ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತಿಮ ಆದೇಶಕ್ಕೆ ಬದ್ಧವಾಗಿರತಕ್ಕದ್ದು’

ಬಿ.ಪಿ.ಮಂಜೇಗೌಡ ರಾಜೀನಾಮೆ ಅಂಗೀಕಾರ ಪ್ರಶ್ನಿಸಿದ ಅರ್ಜಿ
Last Updated 4 ಮೇ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಳೇನರಸಿಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ, ತಮ್ಮ ಸರ್ಕಾರಿ ಹುದ್ದೆಗೆ ನೀಡಿರುವ ರಾಜೀನಾಮೆ ಅಂಗೀಕಾರವು ನ್ಯಾಯಪೀಠದ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಮಂಜೇಗೌಡ ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಕಾನೂನು ಬಾಹಿರವಾಗಿ ಅಂಗೀಕರಿಸಿದೆ. ಆದ್ದರಿಂದ ಅದನ್ನು ರದ್ದುಪಡಿಸಬೇಕು’ ಎಂದು ಕೋರಿ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡಮತಿಘಟ್ಟ ಗ್ರಾಮದ ನಿವಾಸಿ ಡಿ.ಆರ್. ನಾರಾಯಣ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್‌.ಸುನೀಲ್ ದತ್ ಯಾದವ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಈ ಸಂಬಂಧ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ಅರ್ಜಿಯಲ್ಲಿ ಏನಿದೆ?: ‘ಮಂಜೇಗೌಡ 2018ರ ಮಾರ್ಚ್‌ 27ಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ರಾಜ್ಯ ಸರ್ಕಾರ 2018ರ ಏಪ್ರಿಲ್‌ 9ರಂದು ಅಂಗೀಕರಿಸಿದೆ. ಆದರೆ, ರಾಜೀನಾಮೆ ಅಂಗೀಕರಿಸಿರುವ ಸರ್ಕಾರದ ಆದೇಶದಲ್ಲಿ, ರಾಜೀನಾಮೆ ನೀಡಿರುವ ದಿನಾಂಕವನ್ನು 2017ರ ನವೆಂಬರ್ 3 ಎಂದು ನಮೂದಿಸಲಾಗಿದೆ.

ಈ ರಾಜೀನಾಮೆ ಪತ್ರ ಕಂಪ್ಯೂಟರನ್‌ ಡಿಟಿಪಿ ಪ್ರತಿಯಾಗಿದ್ದು ದಿನಾಂಕ ಮಾತ್ರ ಕೈಬರಹದಲ್ಲಿದೆ. ಆದ್ದರಿಂದ, ಹಿಂದಿನ ದಿನಾಂಕ ನಮೂದಿಸಿ ಕೊಟ್ಟ ರಾಜೀನಾಮೆ ಪತ್ರ ಸ್ವೀಕಾರಾರ್ಹವಲ್ಲ ಮತ್ತು ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮಾಡಲಾಗಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಮಂಜೇಗೌಡರ ವಿರುದ್ಧ ಲಂಚ ಪಡೆದ ಪ್ರಕರಣದಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪ್ರಕರಣ ಲೋಕಾಯುಕ್ತ ನ್ಯಾಯಾಲಯದ ಮುಂದಿದೆ. ಕಾನೂನು ಪ್ರಕಾರ ಸರ್ಕಾರಿ ನೌಕರರ ವಿರುದ್ಧ ಯಾವುದೇ ರೀತಿಯ ಪ್ರಕರಣಗಳು ಬಾಕಿ ಇದ್ದರೆ, ಅವರು ಉದ್ಯೋಗಕ್ಕೆ ನೀಡುವ ರಾಜೀನಾಮೆ ಅಂಗೀಕರಿಸುವಂತಿಲ್ಲ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅರ್ಜಿದಾರರ ಪರ ವಕೀಲ ಎಂ.ಕೇಶವರೆಡ್ಡಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT