‘ವಿಕಾಸ ಪರ್ವಕ್ಕೆ ಬಿಜೆಪಿಗೆ ಅವಕಾಶ ಕೊಡಿ’

7
ನರಗುಂದ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ; ಸಭೆಯಲ್ಲಿ ಮಹಿಳೆಯರೇ ಹೆಚ್ಚು

‘ವಿಕಾಸ ಪರ್ವಕ್ಕೆ ಬಿಜೆಪಿಗೆ ಅವಕಾಶ ಕೊಡಿ’

Published:
Updated:

ನರಗುಂದ: 60 ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್‌ನಿಂದ ದೇಶದ ಅಭಿವೃದ್ಧಿ ಅಸಾಧ್ಯ. ಉನ್ನತ ಹುದ್ದೆಗಳಲ್ಲಿದ್ದ ಮಹಿಳಾ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಮಹಿಳೆಯರನ್ನೂ ಅಪಮಾನ ಮಾಡಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ ಐದು ವರ್ಷದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡದ ಹಾಗೂ ಹೀನಾಯವಾಗಿ ಕಂಡ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಪಟ್ಟಣದ ಗಾಂಧಿ ಚೌಕ್‌ನಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಐಪಿಎಸ್‌ ಅಧಿಕಾರಿ ಅನುಪಮಾ ಶೆಣೈ, ಐಎಎಸ್‌ ಅಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್‌, ರೋಹಿಣಿ ಸೇರಿದಂತೆ ಹಲವಾರು ಅಧಿಕಾರಿಗಳು ಕಾಂಗ್ರೆಸ್‌ ಸರ್ಕಾರದಿಂದ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ಇದಕ್ಕೆ ತಕ್ಕ ಶಿಕ್ಷೆಯಾಗಬೇಕಿದೆ ಎಂದರು.

ನರೇಂದ್ರ ಮೋದಿಯವರ ಉಜ್ವಲ ಯೋಜನೆಯಿಂದ ಪ್ರತಿ ಮನೆ ಹೆಣ್ಣು ಮಗಳ ಜೀವನ ಹೊಗೆಯಿಂದ ಮುಕ್ತವಾಗಿದೆ. ಮೋದಿಯವರ ಒಂದು ಕರೆಯಿಂದ ಒಂದು ಕೋಟಿ ಜನರು ತಮ್ಮ ಗ್ಯಾಸ್‌ ಸಬ್ಸಿಡಿ ಮರಳಿಸಿದರು. ಇದರಿಂದ ದೇಶದಲ್ಲಿ 8 ಕೋಟಿ ಕುಟುಂಬಗಳು ಲಾಭ ಪಡೆಯುವಂತಾಗಿದೆ. ಇದನ್ನೇ ಸಿದಾರೂಪಯ್ಯ (ಸಿದ್ದರಾಮಯ್ಯ) ಕರೆ ನೀಡಿದ್ದರೆ ಜನರ ಸಬ್ಸಿಡಿ ಬಿಡುತ್ತಿದ್ದರೆ? ಅಥವಾ ಸಿದ್ದರಾಮಯ್ಯ ಜನರಿಗೆ ಇದರ ಲಾಭ ಜನರಿಗೆ ನೀಡುತ್ತಿದ್ದರೆ? ಎಲ್ಲ ಹಣ ಕಾಂಗ್ರೆಸ್‌ ತಿಜೋರಿ ಸೇರುತ್ತಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರಾಣಿ ಚನ್ನಮ್ಮನ ನಾಡಿನಲ್ಲಿರುವ ತಾವು ತಮ್ಮ ಶಕ್ತಿ ಪ್ರದರ್ಶಿಸಬೇಕಿದೆ. ಸಿ.ಸಿ.ಪಾಟೀಲರನ್ನು ಗೆಲ್ಲಿಸಬೇಕಿದೆ ಎಂದರು.

ರಾಹುಲ್‌ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಾಗದ ಹಿಡಿಯದೇ ಮಾತನಾಡು ವುದನ್ನು ಕಲಿತು ಕೊಳ್ಳಬೇಕು. ನಮ್ಮ ಅಭ್ಯರ್ಥಿ ಸಿ.ಸಿ.ಪಾಟೀಲರು ಕಾಗದ ಹಿಡಿಯದೇ ಮೂರು ಭಾಷೆಗಳಲ್ಲಿ ಮಾತನಾಡುತ್ತಾರೆ. ಅಷ್ಟು ಸಾಮರ್ಥ್ಯ ರಾಹುಲ್‌ ಗಾಂಧಿಯವರಿಗೆ ಇಲ್ಲ. ಇವರಿಂದ ದೇಶದ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

60 ವರ್ಷದಿಂದ ರಾಹುಲ್‌ ಗಾಂಧಿಯವರ ಪರಿವಾರದ ಹಿಡಿತದಲ್ಲಿದ್ದ ಅಮೇಥಿ ಕ್ಷೇತ್ರ ಅಭಿವೃದ್ಧಿಯಾಗಿದ್ದು ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಮಾತ್ರ. ಅಲ್ಲಿ ಜಿಲ್ಲಾಧಿಕಾರಿ ಕಚೇರಿ, ಸರಿಯಾದ ಆಸ್ಪತ್ರೆ, ಪಾಸ್‌ಪೋರ್ಟ್‌ ಕಚೇರಿ ಇದ್ದಿಲ್ಲ. ಅವೆಲ್ಲವೂ ಬಿಜೆಪಿಯಿಂದ ಆಗಿದೆ. ಆದ್ದರಿಂದ ನಾಮಧಾರಿಯಾಗಿರುವ ರಾಹುಲ್‌ ಗಾಂಧಿ ಕಾಮ್‌ಧಾರಿಯಾಗಿರುವ ನರೇಂದ್ರ ಮೋದಿಯವರ ಬಗ್ಗೆ ಮಾತನಾಡದೇ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡಲಿ ಎಂದು ಛೇಡಿಸಿದರು.

ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಮಾತನಾಡಿ ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಮಹಿಳೆಯರು ಬೇಸತ್ತಿದ್ದು, ಇದಕ್ಕೆ ಸಾಕ್ಷಿ ಇಲ್ಲಿ ಸೇರಿದ ಸಹಸ್ರಾರು ಮಹಿಳೆಯರು. ಕಾಂಗ್ರೆಸ್‌ನ್ನು ಮಹಿಳೆಯರೇ ಸೋಲಿಸುತ್ತಾರೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್‌ ಮುಕ್ತವಾಗುವುದು ನಿಶ್ವಿತ ಎಂದರು.

ಸಭೆಯಲ್ಲಿ ಶೋಭಾ ಪಾಟೀಲ, ಸುಕನ್ಯಾ ಸಾಲಿ, ಭಾರತಿ ಹೊಂಗಲ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ವಸಂತ ಜೋಗಣ್ಣವರ, ಜಿ.ಬಿ.ಕುಲಕರ್ಣಿ, ಬಿ.ಕೆ.ಗುಜಮಾಗಡಿ,ಜಿ.ಪಿ.ಪಾಟೀಲ, ವಿ.ಎಸ್‌.ಹಿರೇಮಠ, ಎಸ್‌.ಆರ್‌.ಹಿರೇಮಠ, ಚಂದ್ರು ದಂಡಿನ, ಮಂಜು ಮೆಣಸಗಿ ಹಾಗೂ ಬಿಜೆಪಿ ಮಹಿಳಾ ಮುಖಂಡರು ಇದ್ದರು.

**

ಬಡವರನ್ನು ಹಣ ದೋಚಿದ ಕಾಂಗ್ರೆಸ್‌ ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನಿದ್ದರೂ ರಾಜ್ಯದಲ್ಲಿ ವಿಕಾಸ ಪರ್ವಕ್ಕೆ ನಾಂದಿ

ಸ್ಮೃತಿ ಇರಾನಿ, ಕೇಂದ್ರ ಸಚಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry