ಭಾನುವಾರ, ಮಾರ್ಚ್ 7, 2021
30 °C
ಆಟವಾಡಿ, ತಿಂಡಿ ತಯಾರಿಸಿ ಸಂಭ್ರಮಿಸಿದ ಮಹಿಳೆಯರು

ನಾಪೋಕ್ಲು: ಹಾಕಿ ಉತ್ಸವದ ನಡುವೆ ಪೊಮ್ಮಕ್ಕಡ ನಮ್ಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಹಾಕಿ ಉತ್ಸವದ ನಡುವೆ ಪೊಮ್ಮಕ್ಕಡ ನಮ್ಮೆ

ನಾಪೋಕ್ಲು: ಅಲಂಕಾರ ಪುಷ್ಪಗಳ ಜೋಡಣೆ, ಕಜ್ಜಾಯ, ಚಿರೋಟಿ, ಚಕ್ಕುಲಿ, ಬಾಳೆ ಹಣ್ಣಿನ ಬಜ್ಜಿ ಹಾಗೂ ನಿಂಬೆ ಉಪ್ಪಿನಕಾಯಿ ಮತ್ತಿತರ ತಿನಿಸುಗಳ ತಯಾರಿ ಸ್ಪರ್ಧೆ, ಫ್ಯಾಷನ್‌ ಷೋ, ವಾಲಗ ನೃತ್ಯ..ಹೀಗೆ ಒಂದಲ್ಲ, ಎರಡಲ್ಲ. ಹತ್ತಾರು ವೈವಿಧ್ಯಮಯ ಸ್ಪರ್ಧೆಗಳಲ್ಲಿ ಕೊಡವ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ದಿರಿಸು ಧರಿಸಿ ವೈವಿಧ್ಯತೆ ಮೆರೆದರು. ‘ಕೊಡವ ಮಂಗಲ ಅಂದು ಇಂದು’ ವಿಷಯದ ಕುರಿತು ಚರ್ಚೆ ನಡೆಸಿದರು.

ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೊಮ್ಮಕ್ಕಡ ನಮ್ಮೆಯ ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮಗಳು ಗಮನ ಸೆಳೆದವು. ಗೋಣಿಕೊಪ್ಪದ ಜನನಿ ಪೊಮ್ಮಕ್ಕಡ ಕೂಟ ಹಾಗೂ ಕುಲ್ಲೇಟಿರ ಹಾಕಿ ಉತ್ಸವದ ಆಯೋಜಕರು ಜಂಟಿಯಾಗಿ ಏರ್ಪಡಿಸಿದ್ದ ಪೊಮ್ಮಕ್ಕಡ ನಮ್ಮೆ ಹಾಕಿ ಮೈದಾನದಲ್ಲಿ ಜನಮನ ರಂಜಿಸಿತು.

ಅವಕಾಶ ಬಳಸಿಕೊಂಡು ಸಾಧನೆ ಮಾಡಿ

ಮಹಿಳೆಯರು ಸಮಸ್ಯೆಗಳನ್ನು ಎದುರಿಸಿ ಮುಂದುವರಿಯಬೇಕು. ಸಮಾಜದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಅಂತರರಾಷ್ಟ್ರೀಯ ತೀರ್ಪುಗಾರ್ತಿ ಮುಂಡಂಡ ಅನುಪಮಾ ಮಂದಣ್ಣ ಹೇಳಿದರು.

ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ನಮ್ಮೆಯ ವಿಶೇಷ ಆಕರ್ಷಣೆಯಾಗಿ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೊಮ್ಮಕ್ಕಡ ನಮ್ಮೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ಮಾತನಾಡಿ, ಕೊಡವ ಜನಾಂಗದ ಹಾಕಿ ಉತ್ಸವದ ನಡುವೆ ವಿಶೇಷ ಕಾರ್ಯಕ್ರಮವಾಗಿ ಪೊಮ್ಮಕ್ಕಡ ನಮ್ಮೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೊಡವರ ಆಚಾರ ವಿಚಾರ ಸಂಪ್ರದಾಯ ತಿಂಡಿತಿನಿಸುಗಳು ಮಹಿಳೆಯರಿಂದ ಇಂದಿಗೂ ಉಳಿದುಕೊಂಡಿದೆ ಎಂದರು.

ಗೋಣಿಕೊಪ್ಪದ ಜನನಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಮಾತನಾಡಿ, ಪೊಮ್ಮಕ್ಕಡ ನಮ್ಮೆಯನ್ನು ಮನೆ ಹಬ್ಬದಂತೆ ಮಹಿಳೆಯರು ಆಚರಿಸಬೇಕು. ಇದರಿಂದ ಕುಟುಂಬಗಳಲ್ಲಿ ಒಗ್ಗಟ್ಟು ಸಾಮರಸ್ಯ ಸಾಧ್ಯ. ವೈವಿಧ್ಯಮಯ ತಿಂಡಿ–ತಿನಿಸುಗಳು ಗ್ರಾಮೀಣ ಜನಜೀವನದ ಭಾಗವಾಗಿದ್ದು ಅವುಗಳನ್ನು ಇಂದಿನ ಜನತೆಗೆ ತಿಳಿಯಪಡಿಸುವ ಉದ್ದೇಶದಿಂದ ಪೊಮ್ಮಕ್ಕಡ ನಮ್ಮೆಯನ್ನು ಆಚರಿಸಲಾಗುತ್ತಿದೆ ಎಂದರು.

ಕಾಫಿ ಬೆಳೆಗಾರರಾದ ಮೂವೇರ ಧರಣಿ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಉದ್ಯಮಿ ಅರೆಯಡ ಪವಿನ್‌ ಪೊನ್ನಣ್ಣ, ಕಾಫಿ ಬೆಳೆಗಾರ್ತಿ ಅಪ್ಪುಮಣಿಯಂಡ ಡೇಸಿಸೋಮಣ್ಣ, ಜನನಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಪಾಲೆಯಂಡ ಸುಮಿಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಕುಲ್ಲೇಟಿರ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದವು.

ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಮಂದಣ್ಣ ಕ್ರೀಡಾಪಟು ಕೇಚೇಟ್ಟೀರ ರೇಷ್ಮಾದೇವಯ್ಯ ಹಾಗೂ ಅಸ್ಸಾಂನಲ್ಲಿ ಈಚೆಗೆ ನಡೆದ ಮಹಿಳೆಯರ ಸಬ್‌ ಜ್ಯೂನಿಯರ್ ಹಾಕಿ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹಾಕಿ ಕೂರ್ಗ್‌ ತಂಡದ ಆಟಗಾರ್ತಿಯರನ್ನು ಸನ್ಮಾನಿಸಲಾಯಿತು.

ಬಳಿಕ ಮಹಿಳೆಯರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಮನಿಯಪಂಡ ವಿದ್ಯಾ ರಾಜೇಶ್ ಪ್ರಾರ್ಥನಾ ಗೀತೆ ಹಾಡಿದರು. ಕುಲ್ಲೇಟಿರ ಹೇಮಾ ಅರುಣ್ ಸ್ವಾಗತಿಸಿದರು. ಕುಲ್ಲೇಟಿರ ಯಶೋದಾ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.