ನಟನ ವಿರುದ್ಧ ದೂರು

7

ನಟನ ವಿರುದ್ಧ ದೂರು

Published:
Updated:

ಬೆಂಗಳೂರು: ಸರಿಯಾದ ಸಮಯಕ್ಕೆ ಪಾಸ್‌ಪೋರ್ಟ್‌ ನೀಡದೇ, ಅವಕಾಶ ಸಿಗುವುದರಿಂದ ವಂಚಿಸಿದ ನಟ ಕಿರಣ್‌ ರಾಜ್‌ ವಿರುದ್ಧ ಮುಂಬೈ ಮೂಲದ ರೂಪದರ್ಶಿಯೊಬ್ಬಳು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ಐದು ವರ್ಷದ ಹಿಂದೆ ಪರಿಚಯವಾಗಿದ್ದ ನಟ ಕಿರಣ್‌ ರಾಜ್‌ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿರುವ ಕುರಿತು ಮುಂಬೈನ ಗುಲ್ಸನ್‌ ನಗರದ ನಿವಾಸಿಯಾಗಿರುವ ರೂಪದರ್ಶಿ ಇದೇ ಠಾಣೆಗೆ ಏಪ್ರಿಲ್‌ನಲ್ಲಿ ದೂರು ನೀಡಿದ್ದರು.

‘ಚಿತ್ರದ್ಯೋಮದಲ್ಲಿ ಒಳ್ಳೆಯ ಅವಕಾಶಗಳನ್ನು ಕೊಡುವುದಾಗಿ ಹೇಳಿದ್ದ ಕಿರಣ್‌, ಮಾರ್ಚ್‌ 16ರಂದು ಪಾಸ್‌ಪೋರ್ಟ್‌ ಪಡೆದಿದ್ದ. ಮದುವೆಯಾಗುವುದಾಗಿ ವಂಚಿಸಿರುವ ಬಗ್ಗೆ ದೂರು ನೀಡಿದ ಬಳಿಕ ನನ್ನ ಪಾಸ್‌ಪೋರ್ಟ್ ಮರಳಿಸುವಂತೆ ಆತನ ಬಳಿ ಕೇಳಿಕೊಂಡಿದ್ದೆ. ಆದರೆ, ಉದ್ದೇಶಪೂರ್ವಕವಾಗಿ ಪಾಸ್‌ಪೋರ್ಟ್‌ ಮರಳಿಸದೆ ನನಗೆ ಹಾಗೂ ಕುಟುಂಬಕ್ಕೆ ತೊಂದರೆ ನೀಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘ನನಗೆ ಪಾಸ್‌ಪೋರ್ಟ್‌ನ ಅನಿವಾರ್ಯತೆ ಇದೆ ಎಂದು ಅರಿತಿದ್ದ ಕಿರಣ್‌ ಮತ್ತು ಅವರ ಕುಟುಂಬದವರು ಅನೇಕ ಬಾರಿ ಹಣಕ್ಕೂ ಬೇಡಿಕೆ ಇಟ್ಟಿದ್ದರು. ಜೀವಬೆದರಿಕೆಯನ್ನೂ ಹಾಕಿದ್ದಾರೆ.’ ಎಂದು ತಿಳಿಸಿದ್ದಾರೆ.

‘ಪೊಲೀಸರ ಒತ್ತಡಕ್ಕೆ ಮಣಿದು, ತನ್ನ ತಂದೆಯ ಮೂಲಕ ಇದೇ 1ರಂದು ಪಾಸ್‌ಪೋರ್ಟ್‌ ಅನ್ನು ಪೊಲೀಸ್‌ ಠಾಣೆಗೆ ಹಾಜರುಪಡಿಸಿದ್ದಾರೆ. ಆದರೆಸಕಾಲದಲ್ಲಿ ಪಾಸ್‌ಪೋರ್ಟ್‌ ನೀಡದೆ, ಮೋಸ ಮಾಡಿರುವ ಕಿರಣ್‌ ಹಾಗೂ ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದ ಅವರು ದೂರಿನಲ್ಲಿ ಹೇಳಿದ್ದಾರೆ.

‘ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪಾಸ್‌ಪೋರ್ಟ್‌ ಏಕೆ ಪಡೆದಿದ್ದರು ಎನ್ನುವುದು ಗೊತ್ತಾಗಿಲ್ಲ. ವಿಚಾರಣೆಯ ಬಳಿಕ ಅದು ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry