ಸೋಮವಾರ, ಮಾರ್ಚ್ 1, 2021
23 °C

ಅಡಕೆ ಬೆಳೆಗಾರರ ಪರ ಹೋರಾಡಿ, ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಯಡಿಯೂರಪ್ಪಗೆ ಅಭಿನಂದನೆಗಳು: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಕೆ ಬೆಳೆಗಾರರ ಪರ ಹೋರಾಡಿ, ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಯಡಿಯೂರಪ್ಪಗೆ ಅಭಿನಂದನೆಗಳು: ಮೋದಿ

ಶಿವಮೊಗ್ಗ: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕಾಂಗ್ರೆಸ್‌ ಅಫಿಡವಿಟ್ ಸಲ್ಲಿಸಿತ್ತು. ಇಡೀ ಭಾರತದಲ್ಲಿ ಬೆಳೆಯುವ ಅಡಕೆಯ ಅರ್ಧದಷ್ಟನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಯಡಿಯೂರಪ್ಪ ಅವರು ಅಡಕೆ ಬೆಳೆಗಾರರ ಪರ ಹೋರಾಟ ನಡೆಸಿದ್ದರು. ಆಗ ಕಾಂಗ್ರೆಸ್‌ ಎಚ್ಚತ್ತಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.

ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಅಡಕೆ ಬೆಳೆಗಾರರ ಪರ ಹೋರಾಟಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ತುಂಗಾ ಯೋಜನೆ ಕೈಗೆತ್ತಿಕೊಳ್ಳುವ ಆಶ್ವಾಸನೆ

‘ತುಂಗಾ ಪಾನಂ, ಗಂಗಾ ಸ್ನಾನಂ’ ಎಂಬ ಮಾತಿದೆ. ಕಾಂಗ್ರೆಸ್‌ನವರು ಗಂಗೆಗೆ, ತುಂಗೆಗೂ ಗೌರವ ಕೊಡಲಿಲ್ಲ. ಖನಿಜವನ್ನು ಲೂಟಿ ಮಾಡಿರುವವರ ಬಗ್ಗೆ ಯಾಕೆ ಪ್ರೀತಿ ತೋರಿಸ್ತೀರಿ. ತುಂಗಾ ಯೋಜನೆಯನ್ನು ಯಾಕೆ ಕೈಗೊಳ್ಳಲಿಲ್ಲ ಎಂಬುದನ್ನು ಜನರಿಗೆ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ತುಂಗಾ ಯೋಜನೆಯನ್ನು ಕೈಗೆತ್ತಿಕೊಳ್ಳುವ ಖಚಿತ ಆಶ್ವಾಸನೆ ನೀಡುತ್ತಿದ್ದೇನೆ ಎಂದರು.

ಕಾಂಗ್ರೆಸ್‌ನಿಂದ ಬಡವರಿಗೆ ಅಪಮಾನ

ರಾಜಕೀಯದಲ್ಲಿ ಆರೋಪ–ಪ್ರತ್ಯಾರೋಪ, ಮತಬೇಧ ಇರುತ್ತೆ. ಆದರೆ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್‌ ಮಾಡುವ ಆಧಾರರಹಿತ ಆರೋಪಗಳಿಗೆ ಇಲ್ಲಿನ ಜನ ಬುದ್ಧಿ ಕಲಿಸಬೇಕು. ಯಡಿಯೂರಪ್ಪ ಅವರು ಹಳ್ಳಿ ಹಳ್ಳಿಗೆ ಹೋಗಿ ಬಡವರ ಮನೆಯಲ್ಲಿ ತಂಗಿದ್ದಾರೆ. ಬಡವರ ಮನೆಯಲ್ಲಿ ಉಳಿದದ್ದನ್ನು ಕಾಂಗ್ರೆಸ್‌ನವರು ಲೇವಡಿ ಮಾಡಿದ್ದಾರೆ. ಇದು ಬಡವರಿಗೆ ಮಾಡಿದ ಅವಮಾನ ಎಂದು ಮೋದಿ ಟೀಕಿಸಿದರು.

ಪ್ರಧಾನಿಗಳು ಶೌಚಾಲಯದ ಬಗ್ಗೆ ಮಾತನಾಡಿದರೆ ಲೇವಡಿ ಮಾಡುತ್ತಾರೆ. ಹೆಸರಿಗಾಗಿ ಕೆಲಸ ಮಾಡುವುದಲ್ಲ. ನಿಜವಾಗಿ ಕೆಲಸ ಮಾಡಬೇಕು. ಬಯಲು ಶೌಚಕ್ಕೆ ಹೋಗುವ ಹೆಣ್ಣುಮಕ್ಕಳ ಕಷ್ಟ ಅನುಭವಿಸಿದವರಿಗೇ ಗೊತ್ತು. ಹೆಣ್ಣುಮಕ್ಕಳ ಕಷ್ಟ ತೊಲಗಿಸಲು ಕೆಲಸ ಮಾಡುತ್ತೇನೆ. ಅಂತಹ ಕೆಲವನ್ನು ಲೇವಡಿ ಮಾಡಿದರೆ ಮಾಡಿಕೊಳ್ಳಿ. ಕಾಂಗ್ರೆಸ್ ಬಳಿ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲ. ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತೆ ಎಂದು ದೂರಿದರು.

ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕಾಂಗ್ರೆಸ್‌ ಅಫಿಡವಿಟ್ ಸಲ್ಲಿಸಿತ್ತು. ಇಡೀ ಭಾರತದಲ್ಲಿ ಬೆಳೆಯುವ ಅಡಕೆಯ ಅರ್ಧದಷ್ಟನ್ನು ಕರ್ನಾಟಕದಲ್ಲಿ ಬೆಳೆಯುತ್ತಾರೆ. ಯಡಿಯೂರಪ್ಪ ಅವರು ಅಡಕೆ ಬೆಳೆಗಾರರ ಪರ ಹೋರಾಟ ನಡೆಸಿದ್ದರು. ಆಗ ಕಾಂಗ್ರೆಸ್‌ ಎಚ್ಚತ್ತಿತು. ಅಡಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಮೋದಿ ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕಠಿಣ ಶ್ರಮ ವಹಿಸಲಿದ್ದೇವೆ. ಕಾಂಗ್ರೆಸ್‌ ಸರ್ಕಾರ 9ರ ಬದಲು 12 ಸಿಲಿಂಡರ್ ನೀಡುವ ಭರವಸೆ ನೀಡಿತ್ತು. ಆದರೆ, ಸಾಮಾನ್ಯ ಜನರ, ಬಡವರ ಪರ ಕಾಳಜಿ ಇಲ್ಲ. ಅಡುಗೆ ಅನಿಲದ ಸಿಲಿಂಡರ್ ಬೇಕಿದ್ದರೆ ರಾಜಕಾರಣಿಗಳ ಬಳಿ ತೆರಳಿ ಅವರ ಕಾಲು ಹಿಡಿಯುವ ಪರಿಸ್ಥಿತಿ ಇತ್ತು. ಅತ್ಯಂತ ಕಡಿಮೆ ಸಮಯದಲ್ಲಿ 4 ಕೋಟಿ ಮನೆಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದೇವೆ. ಇದರಲ್ಲಿ ಅತಿಹೆಚ್ಚು ಕರ್ನಾಟಕಕ್ಕೇ ನೀಡಿದ್ದೇವೆ. ಶಿವಮೊಗ್ಗದಲ್ಲಿ 17 ಲಕ್ಷ ಬಡವರಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದೇವೆ. ಈ ಯೋಜನೆ ನಮ್ಮದೆಂದು ಕಾಂಗ್ರೆಸ್‌ ಹೇಳಹೊರಟಿದೆ ಎಂದರು.

ಕರ್ನಾಟಕದ ವಿಕಾಸ ಆದಾಗ ಭಾರತದ ವಿಕಾಸ ಆಗುತ್ತೆ. ಶಿವಮೊಗ್ಗದ ವಿಕಾಸ ಆದಾಗ ಕರ್ನಾಟಕದ ವಿಕಾಸ ಆಗಲಿದೆ. ₹30 ಸಾವಿರ ಕೋಟಿ ರೈಲ್ವೆ ಯೋಜನೆ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದೇವೆ. ಶಿವಮೊಗ್ಗ, ರಾಣೆಬೆನ್ನೂರು, ಶಿಕಾರಿಪುರ ರೈಲ್ವೆ ಸಂಪರ್ಕ ಯೋಜನೆ, ಶರಾವತಿ ಹಿನ್ನೀರಿನಲ್ಲಿ ಸೇತುವೆ ಯೋಜನೆ ಹಮ್ಮಿಕೊಂಡಿದ್ದೇವೆ. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಅಭಿವೃದ್ಧಿಗೆ ವೇಗ ನೀಡುತ್ತೇವೆ ಎಂದರು.

‘ಸ್ವಚ್ಛ, ಸುಂದರ, ಸುರಕ್ಷಿತ ಕರ್ನಾಟಕ ನಿರ್ಮಿಸೋಣ. ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದ್ಲಿಸಿ ಬಿಜೆಪಿ ಗೆಲ್ಲಿಸಿ’ ಎಂದು ಮೋದಿ ಕನ್ನಡದಲ್ಲೇ ಭಾಷಣ ಕೊನೆಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.