ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಹಟ್ಟಿಯಿಂದ 114 ಕಿ.ಮೀ ದೀಡ್ ನಮಸ್ಕಾರ

ಸಿ.ಎಂ ಸಿದ್ದರಾಮಯ್ಯ ಗೆಲುವಿಗಾಗಿ ಪ್ರಾರ್ಥನೆ: ಬನಶಂಕರಿ ದೇವಿಗೆ ಬೆಂಬಲಿಗರ ಮೊರೆ
Last Updated 5 ಮೇ 2018, 8:46 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿಗಾಗಿ ಪ್ರಾರ್ಥಿಸಿ ಮೂವರು ಬೆಂಬಲಿಗರು ಬನಹಟ್ಟಿಯಿಂದ ಬನಶಂಕರಿ ದೇವಸ್ಥಾನದವರೆಗೆ 114 ಕಿ.ಮೀ ದೀಡ್ ನಮಸ್ಕಾರ ಹಾಕಿದ್ದಾರೆ.

ಬನಹಟ್ಟಿ ಪಟ್ಟಣದ ಸಿದ್ದು ಗಂಜಾಳ, ಶಂಕರ್ ಬಣಕಾರ ಹಾಗೂ ನೇವಿನಾಡ ಕಾಗವಾಡ ಸುದೀರ್ಘ ದೀಡ್ ನಮಸ್ಕಾರ ಹಾಕಿದವರು. ಸುಡುಬಿಸಿಲನ್ನೂ ಲೆಕ್ಕಿಸದೇ ಸತತ ನಾಲ್ಕು ದಿನಗಳ ಕಾಲ ನಿರಂತರವಾಗಿ ಸಹಾಯಕರೊಂದಿಗೆ ದೀಡ್‌ ನಮಸ್ಕಾರ ಯಾತ್ರೆ ನಡೆಸಿದ ಅವರು ಬುಧವಾರ ರಾತ್ರಿ ಬನಶಂಕರಿ ದೇವಸ್ಥಾನ ತಲುಪಿದ್ದಾರೆ. ಮರುದಿನ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೆಚ್ಚಿನ ನಾಯಕನ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

‘ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಅದರಲ್ಲೂ ಸಿದ್ದರಾಮಯ್ಯ ಹಾಗೂ ಸಚಿವೆ ಉಮಾಶ್ರೀ ಗೆಲುವಿಗಾಗಿ ವಿಶೇಷ ಪೂಜೆ ಮಾಡಿಸಿದ್ದೇವೆ’ ಎಂದು ಸಿದ್ದು ಗಂಜಾಳ, ಶಂಕರ್ ಬಣಕಾರ್ ತಿಳಿಸಿದರು. ‘ಕಳೆದ ವಿಧಾನಸಭಾ ಚುನಾವಣೆ ವೇಳೆ ಉಮಾಶ್ರೀ ಅವರ ಗೆಲುವಿಗೆ ಪ್ರಾರ್ಥಿಸಿ, ಬನಹಟ್ಟಿಯಿಂದ ಬಬಲಾದಿ ಮಠದವರೆಗೂ ದೀಡ್ ನಮಸ್ಕಾರ ಹಾಕಿದ್ದೆವು’ ಎಂದು ಇದೇ ವೇಳೆ ಸ್ಮರಿಸಿದರು.

ಇದಲ್ಲದೇ ಪಕ್ಕದ ಕೊಪ್ಪಳ ಜಿಲ್ಲೆಯ ಹಲಗೇರಿಯಿಂದ ಬಂದಿದ್ದ ಗುಡದಪ್ಪ ಬನಪ್ಪನವರ ಎಂಬುವವರು ಸಿದ್ದರಾಮಯ್ಯ ಗೆಲುವಿಗೆ ಪ್ರಾರ್ಥಿಸಿ ಶುಕ್ರವಾರ ಬನಶಂಕರಿ ದೇಗುಲದ ಕೂಗಳತೆ ದೂರದಲ್ಲಿರುವ ಪಾದಗಟ್ಟಿಯಿಂದ ಉರುಳು ಸೇವೆ ಮಾಡಿದರು. ಸಂಬಂಧಿ ಮಹಿಳೆಯರು ಆರತಿ ತಟ್ಟೆ ಹಿಡಿದು ಅವರ ಹಿಂದೆ ಹೆಜ್ಜೆ ಹಾಕಿದರು. ಕೊಪ್ಪಳದಿಂದ ಆಗಮಿಸಿದ್ದ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಡೊಳ್ಳು ಮೇಳದ ನಾದಕ್ಕೆ ಹುರುಪಿನಂದಿಲೇ ಗುಡದಪ್ಪ ಅವರಿಗೆ ಸಾಥ್ ನೀಡಿದರು.

‘ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಗೆಲುವು ಸಾಧಿಸಲಿ ಎಂದು ಹರಕೆ ಹೊತ್ತುಕೊಂಡಿದ್ದೇನೆ. ಬನಶಂಕರಿ ತಾಯಿ ಅವರಿಗೆ ಆಶೀರ್ವದಿಸಲಿದ್ದಾಳೆ ಎಂಬ ನಂಬಿಕೆ ಇದೆ’ ಎಂದು ಗುಡದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT