ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ ಬಿಡಬೇಡಿ

Last Updated 4 ಮೇ 2018, 19:41 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಮ್ಮ ಸರ್ಕಾರದ ಅವಧಿಯಲ್ಲಿ ಬಳ್ಳಾರಿಯ ಗಣಿ ಧಣಿಗಳನ್ನು ಜೈಲಿಗೆ ಕಳುಹಿಸಿದ್ದೆವು. ಆದರೆ, ಮೋದಿ ಅವರೆಲ್ಲರೂ ಹೊರಬರುವಂತೆ ನೋಡಿಕೊಂಡರು. ಇಷ್ಟೇ ಅಲ್ಲ, ಅವರನ್ನು ವಿಧಾನಸೌಧದ ಒಳಕ್ಕೆ ಕಳುಹಿಸಲು ಪಣ ತೊಟ್ಟಿದ್ದಾರೆ. ಗಣಿ ಧಣಿಗಳ ವಿಧಾನಸಭೆ ಪ್ರವೇಶಕ್ಕೆ ರಾಜ್ಯದ ಜನ ಅವಕಾಶ ನೀಡಬಾರದು’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಕಾಳಗಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಮೋದಿ ಹೇಳುತ್ತಾರೆ. ಆದರೆ, ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ಬಾಯಿ ಬಿಡುವುದಿಲ್ಲ. ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆ ಈಗ ಬದಲಾಗಿದ್ದು, ‘ಬೇಟಿ ಬಚಾವೋ ಬಿಜೆಪಿ ಎಂಎಲ್‌ಎ ಸೆ’ ಎಂದಾಗಿದೆ ಎಂದು ವ್ಯಂಗ್ಯವಾಡಿದರು.

‘ಮೋದಿಗೆ ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ನನ್ನ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದಾರೆ. ನಾನು ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ಆದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಸಾಧನೆ ಏನು ಎಂದು ನಿರಂತರವಾಗಿ ಪ್ರಶ್ನಿಸುತ್ತೇನೆ. ಮೋದಿ ಅವರಿಗೆ ಯಾವ ಕಾರಣಕ್ಕೂ ಹೆದರುವುದಿಲ್ಲ’ ಎಂದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುತ್ತೇನೆ. ಇದು ನಾನು ನೀಡುತ್ತಿರುವ ವಾಗ್ದಾನ

ಎಚ್.ಡಿ.ಕುಮಾರಸ್ವಾಮಿ

ರಾಜ್ಯ ಜೆಡಿಎಸ್‌ ಘಟಕದ ಅಧ್ಯಕ್ಷ

*****

‘ಗುರುಗ್ರಂಥ ಸಾಹೇಬ’ದ ದರ್ಶನ ಪಡೆದ ರಾಹುಲ್

ಬೀದರ್: ಸಿಖ್ಖರ ಪವಿತ್ರ ಸ್ಥಳವಾದ ಇಲ್ಲಿನ ಗುರುನಾನಕ ಝೀರಾದಲ್ಲಿ ರಾಹುಲ್‌ ಗಾಂಧಿ ‘ಗುರುಗ್ರಂಥ ಸಾಹೇಬ’ದ ದರ್ಶನ ಪಡೆದರು.

ಪೂರ್ವ ನಿಯೋಜಿತ ಕಾರ್ಯಕ್ರಮವನ್ನು ಬದಿಗೊತ್ತಿ ಶುಕ್ರವಾರ ಬೆಳಿಗ್ಗೆ ಗುರುದ್ವಾರಕ್ಕೆ ಭೇಟಿ ನೀಡಿದರು. ರಾಹುಲ್‌ ಅವರನ್ನು ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಬಲಬೀರ್‌ ಸಿಂಗ್‌ ಸ್ವಾಗತಿಸಿದರು.

ರಾಹುಲ್‌ ತಲೆಗೆ ಕೇಸರಿ ಬಣ್ಣದ ವಸ್ತ್ರವನ್ನು ಕಟ್ಟಿಕೊಂಡು ಭಕ್ತಿಭಾವದಿಂದ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಸಮಿತಿ ವತಿಯಿಂದ ಅವರಿಗೆ ಪೇಟಾ ಸುತ್ತಿ, ಕೇಸರಿ ಶಾಲು ಹೊದಿಸಲಾಯಿತು. ಈ ಸಂದರ್ಭದಲ್ಲಿ ಗುರುದ್ವಾರದ ಸೇವಕರು ರಾಹುಲ್‌ಜಿ ಪ್ರಧಾನಿಯಾಗಲಿ ಎಂದು ಶುಭ ಹಾರೈಸಿದರು.

ರಾಹುಲ್ ಗಾಜಿನ ಕೊಠಡಿಯೊಳಗೆ ಹೋಗಿ ‘ಗುರುಗ್ರಂಥ ಸಾಹೇಬ’ಕ್ಕೆ ಚೌರಿ ಸೇವೆ ಮಾಡಿದರು. ಹೊರ ಬರುವ ಮೊದಲು ಬಾಗಿಲಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ನಂತರ ಪಕ್ಕದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡದೊಳಗೆ ಪ್ರವೇಶಿಸಿ ಕರಕುಶಲ ಕಲೆ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT