ನೃತ್ಯ ಚಿಕಿತ್ಸಕ ‘ಕೋಡ್ ರೆಡ್’

7

ನೃತ್ಯ ಚಿಕಿತ್ಸಕ ‘ಕೋಡ್ ರೆಡ್’

Published:
Updated:
ನೃತ್ಯ ಚಿಕಿತ್ಸಕ ‘ಕೋಡ್ ರೆಡ್’

ಕೋಲ್ಕತ್ತದ ‘ಪ್ರಾಜೆಕ್ಟ್ ಪ್ರೋಮೊಥಿಯೇಸ್‌’ ತಂಡದ ಕಲಾವಿದರು ಡಾ.ಇಂದುದೀಪ್ ಸಿನ್ಹಾ ಅವರ ನಿರ್ದೇಶನದಲ್ಲಿ ‍ಪ್ರದರ್ಶಿಸಿದ ಬಂಗಾಳಿ ಭಾಷೆಯ ‘ಕೋಡ್ ರೆಡ್’ ನಾಟಕವು ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ನೋಡುಗರನ್ನು ವಿಶಿಷ್ಟ ದೃಶ್ಯವೈಭವದಿಂದ ಆಕರ್ಷಿಸಿತು.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿ ಆಸ್ಪತ್ರೆಯಲ್ಲಿ ಉಸಿರಾಡುವ ಹೆಣದಂತಿದ್ದ ಯುವತಿಗೆ ಚಿಕಿತ್ಸೆ ಕೊಡಲು ಮನಃಶಾಸ್ತ್ರಜ್ಞನೊಬ್ಬ ಪ್ರಯತ್ನಿಸುತ್ತಾನೆ. ಯುದ್ಧಭೂಮಿಯಲ್ಲಿ ನಿಯುಕ್ತಗೊಂಡಿದ್ದ ಆ ಚಿಕಿತ್ಸಕ ಯುದ್ಧದ ಭೀಕರತೆ ಹಾಗೂ ಹೆಣಗಳ ರಾಶಿಯನ್ನು ನೋಡಿ ರೋಸಿಹೋಗಿ ಮಿಲಿಟರಿ ಆಸ್ಪತ್ರೆಯೊಂದಕ್ಕೆ ವರ್ಗ ಮಾಡಿಸಿಕೊಂಡು ಬಂದಿರುತ್ತಾನೆ. ಅತ್ಯಾಚಾರದಿಂದ ನಲುಗಿದ ಯುವತಿಗೆ ಸಾಂತ್ವನ ಹೇಳುತ್ತಾ ಅವಳಲ್ಲಿ ಬದುಕಿನ ಭರವಸೆಯನ್ನು ಮೂಡಿಸಿ ಗುಣಪಡಿಸುತ್ತಾನೆ. ಇಬ್ಬರೂ ರಣಭೂಮಿಯನ್ನು ಬಿಟ್ಟು ಹೊಸ ಬದುಕನ್ನು ಕಂಡು ಕೊಳ್ಳುತ್ತಾರೆ. ಇದು ಈ ನಾಟಕದ ಒಂದೆಳೆ ಕಥೆ.

ರವೀಂದ್ರನಾಥ ಟಾಗೋರರ ‘ಶಿಶುತೀರ್ಥ’ ಕಥೆಯನ್ನು ಆಧರಿಸಿ ಈ ನಾಟಕ ರಚಿತಗೊಂಡಿದೆ. ನಾಟಕದ ಕಥೆ ಇಷ್ಟೇ ಆದರೂ ಅದನ್ನು ಅನೇಕಾನೇಕ ರೂಪಕಗಳ ಮೂಲಕ ಎಳೆದೆಳೆದು ಎರಡು ಗಂಟೆಗಳ ಸುದೀರ್ಘ ಅವಧಿಯ ರಂಗಪ್ರಯೋಗವನ್ನಾಗಿ ಮಾಡಲಾಗಿದೆ. ಈ ನಾಟಕದ ನಿರ್ದೇಶಕಿ ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆ ಹಾಗೂ ನೃತ್ಯ ಚಿಕಿತ್ಸಕಿ. ತಮ್ಮ ವೃತ್ತಿ ಕೌಶಲವನ್ನೆಲ್ಲಾ ಈ ನಾಟಕದಲ್ಲಿ ಅಳವಡಿಸಿ ಪ್ರೇಕ್ಷಕರ ಮನಸ್ಸಿಗೆ ರಂಗಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದಾರೆ.

ಯುದ್ಧದ ಕ್ರೌರ್ಯ ಹಾಗೂ ಅತ್ಯಾಚಾರದ ಹಿಂಸೆಗಳನ್ನು ಪದರುಪದರಾಗಿ ದೃಶ್ಯಗಳನ್ನು ಕಟ್ಟಲಾಗಿದೆ. ಹಿಂಸೆಯ ಅತಿಗಳನ್ನು ಅತಿರೇಕವಾಗಿಯೇ ತೋರಿಸುತ್ತಾ ನೋಡುಗರ ಅಂತರಂಗವನ್ನು ಅಲ್ಲೋಲಕಲ್ಲೋಲ ಮಾಡುವಂತೆ ನಾಟಕ ಮೂಡಿಬಂದಿದೆ. ನಾಟಕದಾದ್ಯಂತ ಗುಂಪು ದೃಶ್ಯಗಳಿಗೆ  ಹೆಚ್ಚು ಪ್ರಾಧಾನ್ಯ ಕೊಡಲಾಗಿದೆ. ಕಥಕ್ ನೃತ್ಯ ಪ್ರಕಾರದ ಚಲನೆ ಹಾಗೂ ಆಂಗಿಕ ವಿನ್ಯಾಸಗಳು ಪ್ರತಿ ದೃಶ್ಯದಲ್ಲೂ ಹೇರಳವಾಗಿ ಬಳಕೆಯಾಗಿದ್ದು ವಿಸ್ಮಯವನ್ನುಂಟು ಮಾಡುತ್ತವೆ. ಆದರೆ  ಅವುಗಳ ಪುನರಾವರ್ತನೆ ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚಾಯಿತೇನೋ ಎನ್ನುವಂತಿದೆ.

ನಾಟಕದೊಳಗಿನ ವಸ್ತು ವಿಷಯಕ್ಕಿಂತ ರೂಪಕ ಸಂಕೇತಗಳೇ ಹೆಚ್ಚಾಗಿ ಬೇಸರ ಹುಟ್ಟಿಸಿದ್ದಂತೂ ನಿಜ. ಅಲಂಕಾರದ ಅತಿರೇಕದಲ್ಲಿ ಆಭರಣ ಧರಿಸಿದವರ ಮುಖವೇ ಕಾಣದಂತಾಗಿತ್ತು. ಇದೊಂದು ಮನೋವೈಜ್ಞಾನಿಕ ಪ್ರಸ್ತುತಿ. ಎಲ್ಲರಿಗೂ ಸುಲಭಕ್ಕೆ ದಕ್ಕುವಂತಹುದಲ್ಲ. ಅದಕ್ಕೆ ಅರ್ಥವಾಗದ ಭಾಷೆಯಷ್ಟೇ ಪ್ರತಿಮೆಗಳ ಪರಾಕಾಷ್ಠೆಯೂ ಕಾರಣವಾಗಿದ್ದು ಇಡೀ ನಾಟಕ ಕಲಾವಿದರ ದೈಹಿಕ ಕಸರತ್ತಿಗೆ ಮೀಸಲಿಟ್ಟಂತಿದೆ. ನೃತ್ಯ ಚಿಕಿತ್ಸೆಯ ಪ್ರಯೋಗದ ದೃಷ್ಟಿಯಲ್ಲಿ ಈ ನಾಟಕ ಸಫಲವಾಗಿದೆ.

ಇಡೀ ನಾಟಕದ ಅಂತರಾಳವೇ ಹಿಂಸೆಯಾಗಿದೆ. ಆರಂಭದಲ್ಲಿಯೇ ಪ್ರೊಜೆಕ್ಟರ್ ಮೂಲಕ ಹಿಂಸೆಯ ಅತಿರೇಕಗಳನ್ನು ತೋರಿಸುತ್ತಾ ಪ್ರೇಕ್ಷಕರನ್ನು ನಾಟಕ ವೀಕ್ಷಣೆಗೆ ಸಿದ್ಧಗೊಳಿಸಲಾಗುತ್ತದೆ. ಪ್ರೇಕ್ಷಾಗೃಹದಲ್ಲಿ ಓಡಾಡುತ್ತಿದ್ದ ಕೆಲವಾರು ಪಾತ್ರಗಳೂ  ಪ್ರೇಕ್ಷಕರ ಕಿವಿಯಲ್ಲಿ ‘ಈ ನಾಟಕ ನೋಡುವುದು ಆರೋಗ್ಯಕ್ಕೆ ಹಾನಿಕರ’ಎಂದು ಎಚ್ಚರಿಸುತ್ತಾರೆ. ಆದಿಯಿಂದ ಅಂತ್ಯದವರೆಗೂ ಹಿಂಸೆಯ ಹಲವಾರು ಆಯಾಮಗಳನ್ನು ನಾಟಕ ಬಿಚ್ಚಿಡುತ್ತಲೇ ಸಾಗುತ್ತದೆ. ಮಹಿಳೆಯರ ಮೇಲೆ ನಡೆಯುವ ದೈಹಿಕ ಹಿಂಸೆ ಮತ್ತು ಅತ್ಯಾಚಾರವನ್ನು ಸಾಧ್ಯವಾದಷ್ಟೂ ವೈಭವೀಕರಿಸಿ ಹಸಿಹಸಿಯಾಗಿಯೇ ತೋರಿಸಿದ್ದು ನೋಡುಗರಲ್ಲಿ ಸಂಕಟ ಹಾಗೂ ಅಸಹನೆಯನ್ನು ಹುಟ್ಟಿಸಲು ಕಾರಣವಾಯಿತು. ಬೆಳಕು ಮತ್ತು ಹಿನ್ನೆಲೆ ಸಂಗೀತಗಳಂತೂ ಈ ನಾಟಕದ ಯಶಸ್ಸಿನಲ್ಲಿ ಪಾಲುಕೇಳುವಷ್ಟು ಕರಾರುವಕ್ಕಾಗಿ ಮೂಡಿಬಂದವು.

ಮನುಷ್ಯರ ಮೇಲೆ ಮನುಷ್ಯರು ಎಸಗುವ ಇಷ್ಟೆಲ್ಲಾ ಹಿಂಸೆಗಳಿಂದ ಆದಷ್ಟು ದೂರ ಹೋಗಿ ಮನುಷ್ಯರ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಬದುಕಿನ ಬಗ್ಗೆ ಭರವಸೆಯನ್ನು ಹೊಂದುವ ನಿರ್ಣಯವನ್ನು ಈ ನಾಟಕದ ನಾಯಕ ಹಾಗೂ ನಾಯಕಿ ತೆಗೆದುಕೊಳ್ಳುವುದು ಅತ್ಯಂತ ಸಕಾರಾತ್ಮಕ ನಿಲುವಾಗಿದೆ. ಹಿಂಸೆಯ ಅತಿರೇಕಗಳನ್ನು ಮೀರಿ ನೆಮ್ಮದಿಯ ನಾಳೆಗಾಗಿ ಬದುಕಬೇಕೆನ್ನುವುದೇ ‘ಕೋಡ್ ರೆಡ್’ ನಾಟಕದ ಆಶಯವಾಗಿದೆ.

ತಮ್ಮ ಮನೋವೈಜ್ಞಾನಿಕ ನೃತ್ಯ ಚಿಕಿತ್ಸೆಯನ್ನು ನಾಟಕದಲ್ಲಿ ಅಳವಡಿಸಲು ನಿರ್ದೇಶಕಿ ಯಶಸ್ವಿಯಾಗಿದ್ದರೂ ದೃಶ್ಯ ಸೃಷ್ಟಿಯ ಸಂಕೀರ್ಣತೆ, ಹಿಂಸೆಯ ಅತಿಯಾದ ವೈಭವೀಕರಣ, ದೀರ್ಘವೆನಿಸುವ ನಾಟಕದ ಸಮಯ ಮತ್ತು ನೋಡುಗರಿಗೆ ಭಾರವೆನಿಸುವಷ್ಟು ಗುಂಪುಗಳ ದೈಹಿಕ ಚಟುವಟಿಕೆಗಳು ಪ್ರೇಕ್ಷಕರ ಮಿದುಳಿಗೇ ಕೈಹಾಕಿ ಕಲಕಿದಂತಾಯಿತು. ಒಂದು ಸರಳ ಸಂಗತಿಯನ್ನು ಇಷ್ಟೊಂದು ಸಂಕೀರ್ಣವಾಗಿ ಹೇಳಬೇಕಾಗಿತ್ತೇ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡಿದ್ದಂತೂ ಸತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry