ಜನರ ವಿರೋಧದ ನಡುವೆ ಮತಯಾಚನೆ!

7
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ ಬಿರುಸಿನ ಪ್ರಚಾರ

ಜನರ ವಿರೋಧದ ನಡುವೆ ಮತಯಾಚನೆ!

Published:
Updated:
ಜನರ ವಿರೋಧದ ನಡುವೆ ಮತಯಾಚನೆ!

ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ಝಳದ ನಡುವೆ ನೂರಾರು ಕಾರ್ಯಕರ್ತರೊಡನೆ ಮುಖಂಡರ ಜೊತೆಗೂಡಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ ಮತಭೇಟೆ ಆರಂಭಿಸಿದ್ದಾರೆ.

ಪತಿ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಉಪಚುನಾವಣೆಯಲ್ಲಿ ಗೆದ್ದು ಸಚಿವೆಯಾಗಿ 2ನೇ ಬಾರಿಗೆ ಅದೃಷ್ಠ ಪರೀಕ್ಷೆಗೆ ಅವರು ಭರದ ಸಿದ್ದತೆ ನಡೆಸಿದ್ದಾರೆ. ಇವರ ಜೊತೆ ಪ್ರಚಾರಕ್ಕೆ ಹೋದ ಸಂದರ್ಭದ ಒಂದು ನೋಟ ಇಲ್ಲಿದೆ.

ಇವರು ತಾವು ವಾಸ ಇರುವ ಮೈಸೂರಿನ ಕುವೆಂಪುನಗರದ ಮನೆಯಿಂದ ಬೆಳಿಗ್ಗೆ 9 ಗಂಟೆಗೆ ಹೊರಟು 10 ಗಂಟೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಪುತ್ರ ಗಣೇಶ್‍ಪ್ರಸಾದ್ ಜತೆ ಬಂದು ಪಟ್ಟಣದಲ್ಲಿ ನಡೆಯುವ ಪ್ರಚಾರಕ್ಕೆ ಗುರುವಾರ ಚಾಲನೆ ನೀಡಿದರು. ಬಳಿಕ 11 ಗಂಟೆಗೆ ತಾಲ್ಲೂಕಿನ ಬೇಗೂರು ಜಿಲ್ಲಾ ಪಂಚಾಯಿತಿಯ ಚಿಕ್ಕುಂಡಿ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಜನರು ಆರತಿ ತೆಗೆದು ಮೋಹನಕುಮಾರಿ ಅವರನ್ನು ಬರಮಾಡಿಕೊಂಡರು.

ನಂತರ, ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಾ, ‘ಈ ಬಾರಿಯೂ ಅವಕಾಶ ಮಾಡಿಕೊಡಿ, ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿ 5 ವರ್ಷ ಸಿಗುತ್ತದೆ ಹೆಚ್ಚಿನ ಕೆಲಸ ಮಾಡಬೇಕು ಎಂಬ ಹಂಬಲವಿದೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಕೆಲವೊಂದು ಗ್ರಾಮಗಳಲ್ಲಿ ಅಲ್ಲಿನ ಜನಪ್ರತಿನಿದಿಗಳ ಜೊತೆ ತೆರಳಿದಾಗ ‘ಏಕೆ ಈಗ ಇಲ್ಲಿನ ಜನರ ನೆನಪಾಯಿತೇ, ಏಕೆ ಈವಾಗ ಬಂದೀರಿ, ಯಾವ ಕೆಲಸಗಳನ್ನು ಮಾಡಿದ್ದೀರಿ’ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ‘ನನಗೆ ಸಿಕ್ಕ ಅವಕಾಶದಲ್ಲಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ, ಈ ಬಾರಿ ಗೆಲ್ಲಿಸಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ’ ಎಂಬ ಭರವಸೆಗಳನ್ನು ನೀಡುತ್ತಾ ಅವರು ಮುಂದೆ ಸಾಗಿದರು.

‘ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರೀತಿ ಸಿಗುತ್ತಿದೆ. ವಿರೋಧವನ್ನೂ ಪ್ರೀತಿಯನ್ನಾಗಿಯೇ ಭಾವಿಸುತ್ತಿದ್ದೇನೆ. ಕೆಲವು ಗ್ರಾಮಗಳಿಗೆ ಭೇಟಿ ನೀಡಿದಾಗ ಹೆಚ್ಚಿನ ಮಹಿಳೆಯರು ಸೇರಿ ಬರ ಮಾಡಿಕೊಂಡು ಪ್ರಚಾರ ಮುಗಿಯುವವರೆಗೂ ಜೊತೆಗಿದ್ದು ಬೆಂಬಲ ನೀಡುತ್ತಿದ್ದಾರೆ. ರಾಜಕೀಯ ಅನುಭವವಿಲ್ಲದ ನನಗೆ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದರೆ ನಾನು ಮಾಡಿರುವ ಪುಣ್ಯ. ಇದನ್ನು ನಾನು ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಮೋಹನಕುಮಾರ ಪ್ರತಿಕ್ರಿಯಿಸಿದರು.

ಕೆಲ ಗ್ರಾಮಗಳಲ್ಲಿ ವಾಹನದಲ್ಲಿ ರೋಡ್ ಶೊ ನಡೆಸಿದರೆ ಸಣ್ಣ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಜನರನ್ನು ಮಾತನಾಡಿಸಿ ಮತಯಾಚನೆ ಮಾಡುತ್ತಿದ್ದರು. ಈ ಕ್ಷೇತ್ರದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಹಳ್ಳಿಗಳಿರುವುದರಿಂದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಬೇಕು ಎಂಬ ಉದ್ದೇಶದಿಂದ ರಾತ್ರಿ 9ರವರೆಗೆ ಪ್ರಚಾರ ನಡೆಸಿ ಮನೆಗೆ ಹಿಂದಿರುಗಿದರು.

ಮಧ್ಯಾಹ್ನದ ಸಮಯದಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುವಾಗ ಬಿಸಿಲಿನ ಝಳಕ್ಕೆ ಆಯಾಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರು ಪ್ರೀತಿಯಿಂದ ಬರಮಾಡಿಕೊಂಡು ನೆರಳಿನಲ್ಲಿ ಕೂರಿಸಿ ಉಪಚರಿಸುತ್ತಾರೆ. ಭೋಜನವನ್ನೂ ನೀಡುತ್ತಾರೆ. ಈ ಕಾರ್ಯ ಇನ್ನಷ್ಟು ಪ್ರಚಾರಕ್ಕೆ ಹುರಿದುಂಬಿಸುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಎಂ.ಮಲ್ಲೇಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry