ಪಾರ್ಟಿಗೆ ಕರೆದು ರುಂಡ ಕತ್ತರಿಸಿದರು!

7
ಹುಡುಗಿ ವಿಚಾರಕ್ಕೆ ಸ್ನೇಹಿತನ ಹತ್ಯೆ l ಒಬ್ಬಾತ ಸೆರೆ

ಪಾರ್ಟಿಗೆ ಕರೆದು ರುಂಡ ಕತ್ತರಿಸಿದರು!

Published:
Updated:

ಬೆಂಗಳೂರು: ಹುಡುಗಿ ವಿಚಾರಕ್ಕೆ ಜಗಳವಾಗಿ ಗುರುವಾರ ರಾತ್ರಿ ಡೇವಿಡ್ (30) ಎಂಬಾತನನ್ನು ಆತನ ಸ್ನೇಹಿತರೇ ರುಂಡ ಕತ್ತರಿಸಿ ಕೊಲೆಗೈದಿದ್ದಾರೆ.

‘ರಾಮಚಂದ್ರಾಪುರ ಬಸ್ ನಿಲ್ದಾಣದ ಬಳಿ ರಾತ್ರಿ 10.30ರ ಸುಮಾರಿಗೆ ಹತ್ಯೆ ನಡೆದಿದೆ. ಕೃತ್ಯ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಡೇವಿಡ್‌ನ ರುಂಡ ಬಿದ್ದಿತ್ತು.

ಹಂತಕರ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಪ್ರಸಾದ್ ಎಂಬಾತನನ್ನು ಬಂಧಿಸಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ನಿವಾಸಿಯಾದ ಡೇವಿಡ್, 2006ರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಒಂಬತ್ತು ತಿಂಗಳಿನಿಂದ ಎಚ್‌ಎಂಟಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಪೈಕಿ ಒಬ್ಬಾತ, ರಾಮಚಂದ್ರಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಡೇವಿಡ್ ಕೂಡ ಅದೇ ಯುವತಿಯ ಹಿಂದೆ ಬಿದ್ದಿದ್ದ. ಈ ವಿಚಾರಕ್ಕೆ ಪರಸ್ಪರರ ನಡುವೆ 20 ದಿನಗಳ ಹಿಂದೆ ಗಲಾಟೆಯಾಗಿತ್ತು. ಆಗ ಸ್ನೇಹಿತರೇ ಮಧ್ಯಪ್ರವೇಶಿಸಿ, ರಾಜಿ ಮಾಡಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಡೇವಿಡ್‌ನನ್ನು ಸುಮ್ಮನೆ ಬಿಟ್ಟರೆ ತನ್ನ ಪ್ರೀತಿ ಹಾಳಾಗುತ್ತದೆ ಎಂದು ಆರೋಪಿ ಆತನ ಹತ್ಯೆಗೆ ಸಂಚು ರೂಪಿಸಿಕೊಂಡ. ಕೃತ್ಯಕ್ಕೆ ಪ್ರಸಾದ್ ಸೇರಿದಂತೆ ಇತರೆ ಸ್ನೇಹಿತರೂ ನೆರವಾಗುವ ಭರವಸೆ ಕೊಟ್ಟಿದ್ದರು. ಅಂತೆಯೇ ರಾತ್ರಿ 9 ಗಂಟೆ ಸುಮಾರಿಗೆ ಮಚ್ಚು–ಲಾಂಗುಗಳನ್ನು ಆಟೊದಲ್ಲಿ ಹಾಕಿಕೊಂಡು ರಾಮಚಂದ್ರಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು.

ನಂತರ ಡೇವಿಡ್‌ಗೆ ಕರೆ ಮಾಡಿದ ಪ್ರಸಾದ್, ‘ಪಾರ್ಟಿ ಮಾಡೋಣ. ಬಸ್ ನಿಲ್ದಾಣದ ಬಳಿ ಬಾ’ ಎಂದು ಹೇಳಿದ್ದ. ಅದರಂತೆ ಸ್ವಲ್ಪ ಸಮಯದಲ್ಲೇ ಆತ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ. ಎರಡು ಆಟೊಗಳನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು, 10.30ರವರೆಗೆ ಪಾರ್ಟಿ ಮಾಡಿದ್ದರು. ಡೇವಿಡ್‌ಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು, ಆತ ಮನೆಗೆ ಹೊರಡುವುದಾಗಿ ಎದ್ದೇಳುತ್ತಿದ್ದಂತೆಯೇ ಮಚ್ಚು–ಲಾಂಗುಗಳಿಂದ ಕುತ್ತಿಗೆಗೆ ಹೊಡೆದಿದ್ದರು ಎಂದು ಪೊಲೀಸರು ವಿವರಿಸಿದರು.

ಕೊನೆಗೆ ರುಂಡವನ್ನು ಸ್ವಲ್ಪ ದೂರದಲ್ಲಿ ಎಸೆದು, ಆಟೊಗಳಲ್ಲಿ ಹೊರಟು ಹೋಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ತಕ್ಷಣ ಸ್ಥಳಕ್ಕೆ ತೆರಳಿದೆವು. ರುಂಡ ಇರದಿದ್ದ ಕಾರಣ ಆರಂಭದಲ್ಲಿ ಮೃತರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಒಂದು ತಾಸಿನ ಬಳಿಕ ಪೊದೆ ಹತ್ತಿರ ರುಂಡ ಸಿಕ್ಕಿತು. ಅದನ್ನು ನೋಡಿದಾಗ ಹಳೇ ಆರೋಪಿ ಡೇವಿಡ್ ಎಂಬುದು ಗೊತ್ತಾಯಿತು ಎಂದು ಮಾಹಿತಿ ನೀಡಿದರು.

**

ಪೊಲೀಸ್ ವಶದಲ್ಲಿ ಮೂವರು

ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಹಂತಕರ ಚಲನವಲನಗಳು ಸೆರೆಯಾಗಿದ್ದವು. ಆ ಸುಳಿವು ಆಧರಿಸಿ ಶುಕ್ರವಾರ ಮಧ್ಯಾಹ್ನ ಪ್ರಸಾದ್‌ನನ್ನು ಬಂಧಿಸಲಾಗಿದೆ. ಇನ್ನೂ ಮೂವರು ಪೊಲೀಸರ ವಶದಲ್ಲೇ ಇದ್ದಾರೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry