ಸೋಮವಾರ, ಮಾರ್ಚ್ 8, 2021
29 °C

ಸಹಜವಾಗಿ ಕೆಲಸ ಮಾಡುವ ಕೃತಕ ಚರ್ಮ!

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಸಹಜವಾಗಿ ಕೆಲಸ ಮಾಡುವ ಕೃತಕ ಚರ್ಮ!

ಈ ಚರ್ಮ ಕೃತಕವೇ ಆದರೂ ಸಹಜವಾಗಿ ಕೆಲಸ ಮಾಡುತ್ತದೆ. ಕೋಮಲ, ಕಠಿಣವನ್ನೂ ಗುರುತಿಸುತ್ತದೆ. ಬಿಸಿ, ತಂಪನ್ನೆಲ್ಲಾ ಗ್ರಹಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ಚರ್ಮದಂತೆಯೇ ಕೆಲಸ ಮಾಡುತ್ತದೆ. ಇದರ ಹೆಸರು ಇ–ಚರ್ಮ. (E*ectronic Skin) ಪ್ರಯೋಗದ ಹಂತವನ್ನು ದಾಟಿ ಬಳಕೆಗೆ ಮುಕ್ತವಾಗಲು ತುದಿಗಾಲಲ್ಲಿ ನಿಂತಿದೆ.

ಹೇಗೆ ಕೆಲಸ ಮಾಡುತ್ತದೆ?

ಇದು ಅತಿ ತೆಳುವಾದ ರಬ್ಬರ್‌ ಅಥವಾ ಪಾಲಿಮರ್ ಪೊರೆ. ಬಿಸಿ, ತಂಪು, ಒತ್ತಡ, ಗಾಳಿ, ತೇವದಂತಹ ಎಲ್ಲ ಸೂಕ್ಷ್ಮಗಳನ್ನು ಗ್ರಹಿಸಲು ನೆರವಾಗುವಂತಹ ಸೆನ್ಸರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ನಮ್ಮ ಚರ್ಮ ಕಣಗಳಿಗಿಂತ ಹತ್ತು ಪಟ್ಟು ತೆಳುವಾಗಿ ಮತ್ತು ಹಗುರವಾಗಿ ಇದೆ. ಎಲ್ಲ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಅನಿವಾರ್ಯವಾಗುತ್ತಿರುವುದರಿಂದ ಇ–ಚರ್ಮವನ್ನು ಹಲವು ವಿಧಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇ–ಚರ್ಮ ತಯಾರಿ ಪ್ರಯತ್ನಗಳು 1975ರಲ್ಲೇ ಆರಂಭವಾಯಿತು. 1983ರಲ್ಲಿ ಕಂಪ್ಯೂಟರ್‌ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಸಂಸ್ಥೆ ಎಚ್‌ಪಿ ಮೊದಲ ಬಾರಿಗೆ ಟಚ್‌ಸ್ಕ್ರೀನ್ ಕಂಪ್ಯೂಟರ್ ತಯಾರಿಸಿದ ನಂತರ, ಪ್ರಯೋಗಗಳಿಗೆ ಹೊಸ ಆಯಾಮ ಲಭಿಸಿತು. 1985ರಲ್ಲಿ ಜಿ.ಇ ಸಂಸ್ಥೆ ಸಾಧನಗಳಿಗೆ, ಪರಿಕರಗಳಿಗೆ ಸ್ಪಂದಿಸುವಂತಹ ಪೊರೆ ತಯಾರಿಸಿ ಹೊಸ ಹೆಜ್ಜೆ ಇಟ್ಟಿತು.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ 2010ರಲ್ಲಿ ರಬ್ಬರ್ ಮೇಲೆ ಟ್ರಾನ್ಸಿಸ್ಟರ್‌ಗಳನ್ನು ಅಂಟಿಸಿ.

ಪ್ರಯೋಗಾತ್ಮಕವಾಗಿ ಇ–ಚರ್ಮ ತಯಾರಿಸಿದರು. ನಂತರ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು 2011ರಲ್ಲಿ ತಯಾರಿಸಿದ ನ್ಯಾನೊ ವೈರ್ ಎಲೆಕ್ಟ್ರಾನಿಕ್ ಪರಿಕರಗಳು ಕ್ರಾಂತಿಕಾರಕ ಬದಲಾವಣೆಗಳಿಗೆ ದಾರಿಮಾಡಿಕೊಟ್ಟವು.

2013ರಲ್ಲಿ ಬಾರ್ಕಿಲೋನಿ ವಿಶ್ವವಿದ್ಯಾಲಯದ ಸಂಶೋಧಕರು, ತಾಕಿದರೆ ಮಿನುಗುವ ಇ–ಚರ್ಮ ಸೃಷ್ಟಿಸಿ ಆಶ್ಚರ್ಯಗೊಳಿಸಿದರು. 2014ರಲ್ಲಿ ಮನುಷ್ಯನ ಕೈ ಹೋಲುವ ಕೃತಕ ಕೈ ತಯಾರಾಯಿತು. ದೇಹದ ಚಲನವಲನಗಳಿಗೆ ತಕ್ಕಂತೆ ಕೆಲಸ ಮಾಡಲು ನೆರವಾಗುವ ಎಲೆಕ್ಟ್ರಾನಿಕ್‌ ಸರ್ಕೀಟ್‌ಗಳನ್ನು ಇದಕ್ಕೆ ಜೋಡಿಸಲಾಗುತ್ತಿದೆ.

ಇದರ ಸೃಷ್ಟಿಗೆ ಒಂದು ರೀತಿಯಲ್ಲಿ ಸೈನ್ಸ್–ಫಿಕ್ಷನ್ ಚಲನಚಿತ್ರಗಳೇ ಕಾರಣ ಎನ್ನಬಹುದು. 1971ರಲ್ಲಿ ಪ್ರಸಾರವಾದ ‘ಸಿಕ್ಸ್ ಮಿಲಿಯನ್ ಡಾಲರ್ ಮ್ಯಾನ್‌’ ಧಾರಾವಾಹಿಯಲ್ಲಿನ ಪಾತ್ರವೊಂದು ತನಗೆ ಬೇಕೆಂದಾಗ ಕೈ, ಕಣ್ಣುಗಳನ್ನು ಅಳವಡಿಸಿಕೊಳ್ಳುತ್ತಿತ್ತು. ಅದೇ ರಿತಿ, ಸ್ಟಾರ್‌ವಾರ್ಸ್ ಚಿತ್ರದಲ್ಲಿನ ಎಲೆಕ್ಟ್ರಾನಿಕ್ ಹಸ್ತ. 1984ರಲ್ಲಿ ತೆರೆಕಂಡ ಟರ್ಮಿನೇಟರ್ ಚಿತ್ರದಲ್ಲಿನ ಮನುಷ್ಯರಂತಹ ಯಂತ್ರ ಮಾನವರು.

ಉಪಯೋಗಗಳು

*ಕೃತಕ ಕೈ, ಕಾಲುಗಳನ್ನು ಧರಿಸುವವರು ಬಿಸಿ, ತಂಪು ಇತ್ಯಾದಿ ಸೂಕ್ಷ್ಮಗಳನ್ನು ಗ್ರಹಿಸಲು ನೆರವಾಗುತ್ತದೆ.

*ಯಂತ್ರ ಮಾನವರು (ರೋಬೊಗಳು) ಪರಿಸರದಲ್ಲಿನ ಸೂಕ್ಷ್ಮಗಳನ್ನು ಗ್ರಹಿಸಲು, ಕಠಿಣ ಮತ್ತು ಮೃದು ವಸ್ತುಗಳನ್ನು ಗುರುತಿಸಲು ನೆರವಾಗುತ್ತದೆ.

*ಗಾಳಿಯಲ್ಲಿನ ಬದಲಾವಣೆಗಳನ್ನು ಗ್ರಹಿಸಿ ಪ್ರತಿಕ್ರಿಯಿಸಲು ಸಹಕರಿಸುತ್ತದೆ

* ಹೃದಯದ ವಿದ್ಯುತ್‌ ಸ್ಪಂದನೆಗಳು, ಮಿದುಳಿನ ತರಂಗಗಳ ಸಂಕೇತಗಳನ್ನು ಪತ್ತೆಹಚ್ಚಬಹುದು. ಈ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ ಮೂಲಕ ವೈದ್ಯರಿಗೂ ತಿಳಿಸಬಹುದು.

*ಚರ್ಮದಲ್ಲಿನ ನ್ಯಾನೊ ಸೆನ್ಸರ್‌ಗಳನ್ನು ಮಿನುಗುವಂತೆ ಮಡಿ ತಾತ್ಕಲಿಕ ಹಚ್ಚೆಗಳನ್ನು (ಟ್ಯಾಟೂಸ್) ಸೃಷ್ಟಿಸಬಹುದು.

*ಇ–ಚರ್ಮವನ್ನು ತಾಕುತ್ತಲೇ ಪುಸ್ತಕಗಳನ್ನೂ ಓದಬಹುದು. ಅಂದರೆ ಈ ಚರ್ಮವನ್ನೇ ಕಂಪ್ಯೂಟರ್‌ನಂತೆ ಬದಲಾಯಿಸಬಹುದು.

ಪರಿಸರಸ್ನೇಹಿ

ಕೊಲೆರಾಡೊ ಬೌಲ್ಡರ್ ವಿಶ್ವವಿದ್ಯಾಲಯದ ಸಂಶೋಧಕರು, ಬೆಳ್ಳಿ ಮತ್ತು ನ್ಯಾನೊ ಪಾರ್ಟಿಕಲ್ಸ್‌ ಸಹಾಯದಿಂದ ತಯಾರಿಸಿದ ಇ–ಚರ್ಮ ಪರಿಸರ ಸ್ನೇಹಿ ಆಗಿರಲಿದೆ. ಅಂದರೆ ಇದು ಹಾಳಾದರೂ ಮತ್ತೆ ಬಳಸಿಕೊಳ್ಳಬಹುದು. ಒಂದು ವೇಳೆ ಇದು ಹರಿದುಹೋದರೆ ಮತ್ತೆ ಕೆಲವು ರಾಸಾಯನಿಕಗಳನ್ನು ಬಳಸಿ ಕೂಡಿಸಬಹುದು. ಇದರಿಂದ ಇ–ತಾಜ್ಯ ಕಡಿಮೆ ಆಗುತ್ತದೆ. ಸಂಪೂರ್ಣವಾಗಿ ಹಾಳಾದರೆ, ಇದನ್ನು ಪುಟ್ಟ ಚೂರುಗಳನ್ನಾಗಿ ಮಾಡಿ ವಿಶೇಷ ದ್ರಾವಣವೊಂದರಲ್ಲಿ ಹಾಕಿದರೆ ಕರಗಿ ಬಿಡುತ್ತದೆ. ಈ ಕರಗಿದ ದ್ರಾವಣವನ್ನು ಬಳಸಿ ಮತ್ತೆ ಹೊಸ ಇ–ಚರ್ಮ ತಯಾರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.