ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಚುನಾವಣೆ ಕಾಂಗ್ರೆಸ್‌ಗೆ ಧರ್ಮಯುದ್ಧ’

ಕೊಯಿರಾ ಗ್ರಾಮದಲ್ಲಿ ಕೆಪಿಸಿಸಿ ಜಿಲ್ಲಾ ಘಟಕದ ಸದಸ್ಯ ಎಂ. ನಾರಾಯಣಸ್ವಾಮಿ ಹೇಳಿಕೆ
Last Updated 4 ಮೇ 2018, 21:03 IST
ಅಕ್ಷರ ಗಾತ್ರ

ದೇವನಹಳ್ಳಿ: ಈ ಬಾರಿಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಪಾಲಿಗೆ ಧರ್ಮಯುದ್ಧವಾಗಿದೆ ಎಂದು ಕೆಪಿಸಿಸಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಎಂ. ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕೊಯಿರಾ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಶತಮಾನಗಳಿಂದ ದೀನದಲಿತರ ಆಶೋತ್ತರಗಳನ್ನು ಈಡೇರಿಸುತ್ತ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟರ ಕಾಲೊನಿಗಳಿಗೆ ರಸ್ತೆ, ಶೌಚಾಲಯ, ಕುಡಿಯುವ ನೀರು ಮತ್ತು ವಸತಿ ಕಲ್ಪಿಸಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂಬುದಕ್ಕೆ ನೀಡಿದ ಭರವಸೆ ಈಡೇರಿರುವುದೆ ಸಾಕ್ಷಿಯಾಗಿದೆ ಎಂದರು.

ಕೆಪಿಸಿಸಿ ಜಿಲ್ಲಾ ಘಟಕ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತು ವಿಶ್ವನಾಥಪುರ ವಿಎಸ್ಎಸ್ಎನ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮೂರು ವರ್ಷ ಸತತ ಬರಗಾಲವಿದ್ದರು ಪಶುಮೇವು, ಕುಡಿಯುವ ನೀರಿಗೆ ಸರ್ಕಾರ ಆದ್ಯತೆ ನೀಡಿದೆ. 50 ಸಾವಿರದವರೆಗಿನ ರೈತರ ಸಾಲ ಮನ್ನದಿಂದಾಗಿ ವಿಶ್ವನಾಥಪುರ ರೈತರ ಸಹಕಾರ ಸಂಘದಲ್ಲಿ ₹2.5 ಕೋಟಿ ರೈತರ ಸಾಲ ಮನ್ನವಾಗಿದೆ, ಹಸಿವುಮುಕ್ತ ಕರ್ನಾಟಕವನ್ನಾಗಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಆರಂಭಿಸಿದೆ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬರಲಿದೆ.

ಮತದಾರರು ನವ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಹಿಂದುಳಿ ವರ್ಗ ಘಟಕ ರಾಜ್ಯ ಉಪಾಧ್ಯಕ್ಷ ಸಿ. ಜಗನ್ನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ಕಾಂಗ್ರೆಸ್ ಪರಿಶಿಷ್ಟ ಜಾತಿ ತಾಲ್ಲೂಕು ಘಟಕ ಅಧ್ಯಕ್ಷ ಮುನಿರಾಜು, ಭೂ ನ್ಯಾಯ ಮಂಡಳಿ ಸದಸ್ಯ ಸೋಮಣ್ಣ, ಬ್ಲಾಕ್ ಕಾಂಗ್ರೆಸ್‌ ಉಪಾಧ್ಯಕ್ಷ ಎಸ್.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಮುಖಂಡ ಕೋದಂಡರಾಮಯ್ಯ, ಲೋಕೇಶ್, ಎಸ್.ಜಿ. ನಾರಾಯಣಸ್ವಾಮಿ, ಕೆಪಿಸಿಸಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.

**

ಜನಪರ ಯೋಜನೆಗೆ ಮತ ನೀಡಿ

2013ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ನಂತರ ‘ಅನ್ನಭಾಗ್ಯ’ ಯೋಜನೆ ಮತ್ತು ‘ಹಾಲಿಗೆ ಪ್ರೋತ್ಸಾಹಧನ’ ಘೋಷಣೆ ಮಾಡಿ, ಸರ್ಕಾರ ಕಡುಬಡವರ ಪರವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಎಂದು ವೆಂಕಟಸ್ವಾಮಿ ತಿಳಿಸಿದರು.

2013ರಲ್ಲಿ ಒಂದು ದಿನದಲ್ಲಿ 34 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಪ್ರಸ್ತುತ 74 ಲಕ್ಷ ಲೀಟರ್‌ಗೆ ತಲುಪಿದೆ ಎಂದರೆ ಸರ್ಕಾರ ಹೈನು ಉದ್ಯಮಕ್ಕೆ ನೀಡುತ್ತಿರುವ ಕೊಡುಗೆಯೇ ಕಾರಣ ಎಂದರು.

‘ಐದು ವರ್ಷಗಳಲ್ಲಿ ರಾಜ್ಯದಲ್ಲಿ 18 ಲಕ್ಷ ಮನೆ ನಿರ್ಮಾಣವಾಗಿದೆ.ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರ ₹1.6 ಲಕ್ಷ ನೀಡುತ್ತಿದೆ. ಇತರೆ ಪಕ್ಷದ ಹೇಳಿಕೆ ಬೇಡ. ನಮ್ಮ ಸರ್ಕಾರದ ಜನಪರ ಯೋಜನೆ ನೋಡಿ ಮತಹಾಕಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT