾಗೂ ಅಭಿವೃದ್ಧಿಪರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಉಡುಪಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್‌ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.