ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್ ನೇರ ಸ್ಪರ್ಧೆಯ ಅಖಾಡ

ಭಟ್ಕಳ– ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ: ಪ್ರಬಲ ಪೈಪೋಟಿ ನಿರೀಕ್ಷೆ
Last Updated 5 ಮೇ 2018, 12:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ದಕ್ಷಿಣ ಭಾಗದ ಮೊದಲ ಕ್ಷೇತ್ರ ಭಟ್ಕಳ– ಹೊನ್ನಾವರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಜೆಡಿಎಸ್ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ.

ಹಿಂದುತ್ವ, ರಾಷ್ಟ್ರೀಯತೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಜಾರಿಯಾಗಿರುವ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ತಮಗೆ ಮತ ನೀಡುವಂತೆ ಮುಂದಿಡುವ ಕಾರಣಗಳು. ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಅವರ ಪ್ರಚಾರ ವಿಚಾರಗಳು.

ನಾಮಧಾರಿ ಸಮುದಾಯದ ಸುನೀಲ ನಾಯ್ಕ ಅವರಿಗೆ ಇದು ಮೊದಲ ವಿಧಾನಸಭೆ ಚುನಾವಣೆಯ ಸ್ಪರ್ಧೆಯಾದರೆ, ಮೊಗೇರ ಸಮುದಾಯದ ವೈದ್ಯ ಅವರಿಗೆ ಎರಡನೆಯದು.

ವೈದ್ಯ ಅವರು 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇನಾಯತ್ ಉಲ್ಲಾ ಶಾಬಂದ್ರಿ ಅವರ ವಿರುದ್ಧ 9,884 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ಬಗ್ಗೆ ದೃಢ ವಿಶ್ವಾಸ ಹೊಂದಿದ್ದ ಅವರು ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ವಿವಿಧ ಸಹೋದ್ಯೋಗಿಗಳು ಏ.26ರಂದು ಭಟ್ಕಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಮತ ಯಾಚಿಸಿ ನೈತಿಕ ಬಲ ಹೆಚ್ಚಿಸಿದ್ದರು.

ಮತದಾರರ ಮಾತು: ‘ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವೈದ್ಯ ಅವರಿಗೆ ನಾವು ಮತ ನೀಡಿರಲಿಲ್ಲ. ಆದರೆ, ಅವರು ನಮ್ಮ ಜತೆ ಭೇದಭಾವ ಮಾಡಿಲ್ಲ. ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ.

ಈ ಬಾರಿ ಅವರು ಸ್ಪರ್ಧಿಸುತ್ತಿರುವ ಪಕ್ಷವೂ ನಮಗೆ ಮುಖ್ಯವಾಗುತ್ತದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ಸನಾವುಲ್ಲಾ ಗವಾಯಿ.

ಸ್ಥಳೀಯ ಮುಖಂಡ ಈಶ್ವರ ದೊಡ್ಡಮನೆ ಅವರದ್ದು ಇದಕ್ಕೆ ವಿರುದ್ಧವಾದ ಅಭಿಪ್ರಾಯವಿದೆ. ‘ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ₹1,600 ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಹಾಸ್ಯಾಸ್ಪದ’ ಎನ್ನುತ್ತಾರೆ ಅವರು.

‘ಕ್ಷೇತ್ರಕ್ಕೆ ತಂದಿರುವ ಅನುದಾನದಲ್ಲಿ ಕೇಂದ್ರ ಸರ್ಕಾರದ ಪಾಲು ಕೂಡ ಇದೆ. ಕ್ಷೇತ್ರದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿಲ್ಲ, ಆರೋಗ್ಯ ಸೌಲಭ್ಯ ಸಿಕ್ಕಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಸದ್ಬಳಕೆ ಆಗಲಿಲ್ಲ’ ಎನ್ನುವುದು ಅವರ ಆರೋಪ.

ಹೊನ್ನಾವರ ತಾಲ್ಲೂಕಿನ ಗುಂಡಿಬೈಲ್‌ನ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಎನ್.ಭಟ್ಟ ಅಚೆಕೇರಿ, ‘ವೈದ್ಯ ಅವರು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಜನರಿಗೆ ವೈಯಕ್ತಿಕ ಸಹಾಯವನ್ನೂ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ, ಸುನೀಲ ನಾಯ್ಕ ಅವರಿಗೆ ವಿರೋಧಿಗಳೇ ಇಲ್ಲದ ಕಾರಣ ಪ್ರಬಲ ಪ್ರತಿಸ್ಪರ್ಧಿ
ಯಾಗಿದ್ದಾರೆ’ ಎಂದು ಅಭಿಪ್ರಾಯ ಪಡುತ್ತಾರೆ.

ಕ್ಷೇತ್ರದಲ್ಲಿ ಸಮಸ್ಯೆಗಳೇನು?

ಶರಾವತಿ ಅಳಿವೆಯಲ್ಲಿ ಹೂಳು ತುಂಬಿ ಮೀನುಗಾರರ ದೋಣಿಗಳಿಗೆ ಹಾನಿಯಾಗುತ್ತಿದೆ. ವಿವಿಧೆಡೆ ಉಪ್ಪು ನೀರಿನ ಸಮಸ್ಯೆ ಇನ್ನೂ ಕಾಡುತ್ತಿದೆ. ಅರಣ್ಯ ಅತಿಕ್ರಮಣ ಮಾಡಿಕೊಂಡವರು ಹಕ್ಕು ಕೊಡುವಂತೆ ಕೇಳಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಬಹುಪಾಲು ತಿರಸ್ಕೃತವಾಗಿವೆ. ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಕಾಲೇಜು ಇದೆ. ಆದರೆ, ಉದ್ಯೋಗಾವಕಾಶವಿಲ್ಲದೇ ಯುವಕರು ಅರಬ್ ದೇಶಗಳತ್ತ ಪ್ರಯಾಣಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಬೆಟ್ಟಗಳನ್ನು ಕರಗಿಸಲು ಇಬ್ಬರೂ ಅಭ್ಯರ್ಥಿಗಳು ನೀಡುವ ಭರವಸೆಗಳೇನು ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT