‘ಕಮಲ ಗೆಲ್ಲಿಸಿದರೆ ಮನೆಗೆ ಲಕ್ಷ್ಮಿ’

7
ಗುಳೇದಗುಡ್ಡ: ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಶೋ

‘ಕಮಲ ಗೆಲ್ಲಿಸಿದರೆ ಮನೆಗೆ ಲಕ್ಷ್ಮಿ’

Published:
Updated:

ಗುಳೇದಗುಡ್ಡ (ಬಾಗಲಕೋಟೆ): ‘ಕೈಯಲ್ಲಿ ಲಕ್ಷ್ಮಿ ಇರೊಲ್ಲ. ಬದಲಿಗೆ ಕಮಲ ಲಕ್ಷ್ಮಿಯ ನೆಲೆ. ಹಾಗಾಗಿ ಕಮಲಕ್ಕೆ ಮತ ಹಾಕಿ ಗೆಲ್ಲಿಸಿದರೆ ನಿಮ್ಮ ಮನೆಗೆ ಸಾಕ್ಷಾತ್‌ ಲಕ್ಷ್ಮಿಯೇ ಬಂದಂತೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಶುಕ್ರವಾರ ಪಟ್ಟಣದಲ್ಲಿ ರೋಡ್ ಷೋ ನಡೆಸಿ ಮತಯಾಚಿಸಿದ ಅವರು ನಂತರ ಇಲ್ಲಿನ ಚೌ ಬಜಾರ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ರೈತರು ಹಾಗೂ ನೇಕಾರರ ₹1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.

‘ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿದ್ದರಾಮಯ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ರೈತರ ವಿಕಾಸ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಭ್ರಷ್ಟಾಚಾರ, ಸಮಾಜ ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ ಸರ್ಕಾರ ದಾಖಲೆ ಮಾಡಿದೆ. ಈ ಸರ್ಕಾರದ ಬಗ್ಗೆ ನಾಡಿನ ಬೇಸತ್ತಿದ್ದಾರೆ. ಕಮಲ ಅರಳಿಸಲು ಕಾಯುತ್ತಿದ್ದಾರೆ. ಮೇ 18ರ ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ಭವಿಷ್ಯ ನುಡಿದರು.

ಇದಕ್ಕೂ ಮೊದಲು ಪಟ್ಟಣದ ಪವಾರ್‌ ಕ್ರಾಸ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಹೊರಟ ಸ್ಮೃತಿ ಇರಾನಿ, ಝಳಕಿ ಘಂಟಿ, ಅರಳಿಕಟ್ಟಿ, ಪುರಸಭೆ ಮುಂಭಾಗದಿಂದ ಚೌಬಜಾರ್ ತಲುಪಿದರು.

ಸಂಜೆ ನಾಲ್ಕು ಗಂಟೆಗೆ ಪಟ್ಟಣದ ಹೆಲಿಪ್ಯಾಡ್‌ಗೆ ಬಂದ ಸ್ಮೃತಿ ಇರಾನಿ ಅವರನ್ನು ಮಾಜಿ ಶಾಸಕರಾದ ರಾಜಶೇಖರ ಶೀಲವಂತರ, ಮಲ್ಲಿಕಾರ್ಜುನ ಬನ್ನಿ, ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾಗ್ಯ ಉದನೂರ,ಬಾಗಲಕೋಟೆ ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಮುಖಂಡರಾದ ಸಿದ್ದುಹರಕಲಚಿಟ್ಟಿ, ಶ್ರೀಕಾಂತ ಬಾವಿ, ಸಂಪತ್‌ ರಾಟಿ, ಕಮಲ್ ಮಾಲ್ಪಾನಿ ಸ್ವಾಗತಿಸಿ ಕರೆತಂದರು.

ಸಾರ್ವಜನಿಕ ಸಭೆ ರದ್ದು..

ಗುಳೇದಗುಡ್ಡ (ಬಾಗಲಕೋಟೆ): ರೋಡ್ ಷೋ ಮುಗಿಸಿದ ನಂತರ ಕರನಂದಿ ರಂಗಮಂದಿರದಲ್ಲಿ ಸ್ಮೃತಿ ಇರಾನಿ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊನೆಯ ಕ್ಷಣದಲ್ಲಿ ಸಭೆ ರದ್ದು ಮಾಡಿದ ಸ್ಮೃತಿ ವಾಪಸ್ ತೆರಳಿದರು.

ಸಂಜೆ ತಡವಾದರೆ ಹೆಲಿಕಾಪ್ಟರ್‌ ಹಾರಾಟಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಸ್ಮೃತಿ ಸಾರ್ವಜನಿಕ ಸಭೆ ರದ್ದು ಮಾಡಿದರು ಎಂದು ಸಂಘಟಕರು ತಿಳಿಸಿದರು.

ರೋಡ್ ಷೋ ವೇಳೆ ಮನೆಯ ಮಾಳಿಗೆ ಮೇಲೆ, ಅಕ್ಕಪಕ್ಕದ ಅಟ್ಟ, ಕಟ್ಟೆಗಳ ಮೇಲೆ ನಿಂತ ಮಹಿಳೆಯರು ಟಿವಿ ಧಾರಾವಾಹಿಯಲ್ಲಿ ನೋಡಿದ್ದ ಸ್ಮೃತಿ ಇರಾನಿ ಅವರನ್ನು ಕಣ್ತುಂಬಿಕೊಂಡರು. ಕೆಲವರು ಹತ್ತಿರ ತೆರಳಿ ಸೆಲ್ಫಿ ತೆಗೆದುಕೊಂಡರು. ಸ್ಮೃತಿ ಮಾಳಿಗೆ ಮೇಲೆ ನಿಂತವರತ್ತ ಕೈ ಬೀಸುತ್ತಾ ನಗೆ ಬೀರಿದರು. ಹೆಲಿಪ್ಯಾಡ್‌ನಿಂದ ಪಟ್ಟಣಕ್ಕೆ ಬರುವಾಗ ಮಧ್ಯದ ಚೆಕ್‌ಪೋಸ್ಟ್‌ನಲ್ಲಿ ಸಚಿವೆಯ ಕಾರನ್ನು ತಡೆದ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry