ಗುರುವಾರ , ಫೆಬ್ರವರಿ 25, 2021
20 °C

ಹಣತೆಗೆ ಬೇಕಿದೆ ಹೊಸ ಎಣ್ಣೆ–ಬತ್ತಿ

ಎನ್‌. ಗಾಯತ್ರಿ Updated:

ಅಕ್ಷರ ಗಾತ್ರ : | |

ಹಣತೆಗೆ ಬೇಕಿದೆ ಹೊಸ ಎಣ್ಣೆ–ಬತ್ತಿ

1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎಂದು ಬ್ರಿಟಿಷರು ಕರೆದಿದ್ದರು. ಆ ಬಗ್ಗೆ ಕಾರ್ಲ್ ಮಾರ್ಕ್ಸ್‌, ಅಮೆರಿಕದ ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ‘ಅದು ದಂಗೆಯಲ್ಲ, ಇಂಡಿಯಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದಿದ್ದರು.

ವಸಾಹತುಶಾಹಿಯನ್ನು ಕಿತ್ತುಹಾಕಿ ತನ್ನದೇ ಆಳ್ವಿಕೆಯನ್ನು ಭಾರತವು ಸ್ಥಾಪಿಸಿಕೊಳ್ಳುವುದು ಅಂದಿನ ಸಮರದ ಉದ್ದೇಶವಾಗಿತ್ತು. ಇತಿಹಾಸದಲ್ಲಿ ಸುಧಾರಣೆಗಳು ಆಗಾಗ್ಗೆ ನಡೆದಿರುವಂತೆ ಆಮೂಲಾಗ್ರ ಬದಲಾವಣೆಗಳೂ ಘಟಿಸಿವೆ. ಗುಲಾಮಿ ವ್ಯವಸ್ಥೆ ಹೋಗಿ ಊಳಿಗಮಾನ್ಯ ಪ್ರಭುತ್ವವು ಅಸ್ತಿತ್ವಕ್ಕೆ ಬರುವುದು ಅಂತಹ ಒಂದು ಪ್ರಕ್ರಿಯೆ.

ಬ್ರಿಟಿಷರ ಆಳ್ವಿಕೆಯ ಜಾಗದಲ್ಲಿ ಸ್ವತಂತ್ರ ಭಾರತವು ನೆಲೆಗೊಳ್ಳುವುದೂ ಅಂಥದೇ ಬದಲಾವಣೆ. ಇಂತಹ ಬದಲಾವಣೆಯನ್ನು ‘ಕ್ರಾಂತಿ’ ಎಂದು ಬಣ್ಣಿಸಲಾಗುತ್ತದೆ.

ಕ್ರಾಂತಿಯ ಸಿದ್ಧಾಂತವನ್ನು ಪ್ರತಿಪಾದಿಸಿದವರ ಪೈಕಿ ಕಾರ್ಲ್ ಮಾರ್ಕ್ಸ್‌ ಅಗ್ರಗಣ್ಯರು. ‘ವಿಶ್ವದ ಕಾರ್ಮಿಕರೇ ಒಂದಾಗಿ. ನೀವು ಕಳೆದುಕೊಳ್ಳುವುದೇನೂ ಇಲ್ಲ; ಬದಲಿಗೆ ಶೋಷಣೆಯ ಸಂಕೋಲೆಗಳನ್ನು ಮಾತ್ರ’ ಎಂದು ಕರೆಕೊಟ್ಟವರು ಅವರು. 1848ರಲ್ಲಿ ಮಾರ್ಕ್ಸ್‌ ಮತ್ತು ಏಂಗೆಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆ ಹೊರತಂದರು. ಅದೇ ವರ್ಷ, ಭಾರತದಲ್ಲಿ ಮೊದಲ ಕನ್ಯಾ ಶಾಲೆಯನ್ನು ಸಾವಿತ್ರಿಬಾಯಿ ಫುಲೆ ಮತ್ತು ಜೋತಿಬಾ ಫುಲೆ ಅವರು ಸ್ಥಾಪಿಸಿದರು. ಇವೆರಡನ್ನೂ ಮಹತ್ವದ ಘಟನೆಗಳಾಗಿ ಪ್ರೊಫೆಸರ್ ಮಧು ದಂಡವತೆ ಗುರುತಿಸುತ್ತಾರೆ.

ಸಮಾಜವಾದಿ ಪ್ರಭುತ್ವವನ್ನು ಸ್ಥಾಪಿಸಿದ ಸೋವಿಯತ್ ಒಕ್ಕೂಟದ ಹೋರಾಟವು ಜಗತ್ತಿನ ಹಲವಾರು ವಿಮೋಚನಾ ಹೋರಾಟಗಳಿಗೆ ಸ್ಫೂರ್ತಿಯಾಯಿತು. ಹಾಗೆ ಇದರಿಂದ ಸ್ಫೂರ್ತಿ ಪಡೆದ ದೇಶಗಳಲ್ಲಿ ಭಾರತವೂ ಒಂದು.

‘ಮೊನ್ನೆ ಮೊನ್ನೆಯವರೆಗೂ ಪಶ್ಚಿಮದ ಹೊಲಗೇರಿ

ಇಂದು ನಂದನವಾಗಿ ನಗುತಲಿದೆ ರಷ್ಯಾ

ಘರ್ಜಿಸಲು ತೊಡಗಿಹುದು ಕೇಸರಂಗಳ ಕೆದರಿ

ಇದುವರೆಗೂ ಮಲಗಿ ನಿದ್ರಿಸುತ್ತಿದ್ದ ಏಷ್ಯಾ’

ಹೀಗೆಂದು ಈ ಬದಲಾವಣೆಯನ್ನು ಮೆಚ್ಚಿ ಹಾಡಿದವರು ಕುವೆಂಪು.

ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾನ್ ಸಾಗರದಲ್ಲಿ ಗಾಂಧಿಯವರ ಹೋರಾಟ ಮಾರ್ಗವಷ್ಟೇ ಅಲ್ಲದೆ ಇತರ ಹೋರಾಟದ ನದಿಗಳೂ ಸೇರಿದ್ದವು. ನಾಡಿನ ವಿಮೋಚನೆಯ ಜೊತೆಗೇ ವರ್ಗರಹಿತ ಸಮಾಜ ಕಟ್ಟಬೇಕೆಂಬ ಕನಸಿನ ಹೋರಾಟಕ್ಕೆ ಸ್ಫೂರ್ತಿ ದಕ್ಕಿದ್ದು ಮಾರ್ಕ್ಸ್‌ವಾದಿ ಚಿಂತನೆಯಿಂದ. ಇವುಗಳಲ್ಲಿ ಬಂಗಾಲದ ಅನುಶೀಲನ ಸಮಿತಿ, ಜುಗಂತರ್, ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಅವರ ನೇತೃತ್ವದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್, ಗದ್ದರ್ ಪಕ್ಷಗಳು ಮುಖ್ಯ. ಇವೆಲ್ಲಾ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಮಹಾರಾಷ್ಟ್ರದಲ್ಲಿ ಗೋದಾವರಿ ಪರುಲೇಕರ್ ನೇತೃತ್ವದಲ್ಲಿ ನಡೆದ ವರ್ಲಿಗಳ ಹೋರಾಟ, ಬಂಗಾಲದ ತೇಭಾಗ ಚಳವಳಿ, ಆಂಧ್ರದ ತೆಲಂಗಾಣ ಹೋರಾಟ ಹಾಗೂ ಕೇರಳದ ಪುನ್ನಪ್ರ– ವಯಲಾರ್ ಮುಂತಾದ ಆರ್ಥಿಕ, ಸಾಮಾಜಿಕ ಚಳವಳಿಗಳಲ್ಲಿ ಮಾರ್ಕ್ಸ್‌ವಾದದ ಚಿಂತನೆ ಮಾರ್ಗದರ್ಶಕ ಸೂತ್ರವಾಗಿ ಕೆಲಸ ಮಾಡಿತು.

ಲಾಲಾ ಲಜಪತ್ ರಾಯ್ ಅಧ್ಯಕ್ಷತೆಯಲ್ಲಿ 1920ರ ಅಕ್ಟೋಬರ್‌ನಲ್ಲಿ ಆರಂಭವಾದ ಆಲ್ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಕಾರ್ಮಿಕರನ್ನು ಸಂಘಟಿಸಿ ನೈತಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದರೂ ನಂತರದಲ್ಲಿ ವರ್ಗಹೋರಾಟದ ಲಕ್ಷಣಗಳನ್ನು ಮೈಗೂಡಿಸಿಕೊಂಡಿತು. ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿಯಲ್ಲಿ ಭಾಗಿಯಾದವರೆಲ್ಲಾ ಮಾರ್ಕ್ಸ್‌ವಾದಿಗಳಾಗಿದ್ದರು. 1946ರಲ್ಲಿ ಬ್ರಿಟಿಷ್ ನೌಕಾದಳದ ಸೇವೆಯಲ್ಲಿದ್ದ ನಾವಿಕರು ತಮ್ಮ ಬಂದೂಕುಗಳನ್ನು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ತಿರುಗಿಸಿದರು.

ಈ ಹೋರಾಟವನ್ನು ಕೆಂಪು ಧ್ವಜ, ಕಾಂಗ್ರೆಸ್ ಧ್ವಜ ಮತ್ತು ಮುಸ್ಲಿಂ ಧ್ವಜಗಳ ಅಡಿಯಲ್ಲಿ ನಡೆಸಲು ನೌಕಾಸೈನ್ಯವು ಮುಂದಾದಾಗ ಈ ‘ದಂಗೆ’ ಬೆಂಬಲಿಸಿ ಮುಂಬೈಯ ಲಕ್ಷಗಟ್ಟಲೆ ಕಾರ್ಮಿಕರು ಒಂದು ವಾರ ಮುಷ್ಕರ ನಡೆಸಿ ವಸಾಹತುಶಾಹಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಮಾರ್ಕ್ಸ್‌ವಾದವೆಂದರೆ ಹಿಂಸೆ ಎಂಬ ಆಪಾದನೆ ಎದುರಿಸುತ್ತಿದ್ದ ಕ್ರಾಂತಿಕಾರಿಗಳು, ಇದಕ್ಕೆ ಜಗ್ಗದೆ ಹೇಗೆ ತಮ್ಮ ಸೈದ್ಧಾಂತಿಕ ನೆಲೆ ಕಂಡುಕೊಂಡರೆಂಬುದನ್ನು ನ್ಯಾಯಾಲಯದಲ್ಲಿ 1929ರ ಜೂನ್ 6ರಂದು ಭಗತ್ ಸಿಂಗ್ ಮಂಡಿಸಿದ ವಾದದಿಂದ ತಿಳಿಯಬಹುದಾಗಿದೆ: ‘ಕೆಳಗಿನ ನ್ಯಾಯಾಲಯದಲ್ಲಿ ನಮ್ಮ ಕ್ರಾಂತಿಯ ಕಲ್ಪನೆ ಏನೆಂಬ ಪ್ರಶ್ನೆ ಹಾಕಲಾಗಿತ್ತು. ಅದಕ್ಕೆ ನಮ್ಮ ಉತ್ತರ ಇದು: ‘ಕ್ರಾಂತಿ’ಯೆಂದರೆ ರಕ್ತಗೆಂಪಿನ ಸಂಘರ್ಷವೇ ಆಗಿರಬೇಕೆಂಬ ನಿಯಮ ಇಲ್ಲ. ವೈಯಕ್ತಿಕ ಜಿದ್ದಿಗೂ ಅಲ್ಲಿ ಅವಕಾಶವಿಲ್ಲ. ಕ್ರಾಂತಿಯು ಬಾಂಬು ಮತ್ತು ಪಿಸ್ತೂಲುಗಳ ಆರಾಧನೆಯಲ್ಲ. ನಮ್ಮ ದೃಷ್ಟಿಯಲ್ಲಿ ‘ಕ್ರಾಂತಿ’ ಎಂದರೆ ಸ್ಪಷ್ಟವಾಗಿ ಅನ್ಯಾಯದ ಬುನಾದಿಯ ಮೇಲೆ ರಚಿತವಾಗಿರುವ ಇಂದಿನ ವ್ಯವಸ್ಥೆ ಬದಲಾಗಬೇಕು ಎಂದರ್ಥ’.

ಕಲೆ ಮತ್ತು ಸಾಂಸ್ಕೃತಿಕ ರಂಗಗಳಲ್ಲಿಯೂ ಮಾರ್ಕ್ಸ್‌ವಾದದ ಚಿಂತನೆಯನ್ನೊಳಗೊಂಡ ‘ಇಪ್ಟಾ’, ‘ಜನ ನಾಟ್ಯ ಮಂಚ್’ ಮತ್ತು ಪ್ರಗತಿಶೀಲ ಲೇಖಕರ ಚಳವಳಿಗಳು ದೇಶದ ಎಲ್ಲೆಡೆ ಹುಟ್ಟಿಕೊಂಡವು.ಕರ್ನಾಟಕದಲ್ಲೂ ಪ್ರಗತಿಶೀಲ ಚಳವಳಿ ಹಾಗೂ ಇಪ್ಟಾ, ಸಮುದಾಯದಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗಳು ಹುಟ್ಟಿಕೊಂಡವು.

ಜಾಗತಿಕ ವೇದಿಕೆಯಲ್ಲಿ ಭಾರತದ ಸ್ವಾತಂತ್ರ್ಯದ ಪ್ರಶ್ನೆಯನ್ನು ಮಂಡಿಸಿದ ಪ್ರಥಮ ಮಹಿಳೆ ಮೇಡಂ ಭಿಕಾಜಿ ರುಸ್ತುಂ ಕಾಮಾ. 1907ರಲ್ಲಿ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ‘ಎರಡನೆಯ ಅಂತರರಾಷ್ಟ್ರೀಯ ಸಮ್ಮೇಳನ’ದಲ್ಲಿ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಲೆನಿನ್ ಮತ್ತು ಕ್ಲಾರಾ ಜೆಟ್ಕಿನ್ ಕೂಡ ಭಾಗವಹಿಸಿದ್ದರು. ಆಗ, ಮೇಡಂ ಕಾಮಾ, ಭಾರತದ ತ್ರಿವರ್ಣ ಧ್ವಜ ಮೇಲೇರಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದರು.

ಈ ಧೀರ ಪರಂಪರೆ ಮುಂದುವರೆಸಿ ಭಾರತದ ಮಹಿಳಾ ಚಳವಳಿಯಲ್ಲಿ ಸಕ್ರಿಯವಾಗಿದ್ದ ಹಲವರು ಮಾರ್ಕ್ಸ್‌ವಾದ ಮತ್ತು ಸೋವಿಯತ್ ಮಹಿಳಾ ಹೋರಾಟಗಳಿಂದ ಆಕರ್ಷಿತರಾಗಿದ್ದರು.

ಸುಭಾಷ್ ಚಂದ್ರ ಬೋಸರ ‘ಝಾನ್ಸಿ ರಾಣಿ ರೆಜಿಮೆಂಟ್’ನಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿಯವರಿಂದ ಹಿಡಿದು ಸಂಸತ್ ಸದಸ್ಯೆಯರಾಗಿದ್ದ ರೇಣು ಚಕ್ರವರ್ತಿ, ಗೀತಾ ಮುಖರ್ಜಿ, ಸುಶೀಲಾ ಗೋಪಾಲನ್, ಕನಕ್ ಮುಖರ್ಜಿಯವರೆಲ್ಲರೂ ಕಮ್ಯುನಿಸ್ಟ್ ತತ್ವಗಳಿಗೆ ಆಕರ್ಷಿತರಾಗಿ ಭಾರತದ ಮಹಿಳಾ ಚಳವಳಿಯನ್ನು ಕಟ್ಟುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದವರು.

90ರ ದಶಕದಲ್ಲಿ ಆರಂಭವಾದ ಬಂಡವಾಳಶಾಹಿ ಮತ್ತು ನವವಸಾಹತುಕರಣ ನೀತಿಯಿಂದಾಗಿ ಕೆಲವು ಶ್ರಮಿಕ ಪ್ರಭುತ್ವಗಳ ಪತನವಾಗಿದೆ. ಹಾಗೆಂದ ಮಾತ್ರಕ್ಕೆ ಅದು ಮಾರ್ಕ್ಸ್‌ವಾದದ ಪತನವಲ್ಲ, ಬದಲಿಗೆ ಮಾರ್ಕ್ಸ್‌ವಾದಿ ಪ್ರಭುತ್ವದ ಒಂದು ಮಾದರಿಯ ಪತನ ಮಾತ್ರ. ಜನವಿರೋಧಿ ಪ್ರಭುತ್ವವನ್ನು ತೊಡೆದುಹಾಕಿ ದುಡಿಯುವ ವರ್ಗಕ್ಕೆ ಅಧಿಕಾರ ನೀಡಬೇಕೆಂಬ ಮಾರ್ಕ್ಸ್‌ವಾದದ ಪಠ್ಯ ಮಾತ್ರ ಶಾಶ್ವತವಾದದ್ದು. ಶೋಷಿತರ ಪರವಾಗಿ ಹಚ್ಚಿಟ್ಟ ಈ ಹಣತೆ ಶಾಶ್ವತವಾದದ್ದು. ಅದಕ್ಕೆ ಹೊಸ ಎಣ್ಣೆ ಮತ್ತು ಬತ್ತಿ ಹಾಕಬೇಕಿದೆಯಷ್ಟೇ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.