ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ತೋಪಿನಲ್ಲಿ ಹಣ್ಣು ತಿನ್ನುವ ಸುಗ್ಗಿ

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಮಾವಿನ ಋತು ಆರಂಭವಾಗಿದೆ. ಎಲ್ಲೆಡೆ ಈಗ ಮಾವಿನ ಘಮ. ಹಣ್ಣುಗಳ ರಾಜ ‘ಮಾವು’ ಹೆಸರು ಕೇಳಿದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳಿಕೊಳ್ಳುತ್ತವೆ. ರಸವತ್ತಾದ ಮಾವಿನ ರಸಾನುಭೂತಿಗೆ ಹಿರಿಯರು, ಕಿರಿಯರೆಂಬ ಭೇದವಿಲ್ಲ. ಮಾವಿನ ರಸಾಸ್ವಾದದಲ್ಲಿ ಎಲ್ಲರೂ ಮೈಮರೆಯುತ್ತಾರೆ. ಹೀಗಿರುವಾಗ, ಸಾವಯವ ಮಾವಿನ ತೋಪಿನಲ್ಲಿ ಬಾದಾಮಿ ಮಾವನ್ನು ಚಪ್ಪರಿಸುತ್ತಾ, ಗ್ರಾಮೀಣ ಆಟಗಳನ್ನು ಆಡುತ್ತಾ, ಸಾವಯವ ಊಟ ಸವಿಯುವ ಅವಕಾಶ ಸಿಕ್ಕಿದರೆ?

ಜೆ.ಪಿ.ನಗರದ ಮೃಣ್ಮಯಿ ಸಂಸ್ಥೆ ಈ ವರ್ಷವೂ, ಹಣ್ಣು ಕಿತ್ತು ತಿನ್ನುವ  ಸುಗ್ಗಿಯನ್ನು ಮಾವುಪ್ರಿಯರ ಮುಂದಿಟ್ಟಿದೆ. ಮೇ 20 ರಂದು ಬೆಳಿಗ್ಗೆ 10.30 ರಿಂದ ಸಂಜೆ 5ರವರೆಗೆ ಮಾವಿನ ಲೋಕದಲ್ಲಿ ಮಿಂದೇಳುವ ಅವಕಾಶವಿದು. ಮಾಗಡಿ ಸಮೀಪ ಮೋಟಗೇನಹಳ್ಳಿಯ ಕೇಶವ ಮೂರ್ತಿ ಅವರ ಮೂರು ಎಕರೆ ಮಾವಿನ ತೋಪು ಅಂದು ಮಾವುಪ್ರೇಮಿಗಳ ಸ್ವರ್ಗವಾಗಲಿದೆ. 13 ಎಕರೆಯಲ್ಲಿ ಮಾವಿನೊಂದಿಗೆ ತೆಂಗು, ಗೋರೆ ಫಲಗಳೂ ಇವೆ. ಆದರೆ ಈ ಸುಗ್ಗಿಯಲ್ಲಿ ಮಾವಿನದ್ದೇ ಕಾರುಬಾರು.

ಬೆಳಿಗ್ಗೆ 10.30ಕ್ಕೆ ತೋಪಿಗೆ ಕಾಲಿಡುತ್ತಿದ್ದಂತೆ ರಾಗಿ ಅಂಬಲಿ, ಮಜ್ಜಿಗೆ, ಉಪ್ಪಿನಕಾಯಿ ಹಾಗೂ ಈರುಳ್ಳಿಯ ಸ್ವಾಗತ ಸಿಗಲಿದೆ. ಕುಂಟೆಬಿಲ್ಲೆ, ಜೋಕಾಲಿ, ಟೈರ್ ಓಟ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಮುದ ನೀಡಲಿವೆ. ಅಲಂಕೃತಗೊಂಡ ಎತ್ತಿನಗಾಡಿ ಸವಾರಿ ಮಾಡಿ ತೋಪನ್ನು ಸುತ್ತುವ ವ್ಯವಸ್ಥೆಯೂ ಇರಲಿದೆ. ಆಡಿ, ನಲಿದ ದೇಹ, ಮನಸ್ಸನ್ನು ಮಧ್ಯಾಹ್ನದ ಸಾವಯವ ಊಟ ತಣಿಸಲಿದೆ. ಮಾವಿನ ಕಾಯಿ ಚಿತ್ರಾನ್ನ, ನವಣೆ ಪಾಯಸ, ಪಲ್ಯ, ಸಿಹಿತಿನಿಸು ಸವಿಯಬಹುದು.

ಮಧ್ಯಾಹ್ನ 2.30 ರಿಂದ 3.30 ವರೆಗೆ ನಿಜವಾದ ‘ಮಾವು ಕೀಳುವ ಸುಗ್ಗಿ’ ಆರಂಭವಾಗುತ್ತದೆ. ತೋಪಿನ ಮಾವಿನ ಹಣ್ಣುಗಳನ್ನು ಕಿತ್ತು ಸಂಭ್ರಮಿಸಿ, ತಿಂದು ತಣಿಯಬಹುದು. ಮರದಲ್ಲಿ ಮಾವಿನ ಹಣ್ಣುಗಳು ದೊರೆಯುವುದು ವಿರಳವಾದ ಕಾರಣ, ಈಗಾಗಲೇ ಕೊಯ್ದು ಹಣ್ಣುಮಾಡಿರುವ ಮಾವನ್ನು ಸಹ ತೋಪಿನಲ್ಲಿ ಗುಡ್ಡೆಹಾಕಲಾಗಿರುತ್ತದೆ. ಅದನ್ನು ತಿಂದು ಮಾವಿನ ದಾಹ ತಣಿಸಿಕೊಳ್ಳಬಹುದು. ಕಷಾಯ ಕುಡಿದು ಮಾವಿನ ಹಣ್ಣನ್ನು ಪಡೆದು, ಇಳಿಸಂಜೆಯಲ್ಲಿ ತೋಪಿಗೆ ವಿದಾಯ ಹೇಳಬಹುದು.

ರೈತರೊಂದಿಗೆ ಸಾವಯವ ಕೃಷಿ ಕುರಿತ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ. ಕೃಷಿ ಮಾಡಬಯಸುವವರಿಗೆ ಈ ಕಾರ್ಯಕ್ರಮ ಕೈದೀವಿಗೆ ಆಗಲಿದೆ ಎನ್ನುವುದು ಆಯೋಜಕರ ಆಶಯ.

‘ಮಾವನ್ನು ಸಂಭ್ರಮಿಸುವುದರ ಜೊತೆಗೆ ಸಾವಯವ ಕೃಷಿಕರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಕಾರ್ಯಕ್ರಮದ ಪ್ರಮುಖ ಆಶಯ. ಜೊತೆಗೆ ಗ್ರಾಹಕರಿಗೆ ಸಾವಯವ ಕೃಷಿಯ ಮಹತ್ವ, ಇದರ ಸವಾಲು ಹಾಗೂ ಸಾವಯವ ಉತ್ಪನ್ನಗಳಿಗೆ ಏಕೆ ಬೆಲೆ ಹೆಚ್ಚು ಎನ್ನುವುದನ್ನು ಮನವರಿಕೆ ಮಾಡುತ್ತೇವೆ’ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕ ಕೀರ್ತಿಪ್ರಸಾಧ್‌.

ಯುವ ಕೃಷಿಪ್ರೇಮಿಗಳು ಆರಂಭಿಸಿರುವ ಸುಸ್ಥಿರ ಕೃಷಿ ಅಭಿವೃದ್ಧಿ ಸಂಸ್ಥೆ ‘ಮಣ್ಮಯಿ’ ಪ್ರತಿವರ್ಷ ವಿವಿಧ ಸಾವಯವ ಮಾವಿನ ತೋಪಿನಲ್ಲಿ ಮಾವಿನ ಸುಗ್ಗಿ ಆಚರಿಸುತ್ತ ಬಂದಿದೆ. ಒಮ್ಮೆ ಈ ತೋಪಿಗೆ ಭೇಟಿನೀಡಿದ ಗ್ರಾಹಕರು ನಂತರವೂ ರೈತರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಬಹುದು. ತಮಗೆ ಬೇಕಾದಾಗ ಮಾವುಗಳನ್ನು ನೇರವಾಗಿ ರೈತರಿಂದಲೇ ಖರೀದಿಸಬಹುದು.

ಮಾವಿನ ಸುಗ್ಗಿಯಲ್ಲಿ ಭಾಗವಹಿಸಲು ಒಬ್ಬರಿಗೆ ₹ 550. ಎಂಟು ವರ್ಷ ವಯಸ್ಸಿನ ಒಳಗಿನವರಿಗೆ ಉಚಿತ ಪ್ರವೇಶ. ನೋಂದಣಿ ಈಗಾಗಲೇ ಆರಂಭವಾಗಿದೆ. ಜಯನಗರ 4 ನೇ ಬ್ಲಾಕ್‌ನಲ್ಲಿ ‘ಬದುಕು ಕಮ್ಯೂನಿಟಿ’ ಕಾಲೇಜ್‌ಗೆ ಭೇಟಿ ನೀಡಿ ನೇರವಾಗಿ ಹೆಸರು ನೋಂದಾಯಿಸಬಹುದು. ದೂರವಾಣಿ ಮೂಲಕವೂ ನೋಂದಾಯಿಸಿಕೊಳ್ಳಲು ಅವಕಾಶವಿದೆ.

ನೋಂದಣಿಗೆ: 96111 05029/ 97437 31223.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT