ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಒಟ್ಟು 15,01,020 ಮತದಾರರು

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 35,646 ಹೊಸ ಮತದಾರರ ಸೇರ್ಪಡೆ
Last Updated 5 ಮೇ 2018, 8:50 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ 15,01,020 ಮತದಾರರಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ 35,646 ಹೊಸ ಮತದಾರರ ಸೇರ್ಪಡೆಯಾಗಿದೆ. 8,466 ಮತದಾರರನ್ನು ಕಡಿತಗೊಳಿಸಲಾಗಿದ್ದು, 18–19 ವರ್ಷದೊಳಗಿನ 11,415 ಜನರನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 7,50,688 ಪುರುಷ ಹಾಗೂ 7,50,243 ಮಹಿಳಾ ಮತದಾರರು ಹಾಗೂ 89 ಇತರೆ ಮತದಾರರಿದ್ದಾರೆ ಎಂದರು.

ಮತಗಟ್ಟೆಗಳಿಗೆ ನೇಮಿಸಲಾದ ಅಧಿಕಾರಿಗಳಿಗೆ ಅಂಚೆ ಮತಪತ್ರಗಳನ್ನು ಪೂರೈಸುವ ಕುರಿತು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆದೇಶದೊಂದಿಗೆ ನಮೂನೆ 12ನ್ನು ಸಹ ವಿತರಣೆ ಮಾಡಲಾಗಿದೆ. ನಮೂನೆ 12ನ್ನು ಭರ್ತಿ ಮಾಡಿ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ವಿಶೇಷ ಕೌಂಟರ್‌ ಸ್ಥಾಪಿಸಲಾಗಿದೆ ಎಂದರು.

ಚುನಾವಣೆಗೆ ಸಂಬಂಧಿಸಿದ ವಿವಿಧ ರಾಜಕೀಯ ಪಕ್ಷಗಳಿಗೆ ಪರವಾನಿಗೆ ಹಾಗೂ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಇಲ್ಲಿಯವರೆಗೆ ಸುವಿದಾದಡಿ ಒಟ್ಟು ಸ್ವೀಕೃತಗೊಂಡಿದ್ದ 75 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 52 ಅರ್ಜಿ ಸ್ವೀಕೃತಗೊಂಡಿದ್ದು, ಅದರಲ್ಲಿ 46 ವಿಲೇವಾರಿ ಮಾಡಲಾಗಿದ್ದು, ಇಂದಿನ 6 ಅರ್ಜಿಗಳು ಬಾಕಿ ಉಳಿದಿವೆ. ಚುನಾವಣಾ ಆಯೋಗದಿಂದ ಬಂದ 43 ಅರ್ಜಿಗಳನ್ನು ಸಹ ವಿಲೇವಾರಿ ಮಾಡಲಾಗಿದೆ. ಇಸಿಐಆರ್‌ ಪಿಜಿಆರ್‌ಗೆ ಸಂಬಂಧಿಸಿದಂತೆ ಸ್ವೀಕೃತವಾದ 85 ಅರ್ಜಿಗಳನ್ನು ಸಹ ವಿಲೇವಾರಿ ಮಾಡಲಾಗಿದೆ ಎಂದರು.

ಜಿಲ್ಲೆಗೆ ಅವಶ್ಯವಿರುವ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ರ‍್ಯಾಂಡ್‌ಮೈಸೇಶನ್ ಮೂಲಕ ಎಲ್ಲಾ ಮತಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಸದರಿ ಮತಯಂತ್ರಗಳಿಗೆ ಸಂಬಂಧಿಸಿದಂತೆ ಸ್ಟ್ರಾಂಗ್ ರೂಮ್‌ಗಳನ್ನು ಸ್ಥಾಪಿಸಿ ಸುರಕ್ಷಿತ ಭದ್ರತೆಯಲ್ಲಿ ಕಾಯ್ದಿರಿಸಲಾಗಿದೆ. ಜಮಖಂಡಿ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳಿರುವುದರಿಂದ ಈ ಸಾರಿ ಎರಡು ಬ್ಯಾಲೆಟ್ ಯುನಿಟ್‌ಗಳನ್ನು ಮತದಾನಕ್ಕೆ ಉಪಯೋಗಿಸಲಾಗುತ್ತಿದೆ. ಮತದಾನಕ್ಕೆ ಕಳುಹಿಸಲಾಗುವ ಮತಯಂತ್ರಗಳಲ್ಲಿ ಕ್ಯಾಂಡಿಡೇಟ್ ಸೆಟ್ಟಿಂಗ್ ಮಾಡಬೇಕಾಗಿದ್ದು, ಈ ಪ್ರಕ್ರಿಯೆ ಸದ್ಯದಲ್ಲಿಯೇ ಪೂರ್ಣಗೊಳ್ಳುವುದು ಎಂದರು.

ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ಮತ ಎಣಿಕೆಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮುಖ್ಯ ಕಟ್ಟಡದಲ್ಲಿ ನಡೆಯಲಿದೆ. ಈಗಾಗಲೇ ಪೂರ್ವಸಿದ್ದತೆ ಕೈಗೊಳ್ಳಲಾಗಿದೆ. ಪ್ರತಿಯೊಂದು ಕ್ಷೇತ್ರಕ್ಕೆ ಒಂದು ಭದ್ರತಾ ಕೊಠಡಿ, ಮತ ಎಣಿಕೆ ಕೊಠಡಿ ಹಾಗೂ ಚುನಾವಣಾ ವೀಕ್ಷಕರ ಕೊಠಡಿ, ಪತ್ರಿಕಾ ಮಾಧ್ಯಮದವರ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಕ್ಷೇತ್ರದ ಮತ ಎಣಿಕೆ ಸಲುವಾಗಿ 14 ಟೇಬಲ್‌ಗಳನ್ನು ಇಡಲಾಗಿದೆ. ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದ್ದು, ಆದೇಶಗಳನ್ನು ನೀಡಲಾಗುವುದು ಎಂದು ಶಾಂತಾರಾಮ ತಿಳಿಸಿದರು.

ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗಳು ಚುನಾವಣಾ ಆಯೊಗದಿಂದ ಸ್ವೀಕೃತಗೊಂಡಿದ್ದು, ಅವುಗಳನ್ನು ಬೂತ್ ಮಟ್ಟದ ಅಧಿಕಾರಿಗಳ ಮುಖಾಂತರ ಮತದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮೇ 8 ರೊಳಗಾಗಿ ಹಂಚಿಕೆ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಮಾತನಾಡಿ, ಮಹಿಳಾ ಮತದಾರರು ಹೆಚ್ಚಿಗೆ ಇರುವ ಮತಗಟ್ಟೆಗಳನ್ನು ಸಖಿ ಪಿಂಕ್ ಮತಗಟ್ಟೆಗಳನ್ನಾಗಿ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಮತಗಟ್ಟೆಗಳನ್ನು ಪ್ರತಿ ಮತಕ್ಷೇತ್ರದಲ್ಲಿ ಎರಡರಂತೆ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಹಾಜರಿದ್ದರು.

ನೀತಿ ಸಂಹಿತೆ ಉಲ್ಲಂಘನೆ: 32 ಪ್ರಕರಣ ದಾಖಲು

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಲ್ಲಿ 32 ಪ್ರಕರಣಗಳು ದಾಖಲಾಗಿವೆ. ಮುಧೋಳದಲ್ಲಿ 6, ತೇರದಾಳದಲ್ಲಿ 3, ಜಮಖಂಡಿಯಲ್ಲಿ 3, ಬೀಳಗಿಯಲ್ಲಿ 4, ಬಾದಾಮಿಯಲ್ಲಿ 6 ಹಾಗೂ ಹುನಗುಂದದಲ್ಲಿ 10 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ ತಿಳಿಸಿದರು.

17 ಪ್ರಕರಣಗಳು ಪರವಾನಿಗೆ ಇಲ್ಲದೇ ವಾಹನಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ್ದಾಗಿವೆ. ಉಳಿದ ಪ್ರಕರಣಗಳಲ್ಲಿ ಮತದಾರರಿಗೆ ಊಟದ ವ್ಯವಸ್ಥೆ ಮತ್ತು ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ಸಾಗಿಸಿರುವ ಪ್ರಕರಣಗಳಾಗಿವೆ ಎಂದರು.

ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ಒಟ್ಟು ₹1,62,10,920 ಹಣ ಜಪ್ತಿ ಮಾಡಲಾಗಿದೆ. ಅಬಕಾರಿ ಹಾಗೂ ಪೋಲಿಸ್ ಇಲಾಖೆಗಳ ಅಧಿಕಾರಿಗಳು ಒಟ್ಟು 16845 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ. ಅದರ ಅಂದಾಜು ಮೌಲ್ಯ ₹50.40 ಲಕ್ಷವಾಗಿದೆ. ಅಲ್ಲದೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾದ ಅಂದಾಜು ಮೌಲ್ಯ ₹20.19 ಲಕ್ಷ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT