ಭಾನುವಾರ, ಮಾರ್ಚ್ 26, 2023
32 °C
ಅಪಘಾತದ ನಂತರ ವಾಹನ ಅಲ್ಲೇ ಬಿಟ್ಟು ಬಸ್ ಹತ್ತಿದ ಸಿಬ್ಬಂದಿ, ಗಾಯಾಳು ಸಾವು

ಮಾನವೀಯತೆ ಮರೆತ ಪೊಲೀಸರು: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವೀಯತೆ ಮರೆತ ಪೊಲೀಸರು: ಆಕ್ರೋಶ

ಚಾಮರಾಜನಗರ: ಇಲ್ಲಿನ ಸಂತೇಮರಹಳ್ಳಿ ಹೋಬಳಿಯ ಬಸವಟ್ಟಿ ಗೇಟ್ ಬಳಿ ಶುಕ್ರವಾರ ಪೊಲೀಸ್ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಶಂಭುಲಿಂಗಪ್ಪ (45) ಮೃತಪ‍ಟ್ಟಿದ್ದಾರೆ.

ಗಾಯಗೊಂಡಿದ್ದ ಶಂಭುಲಿಂಗಪ್ಪ ಅವರಿಗೆ ಚಿಕಿತ್ಸೆ ಕೊಡಿಸದೇ ವಾಹನ ಬಿಟ್ಟು ಪರಾರಿಯಾದ ಪೊಲೀಸರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ, ಮಾನವೀಯತೆ ಎರಡನ್ನೂ ಮರೆತಿದ್ದಾರೆ ಎಂದು ದೂರಿದರು.

‘ಸಂತೇಮರಹಳ್ಳಿಯಿಂದ ತಿ.ನರಸೀ ಪುರಕ್ಕೆ ತೆರಳುತ್ತಿದ್ದ ಪೊಲೀಸರಿಗೆ ಸೇರಿದ ಬೊಲೆರೊ ವಾಹನ ಬಸವಟ್ಟಿ ಗೇಟ್ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ನರಳುತ್ತಿದ್ದ ಶಂಭುಲಿಂಗಪ್ಪ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದ ಪೊಲೀಸರು, ವಾಹನ ಬಿಟ್ಟು ತ‌ಮ್ಮಲ್ಲಿದ್ದ ಬ್ಯಾಗ್‌ಗಳ ಸಮೇತ ದಾರಿಯಲ್ಲಿ ಬಂದ ಬಸ್‌ ಹತ್ತಿ ತೆರಳಿದರು’ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.

ವಾಹನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದರೂ ಎಂದು ಅವರು ಹೇಳಿದ್ದಾರೆ. ಆದರೆ, ಈ ಆರೋಪವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅಲ್ಲಗಳೆದಿದ್ದಾರೆ.

ಗ್ರಾಮಸ್ಥರೇ ಅಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಗಾಯಾಳುವನ್ನು ಕರೆ ತಂದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಒಂದು ವೇಳೆ ಸಕಾಲದಲ್ಲಿ ಪೊಲೀಸರು ಚಿಕಿತ್ಸೆ ನೀಡಿದ್ದರೆ ಶಂಭುಲಿಂಗಪ್ಪ ಬದುಕುತ್ತಿದ್ದರು ಎಂದು ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರು ಬಸವಟ್ಟಿ ಸಮೀಪ ತಿ.ನರಸೀಪುರ– ಸಂತೇಮರಹಳ್ಳಿ ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದರು. ಈ ಮಧ್ಯೆ ಸ್ಥಳಕ್ಕೆ ಪೊಲೀಸ್ ವಾಹನ ತೆಗೆದುಕೊಂಡು ಹೋಗಲು ಬಂದ ಪೊಲೀಸರಿಗೆ ಘೇರಾವ್ ಹಾಕಿದರು.

ಸ್ಥಳಕ್ಕೆ ಡಿವೈಎಸ್‌ಪಿ ಜಯಕುಮಾರ್ ಬಂದು ಸಾರ್ವಜನಿಕರನ್ನು ಸಮಾಧಾನಪ‍ಡಿಸಲು ಯತ್ನಿಸಿದರು. ಈ ಮಧ್ಯೆ ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಯತ್ನಿಸುತ್ತಿದ್ದವರ ಮೇಲೆ ಅವರು ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರೂ ಹೆಚ್ಚಿನ ಪ್ರತಿರೋಧ ಒಡ್ಡಿದರು. ಕೊನೆಗೆ, ಸ್ಥಳ ಮಹಜರು ಮಾಡಿ ಪೊಲೀಸರು ವಾಹನವನ್ನು ತೆಗೆದುಕೊಂಡು ಹೋದರು. ಚಾಲಕ ಅಂಬರೀಷ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ವಾಹನದಲ್ಲಿ ಪೊಲೀಸರು ಇರಲಿಲ್ಲ: ಎಸ್‌ಪಿ

‘ಸಿಆರ್‌ಪಿಎಫ್‌ ಯೋಧರು ಚುನಾವಣಾ ಭದ್ರತೆಗಾಗಿ ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದರು. ಇವರನ್ನು ಕರೆತರಲು ವಾಹನವನ್ನು ಕಳುಹಿಸಿಕೊಡಲಾಗಿತ್ತು. ಇದನ್ನು ಚಾಲನೆ ಮಾಡುತ್ತಿದ್ದ ಅಂಬರೀಷ್ ಅಪಘಾತದ ನಂತರ ಗುಂಪುಗೂಡಿದ ಸಾರ್ವಜನಿಕರಿಗೆ ಹೆದರಿ ಪಲಾಯನ ಮಾಡಿದ್ದಾರೆ. ವಾಹನದಲ್ಲಿ ಬೇರೆ ಪೊಲೀಸರು ಇರಲಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರ ಆರೋಪ ಸತ್ಯಕ್ಕೆ ದೂರವಾದದ್ದು, ಮಹಜರು ನಡೆಸಿ ವಾಹನ ತೆಗೆದುಕೊಂಡು ಹೋಗಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಇದರಲ್ಲಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿಲ್ಲ. ಪೊಲೀಸರೇ ಗಾಯಾಳುವನ್ನು ಚಾಮರಾಜನಗರದಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಿದರು’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.