ಮಂಗಳವಾರ, ಮಾರ್ಚ್ 9, 2021
31 °C

ಸನ್‌ರೈಸರ್ಸ್‌, ಡೆಲ್ಲಿ ಮುಖಾಮುಖಿ: ಬಲಿಷ್ಠ ಬೌಲಿಂಗ್‌ ಪಡೆಗೆ ಆಕ್ರಮಣಕಾರಿ ಬ್ಯಾಟಿಂಗ್ ಬಳಗದ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಸನ್‌ರೈಸರ್ಸ್‌, ಡೆಲ್ಲಿ ಮುಖಾಮುಖಿ: ಬಲಿಷ್ಠ ಬೌಲಿಂಗ್‌ ಪಡೆಗೆ ಆಕ್ರಮಣಕಾರಿ ಬ್ಯಾಟಿಂಗ್ ಬಳಗದ ಸವಾಲು

ಹೈದರಾಬಾದ್‌: ಉತ್ತಮ ಬೌಲಿಂಗ್ ದಾಳಿ ಸಂಘಟಿಸಬಲ್ಲ ಸನ್‌ ರೈಸರ್ಸ್‌ ಹೈದರಾಬಾದ್‌ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಡೆಲ್ಲಿ ಡೇರ್‌ ಡೆವಿಲ್ಸ್ ತಂಡಗಳು ಐಪಿಎಲ್‌ ಪಂದ್ಯದಲ್ಲಿ ಶನಿವಾರ ಸೆಣಸಲಿವೆ. ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ರಾತ್ರಿ ನಡೆಯಲಿರುವ ಪಂದ್ಯ ಡೇರ್‌ ಡೆವಿಲ್ಸ್‌ಗೆ ಹೆಚ್ಚು ಮಹತ್ವದ್ದಾಗಿದೆ.

ಟೂರ್ನಿಯಲ್ಲಿ ನಿರಂತರ ಸೋಲಿನ ಸುಳಿಯಲ್ಲಿ ಸಿಲುಕಿರುವ ಡೆಲ್ಲಿ ತಂಡ ಒಂಬತ್ತು ಪಂದ್ಯಗಳ ಪೈಕಿ ಕೇವಲ ಮೂರನ್ನು ಗೆದ್ದಿದ್ದು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆದ್ದರಿಂದ ಪ್ಲೇ ಆಫ್‌ ಹಂತದ ಹಾದಿ ಕಠಿಣವಾಗಿದೆ. ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡದ ಆಸೆ ಜೀವಂತವಾಗಿರಲು ಸಾಧ್ಯ.

ನಿರಂತರ ಸೋಲಿನ ನಂತರ ಗೌತಮ್ ಗಂಭೀರ್‌ ತಂಡದ ನಾಯಕತ್ವವನ್ನು ತೊರೆದಿದ್ದರು. ಈಗ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ತಂಡ ಮರುಜೀವ ಪಡೆದುಕೊಂಡಿದೆ. ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿರುವ ಈ ತಂಡದ ಭರವಸೆ ಹೆಚ್ಚಿದೆ.

ತಂಡದ ಬ್ಯಾಟಿಂಗ್ ವಿಭಾಗಕ್ಕೆ ಶ್ರೇಯಸ್ ಅಯ್ಯರ್‌. ಪೃಥ್ವಿ ಶಾ ಮತ್ತು ರಿಷಭ್ ಪಂತ್‌ ಬಲ ತುಂಬಿದ್ದಾರೆ. ಕಾಲಿನ್ ಮನ್ರೊ ಮತ್ತು ಗ್ಲೆನ್ ಮ್ಯಾಕ್ಸ್‌ ವೆಲ್ ಕೂಡ ಮಿಂಚಿದರೆ ಎದುರಾಳಿ ಬೌಲರ್‌ಗಳು ಪರದಾಡಬೇಕಾದೀತು.

ಬೌಲರ್‌ಗಳ ಪೈಕಿ ವೇಗಿ ಟ್ರೆಂಟ್ ಬೌಲ್ಟ್‌ ಉತ್ತಮ ಲಯದಲ್ಲಿದ್ದು ಒಟ್ಟು 13 ವಿಕೆಟ್‌ ಕಬಳಿಸಿ ಮಿಂಚಿದ್ದಾರೆ. ಯುವ ಆಟಗಾರ ಆವೇಶ್ ಖಾನ್‌, ಅನುಭವಿ ಲಿಯಾನ್ ಪ್ಲಂಕೆಟ್‌ ಮತ್ತು ಸ್ಪಿನ್ನರ್‌ ಶಹಬಾಜ್ ನದೀಮ್‌ ಅವರ ಬಲ ತಂಡಕ್ಕೆ ಇದೆ.

ವಿಶ್ವಾಸದಲ್ಲಿ ಸನ್‌ರೈಸರ್ಸ್‌: ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿರುವ ಸನ್‌ ರೈಸರ್ಸ್ ತಂಡ ವಿಶ್ವಾಸದ ಅಲೆಯಲ್ಲಿದೆ. ಕಡಿಮೆ ಮೊತ್ತ ಗಳಿಸಿದರೂ ಎದು ರಾಳಿಗಳನ್ನು ಕಟ್ಟಿ ಹಾಕಿ ಜಯ ಕಸಿದು ಕೊಳ್ಳಬಲ್ಲ ಬೌಲರ್‌ಗಳು ಇರುವುದು ತಂಡದ ಶಕ್ತಿ.

ಪ್ರಮುಖ ಬೌಲರ್‌ ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯಲ್ಲೂ ಉತ್ತಮ ಬೌಲಿಂಗ್ ಮಾಡಲು ಸಾಧ್ಯವಾಗಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ.

ಸಿದ್ಧಾರ್ಥ್ ಕೌಲ್‌, ರಶೀದ್ ಖಾನ್‌, ಸಂದೀಪ್ ಶರ್ಮಾ, ಬೇಸಿಲ್ ಥಂಪಿ ಅವರೊಂದಿಗೆ ಆಲ್‌ರೌಂಡರ್‌ಗಳಾದ ಶಕೀಬ್‌ ಅಲ್ ಹಸನ್‌, ಮಹಮ್ಮದ್ ನಬಿ ಮತ್ತು ಯೂಸುಫ್ ಪಠಾಣ್‌ ಎದುರಾಳಿ ತಂಡಕ್ಕೆ ಸವಾಲು ಒಡ್ಡಲು ಸಮರ್ಥರಾಗಿದ್ದಾರೆ. ಶನಿವಾರದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕಣಕ್ಕೆ ಇಳಿಯುವ ವಿಶ್ವಾಸವನ್ನು ನಾಯಕ ಕೇನ್ ವಿಲಿಯಮ್ಸನ್‌ ವ್ಯಕ್ತಪಡಿಸಿದ್ದಾರೆ.

ವಿಲಿಯಮ್ಸನ್ ಅವರೊಂದಿಗೆ ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ, ದೀಪಕ್ ಹೂಡಾ ಮತ್ತು ಯೂಸುಫ್ ಪಠಾಣ್‌ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

**

ಗೆಲುವಿನ ಓಟ ಮುಂದುವರಿಸುವ ಬಯಕೆ

ಇಲ್ಲಿಯ ವರೆಗಿನ ಸಾಧನೆ ಯಶಸ್ಸಿನ ಹಾದಿಯಲ್ಲಿ ಮಾಡಿದ ಸಣ್ಣ ಪ್ರಯತ್ನಗಳು ಮಾತ್ರ. ಇನ್ನು ಮುಂದೆಯೂ ಗೆಲುವಿನ ಓಟವನ್ನು ಮುಂದುವರಿಸುವುದು ತಂಡದ ಉದ್ದೇಶ ಎಂದು ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕ ಕೇನ್ ವಿಲಿಯಮ್ಸನ್ ಹೇಳಿದರು.

‘ತಂಡದ ಒಟ್ಟು ಸಾಮರ್ಥ್ಯ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಾ ಸಾಗುತ್ತಿದೆ. ಇದೇ ಲಯವನ್ನು ಕಾಪಾಡಿಕೊಂಡು ಗೆಲುವಿನ ಹಾದಿಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದರು.

ಸನ್‌ರೈಸರ್ಸ್‌ ಹೈದರಾಬಾದ್ ಆಡಿದ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.