ಬುಧವಾರ, ಮಾರ್ಚ್ 3, 2021
30 °C
ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌

ಧರ್ಮದ ಹೆಸರಿನಲ್ಲಿ ರಾಜಕಾರಣ; ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮದ ಹೆಸರಿನಲ್ಲಿ ರಾಜಕಾರಣ; ಆತಂಕ

ಶಿಡ್ಲಘಟ್ಟ: ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ದೌರ್ಭಾಗ್ಯದ ಸಂಗತಿ. ಹಿಂದೂ ಮುಸ್ಲಿಂ ನಡುವೆ ಕಂದಕ ಸೃಷ್ಟಿಸಿ ಮಾಡುವ ರಾಜಕಾರಣ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಆತಂಕ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಧರ್ಮದ ಹೆಸರಿನ ರಾಜಕೀಯಕ್ಕೆ ಗುರಿಯಾಗಿ ಉತ್ತರ ಭಾರತದ ರಾಜ್ಯಗಳು ಹಿಂದುಳಿದಿವೆ. ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳಬೇಕು. ಧರ್ಮದ ನಡುವೆ, ಧರ್ಮಗಳ ನಡುವೆ ಒಡೆದು ರಾಜಕಾರಣ ಮಾಡುವವರನ್ನು ದೂರವಿಡಿ ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣದಿಂದ ಮರುಳು ಮಾಡುತ್ತಾರೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆಂದು ಸುಳ್ಳು ಹೇಳಿದ್ದರು. ವಿದೇಶದಿಂದ ಸಾವಿರಾರು ಕೋಟಿ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ ₹ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಈಡೇರಿಲ್ಲ. ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಪಾತಕಿಗಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.

‘ಕೇಂದ್ರದಲ್ಲಿ ಕೆ.ಎಚ್‌.ಮುನಿಯಪ್ಪ ರಾಜ್ಯದಲ್ಲಿ ವಿ.ಮುನಿಯಪ್ಪ ಇದ್ದರೆ ನಿಮ್ಮ ಕ್ಷೇತ್ರ ಸುಭಿಕ್ಷವಾಗಿರುತ್ತದೆ. ಮುನಿ ಎಂದರೆ ಸಾತ್ವಿಕರು, ತಪೋನಿರತರು, ಮಾನವತ್ವದ ಪ್ರತಿರೂಪ. ಅಂಥಹವರ ಆಯ್ಕೆ ನಿಮ್ಮದಾಗಲಿ. ಸರ್ವಧರ್ಮ ಸಮನ್ವಯದ, ಹಿಂದುಳಿದವರ ಏಳಿಗೆಯ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌, ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿದರು. ಇದಕ್ಕೂ ಮುನ್ನ ಗುಲಾಂ ನಬಿ ಆಜಾದ್ ಗಾರ್ಡನ್‌ ರಸ್ತೆಯ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕಾಂಗ್ರೆಸ್‌ ವೀಕ್ಷಕರಾದ ಕಾರ್ತಿಕ್‌, ಶ್ರೀಧರ್‌ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇಶವರೆಡ್ಡಿ, ಗುಡಿಯಪ್ಪ, ಆರ್‌. ಶ್ರೀನಿವಾಸ್‌ ಭಾಗವಹಿಸಿದ್ದರು.

ಕಾರ್ಯಕರ್ತರಿಗೆ ಆಜಾದ್‌ ಪಾಠ

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಭಾಷಣ ಮಾಡುವಾಗ ಕಾಂಗ್ರೆಸ್‌ ಮುಖಂಡರೊಬ್ಬರು ‘ಸ್ಥಳೀಯವಾಗಿ ಜೆಡಿಎಸ್‌ ಎದುರಾಳಿ. ಅವರ ಬಗ್ಗೆ ಮಾತನಾಡಿ’ ಎಂದು ಚೀಟಿಯನ್ನು ನೀಡಿದರು. ಆಗ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಾನಿಲ್ಲಿ ಬೈಯಲು ಬಂದಿಲ್ಲ. ಹಾಗೆ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ನಿಮಗೆ ನಾಲ್ಕನೇ ತರಗತಿಯ ಪಾಠವನ್ನು ಹೇಳಬೇಕಿದೆ ಎಂದು ಅಲ್ಲಿದ್ದವರ ಬಳಿ ಕೆಲವು ಪೆನ್ನುಗಳನ್ನು ಸಂಗ್ರಹಿಸಿದರು. ಇವನ್ನು ಕೋಲು ಅಂದುಕೊಳ್ಳಿ. ಒಂದನ್ನಾದರೆ ಮುರಿಯಬಹುದು ಒಟ್ಟಿಗೆ ಇದ್ದಾಗ ಮುರಿಯಲು ಸಾಧ್ಯವೆ. ಹಾಗೆಯೇ ನೀವು ಒಗ್ಗಟ್ಟಾಗಿದ್ದರೆ ಯಾರೂ ನಿಮ್ಮನ್ನು ಏನೂ ಮಾಡಲಾರರು. ಹೃದಯದಿಂದಲ್ಲ ಬುದ್ಧಿಯಿಂದ ಆಲೋಚಿಸಿ ಮತದಾನ ಮಾಡಿ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.