ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಗ ಇಲ್ಲವೇ ಉನ್ಮಾದದ ಅಭಿಮಾನಕ್ಕೆ, ಮೋದಿ ಮೋಹಕ್ಕೆ?

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಅತ್ತ ಆಡಳಿತ ವಿರೋಧಿ ಅಲೆ ಇಲ್ಲದ, ಇತ್ತ ಪ್ರತಿಪಕ್ಷ ಕುರಿತ ಪ್ರೀತಿಯೂ ಕಾಣದ ರಾಜ್ಯ ಚುನಾವಣಾ ಕಣ ಹೆಚ್ಚೂ ಕಡಿಮೆ ನಿಗೂಢ. ಕಾಂಗ್ರೆಸ್ ಮುಂದೆ, ಆದರೆ ಸನಿಹದಲ್ಲೇ ಬಿಜೆಪಿ ಅದರ ಬೆನ್ನ ಹಿಂದೆ ಎಂಬಂತಿರುವ ಸನ್ನಿವೇಶ. ಬೆಂಗಳೂರಿನಲ್ಲಿ ಅನುಭವಕ್ಕೆ ಬಂದ ಈ ಸಂಗತಿ ಬೀದರ್‌ನಲ್ಲಿಯೂ ಬದಲಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಕಟ್ಟಾ ಬೆಂಬಲಿಗರ ವಿನಾ ಉಳಿದೆಲ್ಲರ ಪ್ರಕಾರ ಈ ಸಲ ಅತಂತ್ರ ವಿಧಾನಸಭೆಯೇ ಗತಿ.

ಚುನಾವಣಾ ರಣತಂತ್ರದ ಚಾಣಕ್ಯ ಎಂಬ ಬಿರುದಾಂಕಿತರಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯದ ಚುನಾವಣೆ ನೆಲವನ್ನು ಹದಗೊಳಿಸುವ ಕೆಲಸದಲ್ಲಿ ತೊಡಗಿರುವುದು ಹೌದು. ಆದರೆ ಅವರ ಬಹುತೇಕ ಬಹಿರಂಗ ಸಭೆಗಳು ಬಿಜೆಪಿಯ ಪಾಲಿಗೆ ಲಾಭಕ್ಕಿಂತಲೂ ನಷ್ಟದ ಬಾಬತ್ತುಗಳಾಗಿ ಪರಿಣಮಿಸಿವೆ. ಈ ಬೆಳವಣಿಗೆಯನ್ನು ಬಿಜೆಪಿ ತುಟಿ ಕಚ್ಚಿ ಸಹಿಸಿದರೆ, ಮುಚ್ಚಿಡಲಾರದಷ್ಟು ಆನಂದ ಕಾಂಗ್ರೆಸ್ಸಿನದಾಗಿತ್ತು.

ಹೆಚ್ಚು ಏರುಪೇರುಗಳನ್ನು ಕಾಣದ ಇಂತಹ ಯಥಾಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕುತೂಹಲದಿಂದಲೂ, ಬಿಜೆಪಿ ಮತ್ತು ಅದರ ಬೆಂಬಲಿಗ ಸಮುದಾಯವು ಕಾತರದಿಂದಲೂ, ಬಹು ನಿರೀಕ್ಷೆಯಿಂದಲೂ ಉತ್ತರ ದಿಕ್ಕಿನತ್ತ ಕಣ್ಣು ನೆಟ್ಟು ನರೇಂದ್ರ ಮೋದಿಯವರ ಬರವಿಗಾಗಿ ಕಾಯತೊಡಗಿದ್ದವು. ಮೋದಿ ಬರುತ್ತಾರೆ- ಪವಾಡ ನಡೆಸುತ್ತಾರೆ ಎಂಬುದು ಬಿಜೆಪಿಯ ಸ್ವಾಭಾವಿಕ ವಿಶ್ವಾಸವಾದರೆ ಕಾಂಗ್ರೆಸ್ಸಿಗೆ ಒಳಗೆ ಅಳುಕು, ಹೊರಗೆ ಉಡಾಫೆ. ಮೋದಿ ಬಂದೇ ಬಂದರು.

ಕಾಂಗ್ರೆಸ್ ಪಾಲಿಗೆ ಭದ್ರಕೋಟೆ ಎನಿಸಿರುವ ಬಿರುಬಿಸಿಲು ಮತ್ತು ಕಡು ಖಾರದ ಸೀಮೆ ಕಲಬುರ್ಗಿಯಲ್ಲಿ ಗುರುವಾರ ಮೋದಿಯವರ ಬಹಿರಂಗ ಸಭೆಗೆ ಜನವೋ ಜನ. ಎಲ್ಲ ರಸ್ತೆಗಳೂ ಮೋದಿ ಸಭೆಯತ್ತ ಎನ್ನುವ ವಾತಾವರಣ. ಆದರೆ ವಿಜಯಪುರದಲ್ಲಿ ಕೆಲ ದಿನಗಳ ಹಿಂದೆ ಅಮಿತ್ ಶಾ ರೋಡ್ ಷೋಗೆ ಕಂಡುಬಂದ ಸಂಭ್ರಮ, ಕಮಾನುಗಳು, ಕಂಗೊಳಿಸಿದ ಕಾವಿ ತೋರಣಗಳು ಇಲ್ಲಿ ಮೋದಿಯಂತಹ ಮೋದಿಯವರಿಗೂ ಕಾಣಲಿಲ್ಲ. ಪಾಳುಬಿದ್ದಿರುವ ಐತಿಹಾಸಿಕ ಎಂ.ಎಸ್.ಕೆ. ಮಿಲ್ ಪ್ರಬಲ ಕಾರ್ಮಿಕ ಸಂಘಟನೆಗೆ ಸಾಕ್ಷಿಯಾಗಿ ಶಿಥಿಲಗೊಂಡು ಮುಳ್ಳು ಬಡಿದು ಮಲಗಿದೆ. ಮಲ್ಲಿಕಾರ್ಜುನ ಖರ್ಗೆ, ಎಸ್.ಕೆ.ಕಾಂತಾ ಮುಂತಾದ ಧೀಮಂತರಿರುವ, ಎಡಪಂಥೀಯ ಚಳವಳಿಗೆ ಹೆಸರಾದ, ಲಕ್ಷಾಂತರ ದಲಿತರು ಕಲೆತು ದಿನಗಟ್ಟಲೆ ಆಚರಿಸುವ ಅಭೂತಪೂರ್ವ ಅಂಬೇಡ್ಕರ್ ದಿನಾಚರಣೆಗಳ ಕಲಬುರ್ಗಿ ಮೋದಿಯವರಿಗೆ ಒಲಿಯುವುದು ಸುಲಭ ಅಲ್ಲ. ಆದರೂ ಸುತ್ತಮುತ್ತಲ ಊರುಗಳಿಂದ ಜನ ಬಂದಿದ್ದರು ಮತ್ತು ಕರೆತರಲಾಗಿತ್ತು ಕೂಡ.

ಹನ್ನೆರಡೂವರೆಯ ಸುಡು ಬಿಸಿಲಿನಲ್ಲಿ ದಣಿಯದ ಜನ ತೊರೆಯಾಗಿ ಹರಿಯತೊಡಗಿತ್ತು. ಒಳಗೆ ಜಾಗ ಸಾಲದೆ ಹೊರಕ್ಕೆ ಧಾವಿಸತೊಡಗಿತ್ತು. ಶಹಾಪುರದಿಂದ ಈ ಸಭೆಗೆಂದೇ ಬಸ್ಸಿನಲ್ಲಿ ಬಂದಿದ್ದ ಸಿದ್ಧು ಎಂಬ ಯುವಕ ತಡವಾಯಿತೆಂದು ಧಗೆಯ ಲೆಕ್ಕಿಸದೆ ದಾಪುಗಾಲು ಹಾಕಿದ್ದ.

ಕಲಬುರ್ಗಿಯ ಸುರಿದ ಝಳದಲ್ಲಿ ಮೋದಿಯವರಿಗೆ ಮೈಸೂರು ಜರಿ ಪೇಟ ತೊಡಿಸಿದ್ದು ವಿಚಿತ್ರವೆನಿಸಿತ್ತು. ತೋಗಾರಿಯಾ ಕಾಣಾಜಾ (ತೊಗರಿಯ ಕಣಜ) ಎಂದು ಮಾತಿಗಾರಂಭಿಸಿದ ಮೋಡಿಗಾರ ಮೋದಿ ಸಭೆಯ ಚಿತ್ತವನ್ನು ತಮ್ಮತ್ತ ಸೆಳೆದುಕೊಳ್ಳಲು ತಡವಾಗಲಿಲ್ಲ. ಸ್ಥಳೀಯ ರಾಜಕೀಯ ದೈತ್ಯ, ದಲಿತ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡದೇ ವಂಚಿಸಿತು ಎಂದು ಸಹಾನುಭೂತಿ ನಟಿಸಿ, ಅದೇ ಉಸಿರಿನಲ್ಲಿ ಅವರು ‘ಅಪಾರ ಸಂಪತ್ತನ್ನು ಕಲೆಹಾಕಿದ್ದಾರೆ’ ಎಂದು ಕಟಕಿಯಾಡಿದರು. ರೈತರ ಉತ್ಪನ್ನಗಳಿಗೆ ಅತ್ಯುತ್ತಮ ಬೆಂಬಲ ದರ ನೀಡಿರುವುದಾಗಿ ತಮ್ಮ ಬೆನ್ನು ಚಪ್ಪರಿಸಿಕೊಂಡು, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ವಿರೋಧಿ ಎಂದು ಜರೆದರು.

ಸಭೆ ಮುಗಿಯುತ್ತಿದ್ದಂತೆ ಹೊರ ಹರಿದ ಜನಪ್ರವಾಹದಲ್ಲಿ 15-20 ಅಡಿ ಎತ್ತರದ ಮೋದಿ, ಅಮಿತ್ ಶಾ, ಯಡಿಯೂರಪ್ಪ ಕಟೌಟ್‌ಗಳನ್ನು ಹಿಡಿದು ಸಂಭ್ರಮಿಸಿದವರು ಎಷ್ಟೋ ಮಂದಿ. ಮೋದಿ ಮುಖವಾಡಗಳನ್ನು ಧರಿಸಿದ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡ ತಾಯಂದಿರಿಗೆ ಲೆಕ್ಕವಿಲ್ಲ.

ಆದರೆ ತಾಸಿನ ನಂತರ ಬಳ್ಳಾರಿಯ ರ‍್ಯಾಲಿಯಲ್ಲಿ ಕಂಡುಬಂದ ಅತಿಶಯ ಜನಸ್ಪಂದನ ಕಲಬುರ್ಗಿಯಲ್ಲಿ ಕಾಣಬರಲಿಲ್ಲ. ಬಳ್ಳಾರಿಯ ಸಭೆಯನ್ನು ತಮ್ಮ ಮೋಡಿಗೆ ಕೆಡವಿಕೊಂಡಿದ್ದರು ಮೋದಿ. ಹಿಂದುಳಿದ ವರ್ಗಗಳಿಗೆ ಸೇರಿದ ಚಾಯ್ ವಾಲಾ ಎನ್ನುತ್ತಿದ್ದಂತೆ ‘ಮೋದಿ... ಮೋದಿ’ ಎಂಬ ಲಯಬದ್ಧ ಭಜನೆಗೆ ತೊಡಗಿತ್ತು ಸಭೆ. ಬಳ್ಳಾರಿಯನ್ನು ಗಣಿ ಕಳ್ಳಕಾಕರು, ದರೋಡೆಕೋರರ ನಾಡೆಂದು ದೇಶ ವಿದೇಶಗಳಲ್ಲಿ ಅಪಮಾನ ಮಾಡಿರುವವರಿಗೆ ಇದೇ ತಿಂಗಳ 12ರಂದು ಪಾಠ ಕಲಿಸಿ ಎಂದು ಕರೆ ನೀಡಿದ ಮೋದಿ ಮಾತಿನಲ್ಲಿ, ಈ ಜಿಲ್ಲೆಯಲ್ಲಿ ನಡೆದ ವ್ಯಾಪಕ ಅಕ್ರಮ ಗಣಿಗಾರಿಕೆಯನ್ನು ಸಮರ್ಥಿಸಿಕೊಳ್ಳುವ ದನಿಯಿತ್ತು. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಲಂಚ ನೀಡಿದ ಆಪಾದನೆ ಎದುರಿಸಿರುವ ಸೋಮಶೇಖರ ರೆಡ್ಡಿ ಅವರು ಮೋದಿಯವರ ಜೊತೆ ವೇದಿಕೆ ಹಂಚಿಕೊಂಡು ಕಡೆಯವರೆಗೂ ಹರ್ಷದಿಂದ ‘ಗೆಲುವಿನ ನಗೆ’ ಬೀರಿದ್ದು ವಿಶೇಷ. ಐದು ವರ್ಷಗಳಾದರೂ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಗಣಿ ನೀತಿ ರೂಪಿಸಲು ವಿಫಲವಾದ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಾದಯಾತ್ರೆಗಳ ನಾಟಕ ಆಡಿತು ಎಂದು ಟೀಕಿಸಿದರು. ಕಾಂಗ್ರೆಸ್ಸನ್ನೇ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳ ಶತ್ರು ಎಂದು ದಾಳಿ ಮಾಡಿದರು. ಉತ್ತರ ಭಾರತದ ಪಕ್ಷವೆಂದು ಟೀಕೆಗೆ ಗುರಿಯಾಗಿದ್ದ ಬಿಜೆಪಿ ದಕ್ಷಿಣದಲ್ಲಿ ಜನಮನ ಗೆದ್ದಿತು, ದಕ್ಷಿಣ ಭಾರತದ ವೆಂಕಯ್ಯನಾಯ್ಡು ಅವರನ್ನು ಉಪರಾಷ್ಟ್ರಪತಿ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಮಂತ್ರಿ ಮಾಡಿತು ಎಂದು ಸಾರಿ ಹೇಳಿದರು.

ಮೋದಿಯವರ ಸಭೆಗಳಿಗೆ ಸೇರಿದ ಜನರಾಶಿ, ರಾಹುಲ್ ಗಾಂಧಿ ರ‍್ಯಾಲಿಗಳ ಜನದಟ್ಟಣೆಯನ್ನೂ ಮೀರಿದ್ದು ನಿರ್ವಿವಾದದ ಸಂಗತಿ.

2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮೋದಿಯವರ ಕುರಿತ ಯುವಜನರ ಉನ್ಮಾದದ ಅಭಿಮಾನ ತುಸು ತಗ್ಗಿರುವುದು ನಿಜ. ಆದರೆ, ಸ್ಥಳೀಯ ಸಂಗತಿಗಳು, ವ್ಯಕ್ತಿತ್ವಗಳ ಆಧಾರದ ಮೇಲೆ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಲು ಬರುವುದಿಲ್ಲ. 2019ಕ್ಕೆ ಈ ಉನ್ಮಾದಕ್ಕೆ ಮರುಜೀವ ದೊರೆತಲ್ಲಿ ಅಚ್ಚರಿ ಪಡಬೇಕಿಲ್ಲ. ‘ಪ್ರಜಾವಾಣಿ ಚುನಾವಣಾ ಪಯಣ’ದುದ್ದಕ್ಕೂ ಅನುಭವಕ್ಕೆ ಬಂದ ಸಂಗತಿಯಿದು. ನೋಟು ರದ್ದು ನಿರ್ಧಾರದಿಂದ ತೊಂದರೆಯಾದದ್ದು ನಿಜ, ಆದರೆ ದೇಶದ ಹಿತಕ್ಕಾಗಿ ಅದನ್ನು ಸಹಿಸಿಕೊಳ್ಳಬೇಕು, ಕಾಂಗ್ರೆಸ್ ಮಾಡಿದ ಅನಾಹುತಗಳನ್ನು ಸರಿಪಡಿಸುವುದು ಐದು ವರ್ಷದಲ್ಲಿ ಸಾಧ್ಯವೇ ಎಂದೇ ಪ್ರಶ್ನಿಸುವ ಅನೇಕ ಯುವಕರು ಎದುರಾದರು. ಯುವಕರು ಮಾತ್ರವಲ್ಲ ಹಿರಿ ತಲೆಮಾರಿನಲ್ಲೂ ಇಂತಹ ಅಭಿಪ್ರಾಯ ವ್ಯಾಪಕ. ಈ ಮಾತಿಗೆ ಅಲ್ಲಲ್ಲಿ ಅಪವಾದಗಳು ಉಂಟು. ಬಸವಕಲ್ಯಾಣದ ಹೊರವಲಯದಲ್ಲಿ ಎದುರಾದ ಮೂವರು ಯುವಕರು ‘ಏನು ಮಾಡಿದ್ದಾರೆ ಮೋದಿ’ ಎಂದು ಪ್ರಶ್ನಿಸಿದರು.

ಮೋದಿಯವರು ಬಂದು ಹೋಗಿರುವ ಭಾಗಗಳಲ್ಲಿ ಅವರ ಕುರಿತು ಆಸಕ್ತಿ, ಕುತೂಹಲ, ಚರ್ಚೆ ಗರಿಗೆದರಿದ ಸೂಚನೆಗಳು ನೆಲಮಟ್ಟದಲ್ಲಿ ನಿಚ್ಚಳವಾಗಿ ಗೋಚರವಾಗುತ್ತಿವೆ. ಮುಂಬರುವ ದಿನಗಳಲ್ಲಿ ಈ ಬೆಳವಣಿಗೆಯನ್ನು ಎದುರಿಸಲು ಕಾಂಗ್ರೆಸ್ ಏನು ಮಾಡಬಲ್ಲದು ಎಂಬುದು ಕುತೂಹಲಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT