ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀಕ್‌ ತತ್ವಜ್ಞಾನದ ಹಂತಗಳು

ಅಕ್ಷರ ಗಾತ್ರ

ಪಾಶ್ಚಾತ್ಯ ತತ್ವಜ್ಞಾನದ ಬಗ್ಗೆ ಕನ್ನಡದಲ್ಲಿ ಬರವಣಿಗೆಯನ್ನು ಮಾಡಿದ ಮೊದಲಿಗರಲ್ಲಿ ಜಿ. ಹನುಮಂತರಾವ್‌ ಪ್ರಮುಖರು. ಅವರ ‘ಗ್ರೀಕ್‌ ಧರ್ಮ’ ಎಂಬ ಪ್ರಬಂಧ ಇಲ್ಲಿ ಉಲ್ಲೇಖಾರ್ಹವಾದುದು. ಇದು ದೇಜಗೌ ಸಂಪಾದಿಸಿರುವ ‘ಜಿ. ಹನುಮಂತರಾವ್‌ ಅವರ ಆಯ್ದ ಲೇಖನಗಳು’ ಕೃತಿಯಲ್ಲಿ ಸೇರಿದೆ. ಗ್ರೀಕ್‌ ತತ್ವಜ್ಞಾನದ ಆರಂಭವನ್ನೂ, ಆನಂತರದ ಘಟ್ಟಗಳನ್ನೂ ಅವರು ಹೀಗೆ ಗುರುತಿಸುತ್ತಾರೆ:

‘ಮೊದಮೊದಲಿಗೆ ಗ್ರೀಕ್‌ ತತ್ವಜ್ಞಾನ ನಿಸರ್ಗದ ಸಮಸ್ಯೆಗಳನ್ನು ಎದುರಿಸಿತು. ಈ ವಿಶ್ವದಲ್ಲಿರುವ ಎಲ್ಲ ವಿಧದ ವಸ್ತುಗಳಿಗೂ ಮೂಲಭೂತವಾದ ದ್ರವ್ಯವಾವುದು ಎಂಬ ಪ್ರಶ್ನೆ ಮುಖ್ಯವಾಯಿತು. ಗ್ರೀಕ್‌ ತತ್ವಜ್ಞಾನದ ಚರಿತ್ರೆಯಲ್ಲಿ ಏಳು ಪ್ರಾಜ್ಞರ ಉಲ್ಲೇಖವಿದೆ. ಈ ಪ್ರಾಜ್ಞರಲ್ಲಿ ಥೇಲ್ಸ್‌, ಬಯಾಸ್‌ ಮತ್ತು ಸೋಲನ್ನರು ಸೇರಿದ್ದಾರೆ. ಇವರ ವಚನಗಳಲ್ಲಿ ಜೀವನವನ್ನು ನಡೆಸಿಕೊಳ್ಳಬೇಕಾದ ರೀತಿನೀತಿಗಳ ಸೂಚನೆಗಳಿವೆ. ಇಲ್ಲಿ ದರ್ಶನಕ್ಕಿಂತಲೂ ಧರ್ಮದ ಅಂಶವೇ ಹೆಚ್ಚಾಗಿದೆ.

‘ಗ್ರೀಕರ ಚಿಂತನೆ ಕ್ರಮೇಣ ಬಹಿರಂಗದಿಂದ ಅಂತರಂಗದೆಡೆಗೆ ಒಲಿಯಿತು. ಮಾನವನ ಅಂತರಂಗವನ್ನು ಕುರಿತ ಚಿಂತನೆ ಸಾಕ್ರಟಿಸ್‌, ಪ್ಲೇಟೊ ಮತ್ತು ಅರಿಸ್ಟಾಟಲರ ತತ್ವಜ್ಞಾನದಲ್ಲಿ ಪರಾಕಾಷ್ಠೆ ಮುಟ್ಟಿತು.

‘ಗ್ರೀಕ್‌ ತತ್ವಜ್ಞಾನದ ಚರಿತ್ರೆಯಲ್ಲಿ ಮೂರು ಘಟ್ಟಗಳನ್ನು ವಿಂಗಡಿಸಬಹುದು. ಕ್ರಿ. ಪೂ.600ರಿಂದ ಕ್ರಿ.ಪೂ. 450ರವರೆಗೆ ಇದ್ದುದು ಎಂದು ಗ್ರೀಕ್‌ ಇತಿಹಾಸಜ್ಞರು ಎಣಿಸಿರುವ ಮೊದಲನೆಯ ಘಟ್ಟವನ್ನು ಭೌತಿಕ ಚಿಂತನೆಯ ಘಟ್ಟವೆಂದು ಕರೆಯಬಹುದು. ಎರಡನೆಯದನ್ನು ಮಾನವತೆಯ ಯುಗವೆಂದು ಕರೆಯಬಹುದು. ಮಾನವ ಮತ್ತು ಜಗತ್ತಿನಲ್ಲಿ ಅವನ ನಡೆನುಡಿಗಳು, ನೀತಿನಿಯಮಗಳು ಪ್ರಧಾನವಾಗಿ ಈ ಕಾಲದಲ್ಲಿ ಚಿಂತ್ಯವಾದವು. ಮೂರನೆಯದಾದ ಸಿದ್ಧಾಂತಿಗಳ ಯುಗದಲ್ಲಿ ಜಗತ್ತಿನ ಒಟ್ಟು ಸ್ವರೂಪವನ್ನು ನಿರ್ಣಯಿಸುವ ಪ್ರಯತ್ನ ನಡೆಯಿತು. ಇದನ್ನು ವಿಶ್ವದರ್ಶನದ ಯುಗವೆಂದೂ ಕರೆಯಬಹುದು.

‘ಮೊದಲ ಘಟ್ಟಕ್ಕೆ ಸೇರಿದ ತಾತ್ವಿಕರು ಥೇಲ್ಸ್‌, ಅನಾಕ್ಷಿಮೇಂಡರ್‌, ಅನಾಕ್ಸಿಮೆನಿಸ್‌, ಪೈಥಾಗೊರಸ್‌, ಕೈನೋಫೆನಿಸ್‌, ಪಾರ್ಮೆನಿಡಿಸ್‌, ಜಿನೋ ಮೊದಲಾದವರು. ಹೆರಾಕ್ಲಿಟಸ್‌, ಎಂಪಿಡಾಕ್ಲಿಸ್‌, ಲೂಪಿಸಸ್‌, ಡೆಮೊಕ್ರಿಟಸ್‌ ಮತ್ತು ಅನಾಕ್ಸೊರಾಸರೂ ಇದೇ ಘಟ್ಟಕ್ಕೆ ಸೇರಿದವರು. ಎರಡನೆಯ ಮತ್ತು ಮೂರನೆಯ ಘಟ್ಟಗಳಿಗೆ ಸೇರಿದವರು ಸಾಫಿಸ್ಟರು, ಸಾಕ್ರಟಿಸ್‌, ಪ್ಲೇಟೊ, ಅರಿಸ್ಟಾಟಲ್‌ ಸ್ಟೋಯಿಕ್‌ ಪಂಥದವರು; ಎಪಿಕ್ಯೂರಸ್‌, ಸಿನೆಕ, ಎಪಿಕ್ಟಿಟಸ್‌, ಮಾರ್ಕಸ್‌ ಅರಿಲಿಯಸ್‌, ಫೈಲೋ, ಪ್ಲೊಟೈನಸ್‌, ಪ್ರಾಕ್ಲಸ್‌ ಮೊದಲಾದವರು.’

ಈ ಘಟ್ಟಗಳನ್ನೂ ಅವುಗಳ ಪ್ರಮುಖ ದಾರ್ಶನಿಕರನ್ನೂ ಮುಂದೆ ಹಂತಹಂತವಾಗಿ ನೋಡೋಣ.

**

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ.

ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT