ಶ್ರೀರಾಮುಲು ಪರ ನಟ ಯಶ್ ರೋಡ್ ಷೋ

4

ಶ್ರೀರಾಮುಲು ಪರ ನಟ ಯಶ್ ರೋಡ್ ಷೋ

Published:
Updated:

ನಾಯಕನಹಟ್ಟಿ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಪರ ನಟ ಯಶ್ ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ರೋಡ್ ಷೋ ನಡೆಸಿ ಮತಯಾಚಿಸಿದರು.

ನೆಚ್ಚಿನ ನಟನನ್ನು ನೋಡಲು ಅಪಾರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್ ಷೋ ನಡೆಸಿದರು.

ಇದಕ್ಕೂ ಮುನ್ನ ಗುರು ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ‘ನಾನು ಯಾವ ಪಕ್ಷದ ಪರವಾಗಿಯೂ ಬಂದಿಲ್ಲ. ನನ್ನ ಯೋಚನೆ ಹಾಗೂ ಯೋಜನೆಗಳನ್ನು ಬೆಂಬಲಿಸುವ ವ್ಯಕ್ತಿಗಳ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರಾಜ್ಯ ರಾಜಕಾರಣದಲ್ಲಿ ನನಗೆ ಆಪ್ತರೆನಿಸಿದ 10ರಿಂದ 15 ಜನರ ಪರವಾಗಿ ಪ್ರಚಾರ ಕೈಗೊಳ್ಳಲಾಗುವುದು. ಅದರಲ್ಲಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಶ್ರೀರಾಮುಲು ಸೇರಿ ಬೆಂಗಳೂರಿನ ಕೆಲ ಸ್ನೇಹಿತರ ಪರವಾಗಿ ಪ್ರಚಾರ ನಡೆಸುತ್ತೇನೆ’ ಎಂದರು.

‘ಆರು ತಿಂಗಳಿನಿಂದ ಶ್ರೀರಾಮುಲು ಅವರೊಂದಿಗೆ ಸ್ನೇಹ ಬೆಳೆಸಿದ್ದೇನೆ. ಅವರು ನುಡಿದಂತೆ ನಡೆಯುವ ವ್ಯಕ್ತಿ. ಮೇಲಾಗಿ ನನ್ನ ‘ಯಶೋಮಾರ್ಗ’ದ ಆಶಯಗಳಿಗೆ ನೈತಿಕ ಬೆಂಬಲ ಸೂಚಿಸುತ್ತಾರೆ. ನನ್ನ ಉದ್ದೇಶ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ರೈತರು ನೆಮ್ಮದಿಯಾಗಿರಬೇಕು. ಅದಕ್ಕೆ ನಾನು ಪ್ರಚಾರ ಮಾಡುವ ಪ್ರತಿಯೊಬ್ಬ ರಾಜಕಾರಣಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆಂಬ ನಂಬಿಕೆ ಇದೆ’ ಎಂದು ತಿಳಿಸಿದರು.

‘ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಈ ಯೋಜನೆಯಿಂದ ಬಯಲು ಸೀಮೆಯ ರೈತರಿಗೆ ಅನುಕೂಲವಾಗುವುದಾದರೆ ಈ ಯೋಜನೆಗೆ ನನ್ನ ಬೆಂಬಲ ಖಂಡಿತ ಇದೆ’ ಎಂದರು.

‘ಚಿತ್ರದುರ್ಗ ನಾನು ಎಂದೂ ಮರೆಯದ ಸ್ಥಳವಾಗಿದೆ. ಕಾರಣ ‘ರಾಮಾಚಾರಿ’ ಚಿತ್ರ ನನಗೆ ಬಹುದೊಡ್ಡ ಟ್ರೆಂಡ್‌ ಕ್ರಿಯೇಟ್ ಮಾಡಿಕೊಟ್ಟ ಹಾಗೂ ದೊಡ್ಡ ಹೆಸರು ತಂದುಕೊಟ್ಟ ಚಿತ್ರ. ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಮೊಳಕಾಲ್ಮುರು ಬರದಿಂದ ತತ್ತರಿಸಿ ಹೋಗಿದೆ. ಈ ಭಾಗದಲ್ಲಿ ನನಗೆ ಬೆಂಬಲ ಮಾಡೋ ವ್ಯಕ್ತಿಗಳನ್ನು ಗುರ್ತಿಸುವ ಕಾರ್ಯ ಮಾಡುತ್ತಿದ್ದೇನೆ. ಆ ಮೂಲಕ ನನ್ನ ಯಶೋಮಾರ್ಗ ಕಾರ್ಯಕ್ರಮವನ್ನು ವಿಸ್ತರಿಸುವ ಚಿಂತನೆ ಇದೆ’ ಎಂದು ಹೇಳಿದರು.

‘ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾನೇ‌ ನಿಂತು ಕಾರ್ಯನಿರ್ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ರೋಡ್ ಷೋನಲ್ಲಿ ಶ್ರೀರಾಮುಲು ಸಹೋದರಿ ಶಾಂತಾ, ತಾಲ್ಲೂಕು ಮಂಡಲ ಅಧ್ಯಕ್ಷ ಎಂ.ವೈ.ಟಿ ಸ್ವಾಮಿ, ಮುಖಂಡ ದಿವಾಕರ್ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry