4
ಎಸ್‌. ಸೂರ್ಯಪ್ರಕಾಶ ಪಂಡಿತ್

ದೇಹವೂ ಯಜ್ಞ, ದೇಶವೂ ಯಜ್ಞ

Published:
Updated:
ದೇಹವೂ ಯಜ್ಞ, ದೇಶವೂ ಯಜ್ಞ

ಯಜ್ಞದ ವಿಶೇಷತೆಯ ಬಗ್ಗೆ ನೋಡುತ್ತಿದ್ದೇವೆ. ಯಜ್ಞದ ವಿಧಿ–ವಿಧಾನಗಳ ಸಂಭ್ರಮವನ್ನು ವಾಲ್ಮೀಕಿ ವಿಸ್ತಾರವಾಗಿ ವರ್ಣಿಸಿದ್ದಾನೆ. ಹೀಗೆ ವರ್ಣಿಸುತ್ತ ದಶರಥನ ಬಾಯಲ್ಲಿ ಕವಿ ಹೇಳಿಸಿರುವ ಮಾತೊಂದು ಸ್ವಾರಸ್ಯಕರವಾಗಿದೆ. ಯಜ್ಞದ ಕಲಾಪಗಳು ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ ನಡೆಯಬೇಕು – ಎಂದು ಆದೇಶಿಸುತ್ತ ‘ವಿದ್ವಾಂಸೋ ಬ್ರಹ್ಮರಾಕ್ಷಸಾಃ’ ಎನ್ನುತ್ತಾನೆ.

‘ವಿದ್ವಾಂಸರು ಬ್ರಹ್ಮರಾಕ್ಷಸರಂತೆ’ ಎನ್ನುವುದು ಅವನ ಮಾತು. ವಿದ್ವಾಂಸರು ಎಲ್ಲದರಲ್ಲೂ ತಪ್ಪುಗಳನ್ನೇ ಹುಡುಕುತ್ತಿರುತ್ತಾರೆ; ಹೀಗಾಗಿ ಅವರು ರಾಕ್ಷಸರೇ ಸರಿ– ಎಂಬುದು ದಶರಥನ ಮಾತಿನ ಮರ್ಮ. ವಿದ್ವಾಂಸರ ಬಗ್ಗೆಯೂ ಚಿಂತಕರ ಬಗ್ಗೆಯೂ ಸಮಾಜದಲ್ಲಿ ಇದ್ದಿರಬಹುದಾದ ಅಭಿಪ್ರಾಯದ ಬಗ್ಗೆ ಈ ಮಾತು ಸೂಚನೆಯನ್ನು ಕೊಡುತ್ತಿದೆಯೆ?

ಅಶ್ವಮೇಧಯಾಗಕ್ಕೆ ಎಲ್ಲರನ್ನೂ ಆಹ್ವಾನಿಸಿ ಕರೆತರುವಂತೆ ವಸಿಷ್ಠರು ಸುಮಂತ್ರನಿಗೆ ಸೂಚಿಸುತ್ತಾರೆ:

‘ಅಯ್ಯಾ ಸುಮಂತ್ರ, ಈ ಭೂಮಂಡಲದಲ್ಲಿರುವ ಸಕಲ ಭೂಪತಿಗಳಿಗೂ ಆಹ್ವಾನವನ್ನು ಕಳಿಸು. ದೇಶವಿದೇಶಗಳಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರುಗಳನ್ನು ಸತ್ಕರಿಸಿ ಅವರೆಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಬರುವಂತೆ ಏರ್ಪಡಿಸು (ಬ್ರಾಹ್ಮಣಾನ್‌ ಕ್ಷತ್ರಿಯಾನ್‌ ವೈಶ್ಯಾನ್‌ ಶೂದ್ರಾಂಶ್ಚೈವ ಸಹಸ್ರಶಃ | ಸಮಾನಯಸ್ವ ಸತ್ಕೃತ್ಯ ಸರ್ವದೇಶೇಷು ಮಾನವಾನ್‌ ||). ಮಿಥಿಲಾಧಿಪತಿಯಾದ ಜನಕಮಹಾರಾಜನಿರುವನಷ್ಟೆ. ಅವನು ಶೂರ, ಸತ್ಯವಾದಿ. ವೇದಗಳಲ್ಲಿಯೂ ಸಕಲಶಾಸ್ತ್ರಗಳಲ್ಲಿಯೂ ದೊಡ್ಡ ವಿದ್ವಾಂಸ. ಆ ಮಹಾಪುರುಷನ ಬಳಿಗೆ ನೀನೇ ಹೋಗಿ ಸತ್ಕರಿಸಿ ಕರೆದುಕೊಂಡು ಬಾ. ಅವನು ದಶರಥನಿಗೆ ಪೂರ್ವದಿಂದಲೂ ಬಂಧು...’

ಹೀಗೆ ದೇಶದ ಉದ್ದಗಲದಲ್ಲಿರುವ ಒಬ್ಬೊಬ್ಬ ರಾಜನ ಹೆಸರನ್ನು ಹೇಳಿ, ಅವರೆಲ್ಲರನ್ನೂ ಗೌರವಪೂರ್ವಕವಾಗಿ ಆಹ್ವಾನಿಸಬೇಕೆಂದು ಆದೇಶಿಸುತ್ತಾನೆ. ಈ ಆಹ್ವಾನವನ್ನೂ ಯಜ್ಞದ ಸಿದ್ಧತೆಯನ್ನೂ ನೋಡಿದಾಗ, ಅಶ್ವಮೇಧಯಾಗ ಎಷ್ಟು ದೊಡ್ಡ ಯಾಗ ಎಂಬುದು ತಿಳಿಯುತ್ತದೆ.

‘ರಾಷ್ಟ್ರಂ ವಾ ಅಶ್ವಮೇಧಃ |’ (ರಾಷ್ಟ್ರವೇ ಅಶ್ವಮೇಧ) ಎನ್ನುವ ವೇದವಚನವೇ ಇದೆ. ಇಡಿಯ ರಾಷ್ಟ್ರವೇ ಒಂದು ಯಜ್ಞ ಎಂದೂ ಹೇಳಬಹುದು; ಅಥವಾ ಇಡಿಯ ಅಶ್ವಮೇಧಯಜ್ಞದಲ್ಲಿ ಒಟ್ಟು ರಾಷ್ಟ್ರವೇ ತೊಡಗಿಕೊಳ್ಳುತ್ತದೆ; ಹಾಗಿದ್ದಾಗ ಮಾತ್ರವೇ ಅದು ಯಜ್ಞ–

ಎಂದೂ ಹೇಳಲಾದೀತು. ಯಾಗದ ಸಮಯದಲ್ಲಿ ದಾನವೂ ಒಂದು ಮಹತ್ವದ ಸಂಗತಿ; ತ್ಯಾಗವೇ ಯಾಗದ ಪ್ರಧಾನ ಲಕ್ಷಣ ಎನ್ನುವುದನ್ನು ನೋಡಿದೆವಷ್ಟೆ. ದಾನವನ್ನು ಹೇಗೆ ಮಾಡಬೇಕು? ಯಾರು ಮಾಡಬೇಕು? ಯಾರಿಗೆ ಮಾಡಬೇಕು? ಈ ವಿವರಗಳು ಧರ್ಮಶಾಸ್ತ್ರದ ಉದ್ದಕ್ಕೂ ಕಾಣಸಿಗುತ್ತವೆ. ಯಜ್ಞ–ದಾನ–ತಪಸ್ಸು – ಇವು ಪ್ರಾಚೀನ ಭಾರತೀಯ ಸಂಸ್ಕೃತಿಯ ಶಿಖರಗಳು ಎನ್ನುವ ಒಕ್ಕಣೆಯನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ‘ಅಸಡ್ಡೆಯಿಂದಾಗಲೀ ವಿನೋದದ ಭಾವನೆಯಿಂದಾಗಲೀ ದಾನ ಮಾಡತಕ್ಕದ್ದಲ್ಲ; ಅಸಡ್ಡೆಯಿಂದ ದಾನ ಮಾಡಿದರೆ ದಾತನಿಗೆ ಕೆಡುಕು ತಪ್ಪದು’ ಎಂದು ವಸಿಷ್ಠರು ಎಚ್ಚರಿಸುತ್ತಾರೆ.

ದಾನವನ್ನು ಕೊಡುವವನ ಹಿರಿಮೆ ಏನೂ ಇಲ್ಲ; ನಮ್ಮ ದಾನವನ್ನು ಸ್ವೀಕರಿಸುವವನು ಸಿಕ್ಕಿರುವುದು ನಮ್ಮ ಪುಣ್ಯವಿಶೇಷ– ಎಂಬ ಭಾವನೆ ದಾತನಲ್ಲಿ ಇರಬೇಕಾದ ಮನೋಧರ್ಮ ಎಂಬುದಕ್ಕೆ ಶಾಸ್ತ್ರಗಳು ಹೆಚ್ಚಿನ ಮನ್ನಣೆ ಕೊಟ್ಟಿರುವುದು ಸ್ಪಷ್ಟ. ‘ಶ್ರದ್ಧೆಯಿಂದ ದಾನ ಮಾಡಬೇಕು; ಅಶ್ರದ್ಧೆಯಿಂದ ಮಾಡತಕ್ಕದ್ದಲ್ಲ’ ಎನ್ನುವ ಉಪನಿಷತ್ತಿನ ಮಾತುಗಳಿಲ್ಲಿ ಉಲ್ಲೇಖಾರ್ಹವಾದವು. ಕಠೋಪನಿಷತ್ತಿನಲ್ಲಿ ಬರುವ ನಚಿಕೇತನ ಕಥೆ ದಾನದ ಮಹತ್ವವನ್ನು ತುಂಬ ಮಾರ್ಮಿಕವಾಗಿ ವಿಶದಪಡಿಸಿದೆ.

ನಚಿಕೇತನ ತಂದೆ ಒಂದು ಯಾಗವನ್ನು ಮಾಡುತ್ತಿದ್ದ. ಯಾಗದ ದಕ್ಷಿಣೆಯಾಗಿ ಅವನು ಹಸುಗಳನ್ನು ನೀಡುತ್ತಿದ್ದ. ಆದರೆ ಅವನು ಎಂಥ ಹಸುಗಳನ್ನು ದಕ್ಷಿಣೆಯಾಗಿ ನೀಡುತ್ತಿದ್ದ ಎಂದರೆ – ಹಾಲನ್ನು ಕೊಡುವುದಿರಲಿ, ಅವುಗಳಿಗೆ ಹುಲ್ಲನ್ನು ತಿನ್ನಲೂ ಆಗುತ್ತಿರಲಿಲ್ಲವಂತೆ; ಅಷ್ಟೇ ಅಲ್ಲ, ನೀರನ್ನು ಕುಡಿಯಲೂ ಅವುಗಳಿಗೆ ಶಕ್ತಿ ಇರಲಿಲ್ಲವಂತೆ! ತನ್ನ ಅಪ್ಪ ಇಂಥ ಹಸುಗಳನ್ನು ದಾನವನ್ನಾಗಿ ನೀಡುತ್ತಿರುವುದನ್ನು ನಚಿಕೇತ ಗಮನಿಸಿದ. ‘ಯಾರಿಗೂ ಪ್ರಯೋಜನಕ್ಕೆ ಬಾರದ ಹಸುಗಳನ್ನು ನನ್ನ ತಂದೆ ದಾನವಾಗಿ ನೀಡುತ್ತಿದ್ದಾನೆ; ಹಾಗಾದರೆ ನನ್ನನ್ನು ಯಾರಿಗಾದರೂ ದಾನ ಮಾಡಬಹುದು’ ಎಂದು ಅವನು ಯೋಚಿಸಿದ. ನಚಿಕೇತ ಪುಟ್ಟ ಬಾಲಕ. ಅವನಿಗೆ ಈ ಆಲೋಚನೆ ಹೇಗೆ ಬಂದಿತು– ಎನ್ನುವುದನ್ನು ಉಪನಿಷತ್ತು ತುಂಬ ಸೊಗಸಾಗಿ ನಿರೂಪಿಸಿದೆ. ‘ಶ್ರದ್ಧೆ ಅವನಲ್ಲಿ ಪ್ರವೇಶಿಸಿತಂತೆ!’ ದಾನವನ್ನು ಹೇಗೆ ಮಾಡಬೇಕು? ಹೇಗೆ ಮಾಡಬಾರದು? – ಎಂಬ ಎಚ್ಚರಿಕೆ ನಚಿಕೇತನಲ್ಲಿ ಎಚ್ಚರಗೊಂಡಿತು. ಯಾಗವನ್ನು ಶಾಸ್ತ್ರೋಕ್ತವಾಗಿಯೂ ವಿಧಿ–ವಿಧಾನಗಳಿಗೆ ಅನುಗುಣವಾಗಿಯೂ ನಡೆಸಿದರೆ ಮಾತ್ರವೇ ಅದು ಉದ್ದೇಶಿತ ಫಲವನ್ನು ಕೊಡುವುದು. ‘ನನ್ನ ಅಪ್ಪ ಸರಿಯಾದ ಕ್ರಮದಲ್ಲಿ ಯಾಗದ ನಿಯಮಗಳನ್ನು ಪಾಲಿಸುತ್ತಿಲ್ಲ; ಹೀಗಾಗಿ ಅವನಿಗೆ ಆನಂದ ಎಂಬ ಫಲಕ್ಕೆ ಬದಲಾಗಿ ಅನಂದ ಎಂಬುದು ದೊರಕುತ್ತದೆಯಲ್ಲ’ ಎಂದು ನಚಿಕೇತ ಯೋಚಿಸಿದ. ಪ್ರಯೋಜನಕ್ಕೆ ಬಾರದ ವಸ್ತುಗಳನ್ನು ದಾನವಾಗಿ ಕೊಡಬಾರದು. ನಮಗೆ ಪ್ರಯೋಜನವಿಲ್ಲವೆಂದೋ ಅಥವಾ ವ್ಯರ್ಥವಾಗುತ್ತಿದೆಯೆಂದೋ ಇತರರಿಗೆ ಕೊಡುವುದು ದಾನ ಎಂದೆನಿಸಿಕೊಳ್ಳದು.

‘ನಾನು ಪುಟ್ಟ ಬಾಲಕ; ನನ್ನಿಂದಲೂ ಅಪ್ಪನಿಗೆ ಪ್ರಯೋಜನವಿಲ್ಲ.

ಹೀಗಾಗಿ ಅವನು ನನ್ನನ್ನೂ ಯಾರಿಗಾದರೂ ದಾನವನ್ನು ಕೊಡ ಬಹುದು’ ಎಂದು ಆಲೋಚಿಸಿ, ಹಾಗೆಯೇ ಅವನು ತಂದೆಯನ್ನು ಕೇಳಿಯೇಬಿಟ್ಟ. ‘ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುವೆ?’ ಮಗನ ಮಾತಿಗೆ ತಂದೆ ಕೂಡಲೇ ಉತ್ತರಿಸಲಿಲ್ಲ. ಆದರೆ ಮಗ ಬಿಡಲಿಲ್ಲ; ಮತ್ತೆ ಮತ್ತೆ ಕೇಳಿದ. ತಂದೆಗೆ ಸಿಟ್ಟು ಬಂದಿತು. ಯಾಗದ ದೀಕ್ಷೆಯಲ್ಲಿದ್ದಾಗ ಕೋಪವೂ ನಿಷಿದ್ಧವಾದುದು! ಆದರೆ ನಚಿಕೇತನ ತಂದೆ – ವಾಜಶ್ರವಸ್‌ – ಕೋಪವನ್ನೂ ಗೆದ್ದಿರಲಿಲ್ಲ; ತ್ಯಾಗಬುದ್ಧಿಯೂ ಅವನಲ್ಲಿರಲಿಲ್ಲ. ‘ನಿನ್ನನ್ನು ಯಮನಿಗೆ ಕೊಟ್ಟಿದ್ದೇನೆ’ ಎಂದು ಅವನು ಮಗನನ್ನು ಉದ್ದೇಶಿಸಿ ಕೋಪದಿಂದ ಕೂಗಿದ. ಅನಂತರ ನಚಿಕೇತ ಯಮನಲ್ಲಿಗೆ ಹೋಗುತ್ತಾನೆ; ಅಮರವಿದ್ಯೆಯನ್ನು ಪಡೆಯುತ್ತಾನೆ. ಉಪನಿಷತ್ತು ಮುಂದುವರೆಯುತ್ತದೆ. ನಾವಿಲ್ಲಿ ಗಮನಿಸಬೇಕಾದ್ದು – ದಾನವನ್ನು ಹೇಗೆ ಮಾಡಬೇಕು – ಎನ್ನುವುದಕ್ಕೆ ಈ ಪ್ರಸಂಗ ಪ್ರತೀಕವಾಗಿದೆ

ವಿದ್ವಾಂಸರಾದವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ – ಎಂದು ದಶರಥ ಎಚ್ಚರವಾಗಿದ್ದನಲ್ಲವೆ? ನಚಿಕೇತ ಅಂಥ ವಿದ್ವಾಂಸರಲ್ಲಿ ಒಬ್ಬ ಎಂದು ಹೇಳಬಹುದು. ವಿವೇಕಕ್ಕೂ ವಯಸ್ಸಿಗೂ ನೇರ ಸಂಬಂಧವಿರದು – ಎನ್ನುವುದನ್ನೂ ಉಪನಿಷತ್ತು ಧ್ವನಿಸಿದೆ. ದೇಹ–ಮನಸ್ಸುಗಳನ್ನು ಎಚ್ಚರವಾಗಿಯೂ ಶುದ್ಧವಾಗಿಯೂ ಕಾಪಾಡಿಕೊಳ್ಳುವುದೇ ದಿಟವಾದ ಯಜ್ಞ ಎನ್ನುತ್ತದೆ, ವೇದದ ಒಂದು ಮಂತ್ರ:

ಯಜ್ಞಸ್ಯ ಚಕ್ಷುಃ ಪ್ರಭೃತಿರ್ಮುಖಂ ಚ

ವಾಚಾ ಶ್ರೋತ್ರೇಣ ಮನಸಾ ಜುಹೋಮಿ |

ಇಮಂ ಯಜ್ಞಂ ವಿತತಂ ವಿಶ್ವಕರ್ಮಣಾ

ದೇವ ಯಂತು ಸುಮನಸ್ಯಮಾನಾಃ ||

ಅಥರ್ವವೇದದ ಈ ಮಂತ್ರದ ತಾತ್ಪರ್ಯ: ‘ಕಣ್ಣು, ನಾಲಗೆ– ಇವು ಯಜ್ಞವನ್ನು ಎತ್ತಿಹಿಡಿದಿರುವಂಥವು. ಮಾತಿನಿಂದಲೂ ಕಿವಿಯಿಂದಲೂ ಮನಸ್ಸಿನಿಂದಲೂ ಒಳಿತಾದುದನ್ನೇ ಮಾಡುವೆ. ವಿಶ್ವಕರ್ಮನಿಂದ ವಿಸ್ತರಿಸಲ್ಪಟ್ಟಿರುವ ಈ ಯಜ್ಞವನ್ನು ತಿಳಿವಳಿಕೆಯುಳ್ಳವರು ಮನಸ್ಸನ್ನು ಪ್ರಸನ್ನವಾಗಿಟ್ಟುಕೊಳ್ಳುವ ಮೂಲಕ ಕಾಪಾಡಿಕೊಳ್ಳಲಿ.’

‘ಕಣ್ಣು, ಕಿವಿ, ನಾಲಗೆ, ಮಾತು, ಮನಸ್ಸು – ಎಲ್ಲ ಇಂದ್ರಿಯಗಳಿಂದಲೂ ನಾನು ಒಳಿತಾದುದನ್ನೇ ಮಾಡುವೆ. ಜಗತ್ತನ್ನು ಸೃಷ್ಟಿಸಿರುವ ಆ ಪರಮಾತ್ಮನೇ ಈ ದೇಹದಲ್ಲಿಯೂ ಒಂದು ಯಜ್ಞವನ್ನೇ ಏರ್ಪಡಿಸಿದ್ದಾನೆ. ವಿದ್ವಾಂಸನಾದವನು ನೆಮ್ಮದಿಯ ಮನಸ್ಸಿನಲ್ಲಿ ನಿಂತು ಈ ದೇಹಯಜ್ಞವನ್ನು ತನ್ನದನ್ನಾಗಿಸಿಕೊಳ್ಳತಕ್ಕದ್ದು.’ ಇದು ಈ ಮಂತ್ರದ ಒಟ್ಟು ಸಾರಾಂಶ. ಮೊದಲು ತನ್ನ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡವನು; ಮನಸ್ಸನ್ನು ಉದ್ವೇಗದ ಸೆರೆಯಿಂದ ಬಿಡಿಸಿಕೊಂಡವನು ಯಾವನೋ ಅವನೇ ವಿದ್ವಾಂಸ; ಅವನೇ ಲೋಕಚಿಂತಕ – ಎನ್ನುವುದು ವೇದಸಂಸ್ಕೃತಿಯ ನಿಲುವು. ತನ್ನ ದೇಹವನ್ನೇ ಯಜ್ಞವನ್ನಾಗಿಸಿಕೊಂಡವನಿಗೆ ಮಾತ್ರವೇ ಬಹಿರ್ಯಜ್ಞವನ್ನು ಮಾಡುವಂಥ ಅರ್ಹತೆ ಒದಗುವುದು ಎನ್ನುವುದು ಕೂಡ ಈ ನಿಲುವಿನಿಂದ ಸಿದ್ಧವಾಗುತ್ತದೆ. ಈ ಅರ್ಹತೆ ತುಂಬ ಮುಖ್ಯ ಕೂಡ; ಏಕೆಂದರೆ ಯಜ್ಞಗಳಲ್ಲಿ ಹಲವು ವಿಧಗಳಿವೆ. ಆ ಯಜ್ಞಗಳನ್ನು ವಿದ್ವಾಂಸನಲ್ಲದವನು ಮಾಡಿದರೆ ಅವನಿಗೂ ಕೆಡುಕು; ಲೋಕಕ್ಕೂ ಕೆಡುಕು – ಎನ್ನುತ್ತವೆ, ಶಾಸ್ತ್ರಗಳು.

ಯಜ್ಞಗಳನ್ನು ಹಲವು ಬಗೆಗಳಲ್ಲಿ ವಿಂಗಡಿಸುವ ಕ್ರಮವುಂಟು. ಈ ಎಲ್ಲ ವಿಧಾನಗಳ ಸಾರವನ್ನಾಗಿ ಮೂರು ಗುಂಪುಗಳನ್ನು ಮಾಡಬಹುದು. ಅವೇ – ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ. ದಿನವೂ ಮಾಡಬೇಕಾದಂಥವು ನಿತ್ಯಯಜ್ಞಗಳು; ಯಾವುದಾದರೊಂದು ಕಾರಣದ ದೆಸೆಯಿಂದ ಮಾಡಬೇಕಾದಂಥವು ನೈಮಿತ್ತಿಕಯಜ್ಞಗಳು; ನಿರ್ದಿಷ್ಟ ಫಲಗಳನ್ನು ಬಯಸಿ ಮಾಡುವಂಥವು ಕಾಮ್ಯಯಜ್ಞಗಳು ಎಂದೆನಿಸಿಕೊಳ್ಳುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry