ಮಂಗಳವಾರ, ಮಾರ್ಚ್ 9, 2021
23 °C

ಕುಟುಂಬ, ಉದ್ಯೋಗದ ಸಮತೋಲನ ಕಷ್ಟ ಕಷ್ಟ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಕುಟುಂಬ, ಉದ್ಯೋಗದ ಸಮತೋಲನ ಕಷ್ಟ ಕಷ್ಟ

ನಿತ್ಯ ಬೆಳಿಗ್ಗೆ ಏಳುವುದು ಪಕ್ಕದ ಮನೆಯ ಕುಕ್ಕರ್‌ನ ವಿಷಲ್‌ನ ಶಬ್ದಕ್ಕೆ ಆದರೆ, ಅಂದೇಕೋ ತುಸು ಬೇಗವೇ ಎಚ್ಚರವಾಗಿದೆ. ಬೇಸಿಗೆಯ ಸೆಕೆಗಿರಬೇಕೆಂದು ಭಾವಿಸಿದರೆ ಊಹೆ ತಪ್ಪಾಗಿತ್ತು. ನಿತ್ಯ ನಿಶ್ಯಬ್ದವಾಗಿರುತ್ತಿದ್ದ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಅಂದೇಕೊ ಗೊಂದಲ, ಜಗಳ ಗಲಾಟೆಯ ಶಬ್ದ. ಮಗ್ಗಲು ಹೊರಳಿಸದೇ ಮೆಲ್ಲಗೆ ಕೇಳಿದರೆ ಕೆಲಸದಲ್ಲಿ ಬಡ್ತಿ ಸಿಕ್ಕಿತೆಂದು ಮೊನ್ನೆಯಷ್ಟೇ ಸ್ವೀಟ್‌ ಕೊಟ್ಟ ಗೀತಾ ಅವರ ಏರುಧ್ವನಿ!

‌ಮುಂಜಾನೆ ಲಗುಬಗೆಯಿಂದ ಎದ್ದು, ಗಂಡ, ಮಕ್ಕಳಿಗೆ ಎಲ್ಲ ತಯಾರಿ ಮಾಡಿ ಉತ್ಸಾಹದಿಂದ ಕಚೇರಿಗೆ ಹೊರಡುತ್ತಿದ್ದ ಗೀತಾ ಅವರ ಅಂದಿನ ನಡುವಳಿಕೆ ಮನದಲ್ಲೊಂದು ಪ್ರಶ್ನೆಯನ್ನು ಮೂಡಿಸಿತು. ಕೆಲವು ಆಪ್ತಸಮಾಲೋಚಕರನ್ನು ಭೇಟಿಯಾದಾಗ ನಗರದಲ್ಲಿನ ಅನೇಕ ಉದ್ಯೋಗಸ್ಥ ಮಹಿಳೆಯರು ವಿವಿಧ ಮಾನಸಿಕ ಒತ್ತಡಗಳಿಂದಾಗಿ ಆಪ್ತಸಮಾಲೋಚಕರ ಮೊರೆ ಹೋಗಿದ್ದಾರೆ ಎಂಬ ಸತ್ಯ ತಿಳಿಯಿತು.

ಸುಜಾತ ಗೌಡ (ಹೆಸರು ಬದಲಾಯಿಸಲಾಗಿದೆ) ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಡ್ತಿ ಪಡೆದಿರುವ ಅವರಿಗೆ ಬೋರ್ಡ್‌ ರೂಂ ಮೀಟಿಂಗ್‌ಗಳು, ಆಗಾಗ್ಗೆ ನಡೆಯುವ ಕಲಹಗಳ ನಡುವೆ ಸಹೋದ್ಯೋಗಿಗಳನ್ನು ಸಂಭಾಳಿಸುವುದೇ ಕಷ್ಟವಾಗಿದೆ. ಬರಬರುತ್ತಾ ಕುಟುಂಬ ಸದಸ್ಯರು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎನಿಸುತ್ತಿದೆ. ಕಳೆದ ಆರು ತಿಂಗಳಿನಿಂದ ಆಪ್ತಸಮಾಲೋಚಕರ ಬಳಿ ಬರುತ್ತಿದ್ದೇನೆ ಎನ್ನುತ್ತಾರೆ ಅವರು.

45 ವರ್ಷದ ಸುಜಾತ ಅವರಿಗೆ ಅಪರಿಚಿತ ವ್ಯಕ್ತಿಗಳೊಂದಿಗೆ ‘ನಾನ್‌ ಜಡ್ಜ್‌ಮೆಂಟಲ್‌’ ಆಗಿ ಪ್ರತಿಕ್ರಿಯಿಸುತ್ತೇನೆ ಎಂಬ ಭಯ ಕಾಡುತ್ತಿದೆ. ಸಹದ್ಯೋಗಿಗಳೊಂದಿನ ಸಂವಹನವೂ ಇದಕ್ಕಿಂತ ಭಿನ್ನವಾಗಿಲ್ಲ. ತಕ್ಷಣ ಪ್ರತಿಕ್ರಿಯಿಸಿ ನಂತರ ಗಂಟೆಗಟ್ಟಲೇ, ದಿನಗಟ್ಟಲೇ ಅದನ್ನೇ ಯೋಚಿಸುತ್ತೇನೆ. ಇದರಿಂದ ಒತ್ತಡ ಹೆಚ್ಚುತ್ತಿದೆ ಎನ್ನುತ್ತಾರೆ ಅವರು.

ಐಟಿ ಸಂಸ್ಥೆಯೊಂದರಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ 37 ವರ್ಷದ ಶ್ವೇತಾ ಅವರು ಎರಡು ವರ್ಷಗಳಿಂದ ಕುಟುಂಬ ಮತ್ತು ಉದ್ಯೋಗ ಎರಡನ್ನು ಸರಿದೂಗಿಸಲು ಸಾಧ್ಯವಾಗದೆ ಆ‍ಪ್ತಸಮಾಲೋಚನೆ ಪಡೆಯುತ್ತಿದ್ದಾರೆ. ‘ನಾನು ಆಪ್ತಸಮಾಲೋಚಕರನ್ನು ಭೇಟಿಯಾಗುತ್ತಿದ್ದೇನೆ ಎಂದು ಹೇಳಿಕೊಳ್ಳಲು ಇದೇನು ಸಂಭ್ರಮವಲ್ಲ. ಹಾಗಾಗಿ ನನ್ನ ಗಂಡನಿಗೂ ಈ ವಿಷಯ ತಿಳಿಸಿಲ್ಲ. ಎಲ್ಲೆಡೆ ಸುದ್ದಿ ಹರಡುವುದು ನನಗೆ ಇಷ್ಟವಿಲ್ಲ’ ಎನ್ನುತ್ತಾರೆ ಅವರು.

ಸುಜಾತ, ಶ್ವೇತಾ ಅವರಂತೆ ಅನೇಕ ಮಹಿಳೆಯರು ಆಪ್ತ ಸಮಾಲೋಚಕರನ್ನು ಭೇಟಿಯಾಗುತ್ತಿರುವ ವಿಷಯವನ್ನು ಗೌಪ್ಯವಾಗಿಡಲು ಬಯಸುತ್ತಾರೆ. ಆಪ್ತಸಮಾಲೋಚಕರನ್ನು ಭೇಟಿಯಾಗುವುದು ಮನೋರೋಗದ ಲಕ್ಷಣವೆಂದೇ ಅನೇಕರು ಭಾವಿಸುತ್ತಾರೆ ಎನ್ನುತ್ತಾರೆ ಆಪ್ತ ಸಮಾಲೋಚಕರು.

ಮನ:ಶಾಸ್ತ್ರಜ್ಞರ ಪ್ರಕಾರ ಒತ್ತಡದಿಂದ ಬಳಲುವ ಮಹಿಳೆಯರು ಮನೋವೈದ್ಯರನ್ನು ಬೇಟಿಯಾಗಿ ಔಷಧಗಳನ್ನು ಪಡೆಯಲು ಇಷ್ಟಪಡುವುದಿಲ್ಲ. ಅವರಿಗೆ ಅವರ ಮನದ ನೋವುಗಳನ್ನು ಕೇಳುವ, ನೋವುಗಳಿಗೆ ದನಿಯಾಗುವ ಆಪ್ತಸಮಾಲೋಚಕರ ಅಗತ್ಯವಿದೆ ಎನ್ನುತ್ತಾರೆ.

‘ಕೆಲ ಮಹಿಳೆಯರು ಕುಟುಂಬದ ಸಹಕಾರದೊಂದಿಗೆ ನಮ್ಮ ಕೇಂದ್ರಗಳಿಗೆ ಬರುತ್ತಾರೆ. ಇನ್ನೂ ಕೆಲವರು ಯಾರಿಗೂ ಹೇಳದೆ ಭೇಟಿ ನೀಡುತ್ತಾರೆ ಅವರಿಗೆ ಬೇರೆಯವರಿಗೆ ಹೇಳಬಾರದು ಎನ್ನುವುದಕ್ಕಿಂತ ಹೇಳುವ ಅಗತ್ಯವಿಲ್ಲ. ಇದು ವೃತ್ತಿ ಬದುಕಿನ ಭಾಗವಷ್ಟೇ ಎನ್ನುವ ಭಾವನೆ ಬಲವಾಗಿರುತ್ತದೆ. ಅಂತಹವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಕುಟುಂಬ ಮತ್ತು ಆಪ್ತರ ಸಹಕಾರ ಅಗತ್ಯವಾಗಿದ್ದರೆ ಅವರನ್ನು ಕರೆಸಿಕೊಳ್ಳುತ್ತೇವೆ. ಇಲ್ಲವಾದರೆ ನಾವು ಗೌಪ್ಯ ಕಾಪಾಡುತ್ತೇವೆ. ಆಪ್ತ ಸಮಾಲೋಚಕರನ್ನು ಭೇಟಿಯಾಗುವುದರ ಕುರಿತು ಸಮಾಜದಲ್ಲಿನ ದೃಷ್ಟಿಕೋನ ಸರಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎನ್ನುವುದು ನಿಮ್ಹಾನ್ಸ್‌ ಸೆಂಟರ್‌ ಫಾರ್ ವೆಲ್‌ ಬೀಯಿಂಗ್‌ನ ಇನ್‌ಚಾರ್ಜ್‌ ಟಾಪ್‌ ನರ್ಸ್‌ ಪದ್ಮಾವತಿ ಅವರ ಅಭಿಪ್ರಾಯ.

ಬಹುತೇಕ ಮಹಿಳೆಯರು ಉದ್ಯೋಗಸ್ಥ ಜೀವನವನ್ನು ತಾವಾಗಿಯೇ ಸರಿದೂಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಬಹುಪಾತ್ರಗಳ ನಿರ್ವಹಣೆ ಅನಿವಾರ್ಯವಾದಾಗ ಮಾತ್ರ ಆಪ್ತಸಮಾಲೋಚಕರ ಮೊರೆ ಹೋಗುತ್ತಾರೆ. ಆಗ ಆಕೆಗೆ ಕೆಲಸದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ವಿಫಲವಾಗುತ್ತಾಳೆ ಇದರಿಂದಾಗಿ ನಮ್ಮ ಸಲಹೆ ಪಡೆಯುತ್ತಾರೆ. ಅನೇಕರು ಟೆಲಿಫೋನ್‌ ಮೂಲಕವು ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಉದ್ಯೋಗದಲ್ಲಾಗಲಿ ಅಥವಾ, ಕುಟುಂಬದಲ್ಲಾಗಲಿ ಮಹಿಳೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಆಕೆ ಹೆಚ್ಚು ಒತ್ತಡಗಳಿಗೆ ಒಳಗಾಗುತ್ತಾಳೆ ಎಂದು ಅವರು ಮಾಹಿತಿ ನೀಡುತ್ತಾರೆ.

‘ಆಪ್ತಸಮಾಲೋಚನೆ ಪಡೆಯುವಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗಸ್ಥ ಪುರಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಸಂಬಂಧಗಳು, ಕೆಲಸ ಮತ್ತು ಕುಟುಂಬದ ಸಮತೋಲನ ಉದ್ಯೋಗಸ್ಥ ಮಹಿಳೆಯರ ದೊಡ್ಡ ಸವಾಲು. ತಿಂಗಳಿಗೆ ಕನಿಷ್ಠ 20 ಇಂತಹ ಮಹಿಳೆಯರು ನಮ್ಮ ಕೇಂದ್ರಕ್ಕೆ ಬೇಟಿ ನೀಡುತ್ತಾರೆ. ಮಹಿಳೆಯರು ಕೆಲಸದಲ್ಲಿ ಹೆಚ್ಚು ದಕ್ಷತೆಯನ್ನು ಬಯಸುವುದು ಇದಕ್ಕೆ ಕಾರಣವಾಗಿರಬಹುದು’ ಎನ್ನುವುದು ನಿಮ್ಹಾನ್ಸ್‌ ಸೆಂಟರ್‌ ಫಾರ್ ವೆಲ್‌ ಬೀಯಿಂಗ್‌ನ ಇನ್‌ಚಾರ್ಜ್‌ ಡಾ ಪ್ರಭಾ ಚಂದ್ರ ಅವರ ಅನಿಸಿಕೆ.

‘ಉದ್ಯೋಗಸ್ಥ ಮಹಿಳೆಗೆ ಆಕೆಗೆಂದು ಸಮಯ ಸಿಗುವುದೇ ದುಸ್ತರ. ಸಮಯ ಹೊಂದಾಣಿಕೆಯ ಸಲುವಾಗಿ ನಮ್ಮ ಕೇಂದ್ರಕ್ಕೆ ಬರುವ ಮಹಿಳೆಯರ ಸಂಖ್ಯೆಯಲ್ಲಿ ಪ್ರತಿವರ್ಷ ಶೇ 30 ರಿಂದ 40 ರಷ್ಟು ಹೆಚ್ಚಾಗುತ್ತಿದೆ. ಕುಟುಂಬ ಸದಸ್ಯರಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ಅನೇಕ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ. ಕಾರ್ಪೋರೇಟ್‌ ಕಂಪೆನಿಗಳಲ್ಲಿ ಕಾರ್ಪೋರೇಟ್‌ ಕೌನ್ಸಲರ್ಸ್‌ಗಳ ನೇಮಕವು ಹೆಚ್ಚುತ್ತಿದೆ‌ ಎನ್ನುತ್ತಾರೆ ಆಪ್ತಸಮಾಲೋಚಕಿ ಸುನಿತಾ ರಾವ್‌.

ಅವತಾರ್ ಗ್ರೂಪ್‌ ಸಂಸ್ಥೆಯ ಸಂಸ್ಥಾಪಕಿ ಡಾ ಸೌಂದರ್ಯ ರಾಜೇಶ್‌ ಅವರು 2014ರಲ್ಲಿ ನಡೆಸಿದ ಸಮೀಕ್ಷೆಯು ಉದ್ಯೋಗ ಸ್ಥಳದಲ್ಲಿನ ಒತ್ತಡದ ಕಾರಣದಿಂದಾಗಿ ಮಹಿಳೆಯರಲ್ಲಿ ವರ್ತನೆಗೆ ಸಂಬಂಧಿತ ಸಮಸ್ಯೆಗಳು (behavioural disorders) ಗಣನೀಯವಾಗಿ ಏರುತ್ತಿವೆ ಎನ್ನುತ್ತದೆ.

‘ಉದ್ಯೋಗಸ್ಥ ಮಹಿಳೆಯರು ಹೆಚ್ಚು ಆಪ್ತಸಮಾಲೋಚಕರನ್ನು ಭೇಟಿಯಾಗುತ್ತಿದ್ದಾರೆ ಎನ್ನುವುದನ್ನು ನಕಾರಾತ್ಮಕವಾಗಿ ನೋಡಬೇಕಿಲ್ಲ. ಈ ಕುರಿತು ಜಾಗೃತಿ ಹೆಚ್ಚುತ್ತಿದೆ ಎನ್ನಬಹುದು. ಹಿಂದೆಯೂ ಸ್ತ್ರೀಯರು ಒತ್ತಡದಿಂದ ಬಳಲುತ್ತಿದ್ದರು. ಆದರೆ ಹೇಳಿಕೊಳ್ಳುತ್ತಿರಲಿಲ್ಲ. ಇಂದು ಈ ಜಾಗೃತಿಯ ಕಾರಣದಿಂದಾಗಿ ಆಪ್ತ ಸಮಾಲೋಚಕರನ್ನು ಭೇಟಿಯಾಗುವ ಉದ್ಯೋಗಸ್ಥ ಮಹಿಳೆಯರಲ್ಲಿ ಶೇ 20 ರಷ್ಟು ಹೆಚ್ಚಾಗಿದೆ. ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣವಾಗಿಬಹುದು’ ಎನ್ನುತ್ತಾರೆ ಆಪ್ತಸಮಾಲೋಚಕ ಅರುಣ್‌ ಕುಮಾರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.