ಹೆಚ್ಚು ಮತ, ಹೆಚ್ಚು ಅಂತರ ಎರಡರಲ್ಲೂ ಮುಂದು

7
ಕಳೆದ ಚುನಾವಣೆಯ ಮತ ಗಳಿಕೆ,ದಾಖಲೆ ಮಾಡಿದ್ದ ಎಸ್‌.ಎಸ್.ಎಂ

ಹೆಚ್ಚು ಮತ, ಹೆಚ್ಚು ಅಂತರ ಎರಡರಲ್ಲೂ ಮುಂದು

Published:
Updated:

ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆ (2013)ಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂತರದ ಮತ ಹಾಗೂ ಅತಿ ಹೆಚ್ಚು ಮತ ಪಡೆದ ಎರಡೂ ದಾಖಲೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೆಸರಿನಲ್ಲಿವೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ 88,101 ಮತ ಪಡೆದಿದ್ದರು. ಇದು ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ದಾಖಲೆಯಾಗಿತ್ತು. ಮಲ್ಲಿಕಾರ್ಜುನ, ಬಿಜೆಪಿಯ ಹಿರಿಯ ಮುಖಂಡ ಎಸ್‌.ಎ. ರವೀಂದ್ರನಾಥ್ ಅವರನ್ನು 57,280 ಮತಗಳ ಅಂತರದಿಂದ ಸೋಲಿಸಿದ್ದರು. ಒಟ್ಟು 18 ಜನರ ಸ್ಪರ್ಧಾ ಕಣದಲ್ಲಿ ಮಲ್ಲಿಕಾರ್ಜುನ ಅವರೊಬ್ಬರೇ ಶೇ 65.53 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದರು.

ಎರಡನೇ ಅತಿ ಹೆಚ್ಚು ಅಂತರದ ಗೆಲುವು ದಾಖಲಿಸಿದ್ದು ಶಾಸಕ ಶಾಮನೂರು ಶಿವಶಂಕರಪ್ಪ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಶಾಮನೂರು, ಜೆಡಿಎಸ್‌ನ ಕರೆಕಟ್ಟೆ ಸೈಯದ್‌ ಸೈಫುಲ್ಲಾ ಅವರನ್ನು 40,158 ಮತಗಳ ಅಂತರದಿಂದ ಸೋಲಿಸಿದ್ದರು. 15 ಜನರ ಕಣದಲ್ಲಿ ಹಿರಿಯ ವಯಸ್ಸಿನ ಶಾಮನೂರು (ಆಗ 81) ಶೇ 55.08 ಮತ ಪಡೆದಿದ್ದರು.

ಅತಿ ಹೆಚ್ಚು ಅಂತರದ ಮತ ಪಡೆದ ಮೂರನೇ ಸ್ಥಾನ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಜಗಳೂರು ಶಾಸಕ ಎಚ್.ಪಿ. ರಾಜೇಶ್‌ ಅವರದ್ದು. ಪ್ರತಿಸ್ಪರ್ಧಿ ಕೆಜೆಪಿಯ ಎಸ್.ವಿ. ರಾಮಚಂದ್ರ ಅವರಿಗಿಂತ 36,890 ಮತ ಪಡೆದು ಜಯಭೇರಿ ಬಾರಿಸಿದ್ದರು. ರಾಜೇಶ್ ಪಡೆದ ಮತ 77,805. ಕಣದಲ್ಲಿ 15 ಅಭ್ಯರ್ಥಿಗಳಿದ್ದರು. ಶೇ 58.88 ಮತ ಪಡೆದ ಇವರಿಗೆ ಶೇಕಡಾವಾರು ಮತ ಗಳಿಕೆಯಲ್ಲೂ ಎರಡನೇ ಸ್ಥಾನ.

ಹರಿಹರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಸ್. ಶಿವಶಂಕರ್ ಎದುರಾಳಿ ಎಸ್‌. ರಾಮಪ್ಪ ಅವರನ್ನು 19,053 ಮತಗಳ ಅಂತರದಿಂದ, ಹೊನ್ನಾಳಿಯ ಶಾಂತನಗೌಡ, ಪ್ರತಿಸ್ಪರ್ಧಿ ಎಂ.ಪಿ. ರೇಣುಕಾಚಾರ್ಯ ಅವರನ್ನು 18,738 ಮತಗಳ ಅಂತರದಿಂದ, ಹರಪನಹಳ್ಳಿಯ ಎಂ.ಪಿ. ರವೀಂದ್ರ, ಪ್ರತಿಸ್ಪರ್ಧಿ ಜಿ. ಕರುಣಕಾರ ರೆಡ್ಡಿ ಅವರನ್ನು 8,406 ಮತಗಳ ಅಂತರದಿಂದ ಸೋಲಿಸಿದ್ದರು.

ಎರಡನೇ ಅತಿ ಹೆಚ್ಚು ಮತ ಪಡೆದಿದ್ದು ಶಾಂತನಗೌಡ: ಜಿಲ್ಲೆಯಲ್ಲಿ ಎರಡನೇ ಅತಿ ಹೆಚ್ಚು ಮತ ಪಡೆದಿದ್ದು ಹೊನ್ನಾಳಿಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಿ.ಜಿ. ಶಾಂತನಗೌಡ. 78,789 ಮತ ಪಡೆದ ಅವರು, ಕೆಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಅವರನ್ನು ಸೋಲಿಸಿದ್ದರು.ಶಾಂತನಗೌಡ ಪಡೆದ ಶೇಕಡಾವಾರು ಮತ 52.84. ಶೇಕಡಾವಾರು ಮತ ಗಳಿಕೆಯಲ್ಲಿ ಇವರಿಗೆ ನಾಲ್ಕನೇ ಸ್ಥಾನ.

ಮೂರನೇ ಸ್ಥಾನ ಶಾಮನೂರು ಶಿವಶಂಕರಪ್ಪ ಅವರದ್ದು. ಪಡೆದ ಮತ 66,320. ಎದುರಾಳಿ ಜೆಡಿಎಸ್‌ನ ಕರೆಕಟ್ಟೆ ಸೈಯದ್‌ ಸೈಫುಲ್ಲಾ ಅವರಿಗೆ 21,282 ಮತಗಳು ಬಂದಿದ್ದವು. ಜೆಡಿಎಸ್‌ನ ಶಿವಶಂಕರ್‌ 59,666 ಮತ. ಕಾಂಗ್ರೆಸ್‌ನ ಎಂ.ಪಿ. ರವೀಂದ್ರ 56,954 ಮತ ಪಡೆದು ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಲಿಂಗಣ್ಣಗೆ ಕಡಿಮೆ ಅಂತರದ ಸೋಲು

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಮಾಯಕೊಂಡದ ಕೆಜೆಪಿ ಅಭ್ಯರ್ಥಿಯಾಗಿದ್ದ ಎನ್‌. ಲಿಂಗಣ್ಣ ಕೇವಲ 694 ಮತಗಳ ಅಂತರರಿಂದ ಜಯಮಾಲೆಯಿಂದ ವಂಚಿತರಾಗಿದ್ದರು. ಇವರ ಎದುರು ಕಾಂಗ್ರೆಸ್‌ನ ಕೆ. ಶಿವಮೂರ್ತಿ 32,435 ಮತ ಪಡೆದು ಪ್ರಯಾಸದ ಗೆಲುವು ಕಂಡಿದ್ದರು. ಲಿಂಗಣ್ಣ ಶೇ 23.51 ಮತ ಪಡೆದಿದ್ದರೆ, ಕೆ. ಶಿವಮೂರ್ತಿ ಶೇ 24.02 ಮತ ಪಡೆದಿದ್ದರು.

ಈ ಕ್ಷೇತ್ರದಿಂದ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದು ಆ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ ಕಣವಾಗಿತ್ತು. ಈ ಚುನಾವಣೆಯಲ್ಲಿ ಲಿಂಗಣ್ಣ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ. ಬಸವರಾಜ್‌ ನಾಯ್ಕ ಈಗ ಜೆಡಿಎಸ್‌ ಅಭ್ಯರ್ಥಿ. ಈಗಲೂ ‍ಪಕ್ಷೇತರ ಅಭ್ಯರ್ಥಿಯಾಗಿರುವ ಎಚ್‌. ಆನಂದಪ್ಪ ಕಳೆದ ಚುನಾವಣೆಯಲ್ಲೂ ಪಕ್ಷೇತರ ಅಭ್ಯರ್ಥಿ. ಹಿಂದಿನ ಚುನಾವಣೆಯಲ್ಲಿ ಎಂ. ಬಸವರಾಜ್‌ ನಾಯ್ಕ 17,658, ಎಚ್‌. ಆನಂದಪ್ಪ 18,355 ಮತ ಪಡೆದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry