ವಿಧಾನಸಭೆಯ ರಸಗಳಿಗೆಗಳು!

7

ವಿಧಾನಸಭೆಯ ರಸಗಳಿಗೆಗಳು!

Published:
Updated:
ವಿಧಾನಸಭೆಯ ರಸಗಳಿಗೆಗಳು!

ಹದಿನಾಲ್ಕನೇ ವಿಧಾನಸಭೆಯ ಅವಧಿ ಮುಗಿಯಲಿದೆ. ಹೊಸ ವಿಧಾನಸಭೆಯ ಅಸ್ತಿತ್ವಕ್ಕಾಗಿ ಚುನಾವಣೆ ಮೇ 12ರಂದು ನಡೆಯುತ್ತದೆ. ವಿಧಾನಸಭೆ ಎಂದರೆ ಕೇವಲ ಧರಣಿ, ಘೋಷಣೆ, ಸಭಾತ್ಯಾಗ, ಆರೋಪ, ಪ್ರತ್ಯಾರೋಪ ಅಷ್ಟೇ ಅಲ್ಲ. ನೀರಾವರಿ, ರಸ್ತೆ, ಅರಣ್ಯ, ಶಾಸನ ರಚನೆ ಬಗ್ಗೆ ಗಂಭೀರ ಚಿಂತನೆಗಳು ಮಾತ್ರ ಅಲ್ಲ. ಚುನಾವಣೆಯ ಅಖಾಡದಲ್ಲಿ ಪರಸ್ಪರ ಬದ್ಧ ವೈರಿಗಳಂತೆ ಸೆಣಸಾಡಿದ ರಾಜಕಾರಣಿಗಳು ವಿಧಾನಸಭೆಯ ಒಳಗೆ ಹಾಸ್ಯ ಚಟಾಕಿ ಹಾರಿಸುತ್ತಾರೆ. ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಾರೆ. ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತಾರೆ.

ಗಂಭೀರ ವಿಷಯದ ಬಗ್ಗೆ ವ್ಯಂಗ್ಯದ ಧಾಟಿಯಲ್ಲಿಯೂ ಮಾತನಾಡಿ ಮನಗೆಲ್ಲುತ್ತಾರೆ. ಕಾಂಗ್ರೆಸ್‌ನ ರಮೇಶ್ ಕುಮಾರ್, ಕಾಗೋಡು ತಿಮ್ಮಪ್ಪ, ಬಿಜೆಪಿಯ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಜೆ.ಡಿ.ಎಸ್‌.ನ ಕುಮಾರಸ್ವಾಮಿ, ಶಿವಲಿಂಗೇಗೌಡ, ವೈ.ಎಸ್.ವಿ. ದತ್ತ, ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ಹೀಗೆ ಹದಿನಾಲ್ಕನೇ ವಿಧಾನಸಭೆಯಲ್ಲಿ ಹಲವಾರು ಮಂದಿ ನಗೆವೀರರು ಇದ್ದರು. ಅವರು ಹರಿಸಿದ ನಗೆ ಹೊನಲಿನ ಕೆಲವು ಸ್ಯಾಂಪಲ್‌ಗಳನ್ನು ರವೀಂದ್ರ ಭಟ್ಟ ನೆನಪಿಸಿಕೊಂಡಿದ್ದಾರೆ...

ಹರಾಜು ಹಾಕಿ!
ಈಗ ಚುನಾವಣೆಯ ಕಾಲ. ಎಲ್ಲ ಕಡೆಯೂ ಹಣ, ಹೆಂಡ ಹಂಚಿಕೆ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಹೀಗೆ ಹಣ ಹಂಚಿಕೆ ನಡೆಯುವ ಬಗ್ಗೆ 2016ರ ಬಜೆಟ್ ಅಧಿವೇಶನದಲ್ಲಿ ಒಳ್ಳೆಯ ಚರ್ಚೆ ನಡೆದಿತ್ತು.

2016ರ ಮಾರ್ಚ್ 3ರಂದು ವಿಧಾನಸಭೆಯಲ್ಲಿ ಬಜೆಟ್ ಕುರಿತ ಚರ್ಚೆ. ಮಾತು ಚುನಾವಣಾ ಭ್ರಷ್ಟಾಚಾರದ ಬಗ್ಗೆ ಶುರುವಾಗಿತ್ತು. ಆಗ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್ ಕುಮಾರ್ ‘ಎಲ್ಲ ಪಕ್ಷಗಳೂ ಒಟ್ಟಿಗೆ ಸೇರಿ ಒಂದು ಸೊಸೈಟಿ ಮಾಡಿಕೊಳ್ಳಬೇಕು. ಐದು ವರ್ಷಕ್ಕೊಮ್ಮೆ ಪ್ರತಿ ವಿಧಾನಸಭಾ ಕ್ಷೇತ್ರವನ್ನು ಹರಾಜು ಕೂಗಬೇಕು. ಯಾರು ಹೆಚ್ಚು ಸವಾಲು ಕೂಗುತ್ತಾರೋ ಅವರನ್ನು ವಿಜೇತ ಎಂದು ಘೋಷಿಸಬೇಕು’ ಎಂದು ಸಲಹೆ ನೀಡಿದರು.

ಚುನಾವಣೆ ವ್ಯವಸ್ಥೆ ಸುಧಾರಿಸದೆ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರ ಹೋಗದೇ ಒಳ್ಳೆಯ ಸರ್ಕಾರ ನೀಡಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿಯೂ 2–3 ಕೋಟಿ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ ಎಂದು ಅವರು ವ್ಯಥೆ ಪಟ್ಟರು. ತಕ್ಷಣವೇ ಎದ್ದು ನಿಂತ ಕಾಂಗ್ರೆಸ್‌ನ ಇನ್ನೊಬ್ಬ ಸದಸ್ಯ ಶಿವರಾಮ ಹೆಬ್ಬಾರ್ ‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಬೇಕು ಎಂದು ನೀವೇ ಶಿಫಾರಸು ಮಾಡಿದ್ದೀರಿ. ಅಷ್ಟರ ಮೇಲೆಯೇ ರೇಟ್ ಜಾಸ್ತಿ ಆಗಿದೆ’ ಎಂದರು. ‘ಅದಕ್ಕಾಗಿ ನಾನು ಈಗ ಕ್ಷಮೆ ಕೋರುತ್ತೇನೆ’ ಎಂದರು ರಮೇಶ ಕುಮಾರ್. ‘ಈಗಲಾದರೂ ಚುನಾವಣೆ ವ್ಯವಸ್ಥೆ ಸುಧಾರಣೆಗೆ ಗಮನ ನೀಡದಿದ್ದರೆ ಉಳಿಗಾಲವಿಲ್ಲ’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಚರ್ಚೆಗೆ ಮಂಗಳ ಹಾಡಿದರು.

ಸರ್ಕಾರದ ವಿರುದ್ಧವೇ ಘೋಷಣೆ ಕೂಗಿದ ಮುಖ್ಯಮಂತ್ರಿ!
2016ರ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ನಡೆಯುತ್ತಿತ್ತು. ಆಗ ಲಾಠಿ ಪ್ರಹಾರವೂ ಆಗಿತ್ತು. ಇದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಭಾರೀ ಕೋಲಾಹಲ ಉಂಟಾಗಿತ್ತು. ವಿರೋಧ ಪಕ್ಷಗಳ ಆರೋಪಗಳಿಗೆ ಉತ್ತರ ನೀಡಲು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ‘ರೈತರ ಮೇಲೆ ಗೋಲಿಬಾರ್ ಮಾಡಿದ ಬಿ.ಜೆ.ಪಿಗೆ ಧಿಕ್ಕಾರ’ ಎಂದು ಕೂಗಿದರು. ಇದರಿಂದ ಕೆರಳಿದ ಬಿ.ಜೆ.ಪಿ ಸದಸ್ಯರು ಇನ್ನೂ ಜೋರಾಗಿ ಘೋಷಣೆ ಹಾಕಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಗೋಲಿಬಾರ್ ಮಾಡಿದ ಸರ್ಕಾರಕ್ಕೆ ಧಿಕ್ಕಾರ’ ಎಂದರು. ಇದನ್ನು ಕೇಳಿದ್ದೇ ವಿರೋಧ ಪಕ್ಷಗಳ ಸದಸ್ಯರು ಅಪಹಾಸ್ಯ ಮಾಡತೊಡಗಿದರು. ಅದಕ್ಕೆ ಸಿದ್ದರಾಮಯ್ಯ ‘ರೈತರನ್ನು ಕೊಂದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ ಎಂದು ಬೆದರಿಸಿದರು.

ಹರಿಕತೆ ಸಾಕು, ಡಾನ್ಸ್ ಬೇಕು!
ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ಸಂಖ್ಯೆ ಕಡಿಮೆ ಇರುವುದು ಮಾಮೂಲು. 2015ರ ಜುಲೈ 9ರಂದೂ ಹೀಗೆಯೇ ಆಯ್ತು. ವಿಧಾನಸಭೆ ಖಾಲಿ ಇತ್ತು. ಸ್ಪೀಕರ್ ಕಾಗೋಡು ತಿಮ್ಮಪ್ಪ ಭಾರೀ ಬೇಸರ ಮಾಡಿಕೊಂಡಿದ್ದರು. ಆಗ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್ ಕುಮಾರ್ ‘ನಮ್ಮ ಕಡೆ ಹಿರಿಯರು ತೀರಿಕೊಂಡರೆ 10ನೇ ದಿನಕ್ಕೆ ಹರಿಕತೆ ಏರ್ಪಡಿಸುತ್ತಾರೆ. ಹರಿಕತೆ ಕೇಳಲು ಮೊದಲು ಕೆಲವು ಜನ ಇದ್ದರೂ ನಂತರ ಯಾರೂ ಇರುವುದಿಲ್ಲ. ಹರಿಕತೆ ಮುಗಿಯುವ ವೇಳೆಗೆ ಇಬ್ಬರು ಕುಳಿತಿದ್ದರಂತೆ. ಅವರನ್ನು ನೋಡಿ ಹರಿಕತೆ ದಾಸರಿಗೆ ಖುಷಿಯೋ ಖುಷಿ. ‘ಆಗಲಿ ನೀವಿಬ್ಬರಾದರೂ ಇದ್ದೀರಲ್ಲ. ತುಂಬಾ ಸಂತೋಷ’ ಎಂದರಂತೆ. ಅದಕ್ಕೆ ಒಬ್ಬ ‘ನಾನು ಶಾಮಿಯಾನದವ’ ಎಂದನಂತೆ. ಇನ್ನೊಬ್ಬ ‘ನಾನು ಮೈಕಿನವ. ನಿಮ್ಮ ಕಾರ್ಯಕ್ರಮ ಮುಗಿದ ತಕ್ಷಣ ಅದನ್ನು ತೆಗೆದುಕೊಂಡು ಹೋಗಲು ಕಾಯುತ್ತಿದ್ದೇನೆ’ ಎಂದಾಗ ವಿಧಾನಸಭೆಯಲ್ಲಿ ಕಡಿಮೆ ಶಾಸಕರಿದ್ದರೂ ನಗೆಯ ಬುಗ್ಗೆ ಚಿಮ್ಮಿತು. ಅದಕ್ಕೆ ಇನ್ನಷ್ಟು ಒಗ್ಗರಣೆಯನ್ನು ಸೇರಿಸಿದ ರಮೇಶ್ ಕುಮಾರ್ ‘ಸಭಾಧ್ಯಕ್ಷರೇ ಈಗ ಹರಿಕತೆ ಸಾಕಾಗುವುದಿಲ್ಲ, ಡಾನ್ಸ್ ಬೇಕು’ ಎಂದು ನಗೆಯನ್ನು ಇನ್ನಷ್ಟು ಹೆಚ್ಚಿಸಿದರು.

ಬೆಂಗಳೂರು ನಮ್ಮದಲ್ಲ!
2015 ಜುಲೈ 2ರಂದು ಜೆಡಿಎಸ್‌ನ ಶಿವಲಿಂಗೇ ಗೌಡ ಉದ್ಯೋಗ ಖಾತ್ರಿ ಭ್ರಷ್ಟಾಚಾದ ಬಗ್ಗೆ ಮಾತನಾಡುತ್ತಿದ್ದರು. ‘ಉತ್ತರ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚು’ ಎಂದರು. ಇದಕ್ಕೆ ಕಾಂಗ್ರೆಸ್‌ನ ಎ.ಎಸ್. ಪಾಟೀಲ್ ನಡಹಳ್ಳಿ ಅವರು ‘ನಿಮ್ಮ ಬೆಂಗಳೂರು ಕಡೆ ಈ ರೀತಿ ಇಲ್ಲವಾ?’ ಎಂದು ಕೇಳಿದರು.

ಶಿವಲಿಂಗೇ ಗೌಡ: ಅದು ನಿಮ್ಮ ಬೆಂಗಳೂರು ಅಲ್ಲವಾ?
ನಡಹಳ್ಳಿ: ಅದು ನಮ್ಮ ಬೆಂಗಳೂರು ಅಲ್ಲ. ಅದು ನಮ್ಮದಾಗಲು ಸಾಧ್ಯವೂ ಇಲ್ಲ. ನಮ್ಮದು ಉತ್ತರ ಕರ್ನಾಟಕ.

ಶಿವಲಿಂಗೇಗೌಡ: ಹೋಗಲಿ ಬಿಡಿ, ನಾನು ಹೇಳಿದ್ದು ಉತ್ತರ ಕರ್ನಾಟಕ ಅಲ್ಲ. ಉತ್ತರ ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚು ಎಂದು ಚರ್ಚೆಗೆ ಮಂಗಳ ಹಾಡಿದರು.

ಗಾಂಧಿ ಮಾತನಾಡಿಸಲ್ಲ, ಸೇಂದಿ ಮಾತನಾಡಿಸುತ್ತಾರೆ!
ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಮಾತಿಗೆ ನಿಂತರೆ ನಗೆಯ ಹೊನಲು ಹರಿಯುತ್ತಲೇ ಇರುತ್ತಿತ್ತು. ಅವರ ಮಾತಿನ ಶೈಲಿಯೇ ಹಾಗೆ. 2015ರ ಫೆ.11ರಂದು ಪುಟ್ಟಣ್ಣಯ್ಯ ಅವರು ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡುತ್ತಾ ‘ಡಾಕ್ಟ್ರು ಪ್ರತಿಭಟನೆ ಮಾಡಿದರೆ ಕರೆದು ಮಾತನಾಡುತ್ತೀರಿ. ಹೆಂಡದಂಗಡಿ ಬಾಗಿಲು ಹಾಕಿದರೆ ಏನ್ ಸಮಸ್ಯೆ ಅಂತಾ ಕೇಳ್ತೀರಿ. ಗಾಂಧಿ ಫೋಟೊ ಇಟ್ಕೊಂಡು ಧರಣಿ ಕುಳಿತ ರೈತರು ನಿಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಗಾಂಧಿ ಮಾತನಾಡಿಸುವವರು ಯಾರೂ ಇಲ್ಲ. ಸೇಂದಿ ಮಾತನಾಡಿಸುವವರೇ ಎಲ್ಲ’ ಎಂದಾಗ ಸಭೆಯಲ್ಲಿ ನಗೆಯ ಸಾಗರ.

ರಾಜ್ಯ ಸರ್ಕಾರ ಕಟ್ಟಿ ಕೊಡುವ ಮನೆಗಳನ್ನೂ ಅವರು ಟೀಕಿಸಿದ್ದು ಹೀಗೆ. ‘ನೀವು ಕಟ್ಟಿಕೊಡುವ ಚೋಟುದ್ದದ ಮನೆಯಲ್ಲಿ ಎಡಕ್ಕೆ ಆಡು, ಬಲಕ್ಕೆ ಎಮ್ಮೆ ಕಟ್ಕೊಂಡು ಮಲಗುವ ಗಂಡ ಹೆಂಡತಿ ಪ್ರೀತಿ ಮಾಡೋದು ಹೇಗೆ? ಪ್ರೀತಿ ಮಾತೆತ್ತಿದರೆ ಆ ಕಡೆ ಆಡು, ಈ ಕಡೆ ಎಮ್ಮೆ ಒದರ್ತಾವೆ. ಹೀಗಾದ್ರೆ ಸಂಸಾರದ ಸಂತೋಷ ಎಲ್ಲಿ?’ ಎಂದು ಕೆಣಕಿದರು. ಆಗಲೂ ಎಲ್ಲರೂ ಮನಸಾರೆ ನಕ್ಕರು.

ಯಾರು ಆ ಹೆಣ್ಣು ಮಗಳು?
2014ರಲ್ಲಿ ಮುಖ್ಯಮಂತ್ರಿ ಬಜೆಟ್ ಮಂಡಿಸಿದ ನಂತರ ಬಜೆಟ್ ಕುರಿತಂತೆ ಮಾತನಾಡಿದ ಕಾಂಗ್ರೆಸ್‌ನ ರಮೇಶ್ ಕುಮಾರ್ ‘ಬಜೆಟ್ ಮಂಡಿಸುವವರು ಸೂಟುಬೂಟು ಧರಿಸಿ ಸೂಟ್‌ಕೇಸ್ ಹಿಡಿದುಕೊಂಡು ಸದನಕ್ಕೆ ಬರ್ತಾರೆ. ಅವರ ಪತ್ನಿ ಗ್ಯಾಲರಿಯಲ್ಲಿ ಕುಳಿತು ನೋಡ್ತಾರೆ. ಆದರೆ ಸಿದ್ದರಾಮಯ್ಯ ಅವರು ಸೂಟು ಬೂಟು ಧರಿಸಲಿಲ್ಲ. ಅವರ ಪತ್ನಿಯನ್ನೂ ನೋಡಿಲ್ಲ. ಆದರೂ ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ವೀಕ್ಷಕರ ಗ್ಯಾಲರಿಯಲ್ಲಿ ಮಹಿಳೆಯೊಬ್ಬರು ಕುಳಿತು ನೋಡುತ್ತಿದ್ದರು ಅವರು ಯಾರು? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸ್ಪೀಕರ್ ಕಾಗೋಡು ‘ಸಿದ್ದರಾಮಯ್ಯ ಅಂಥ ಮನುಷ್ಯ ಅಲ್ಲ’ ಎಂದರು.

ರಮೇಶ್ ಕುಮಾರ್: (ಸ್ಪೀಕರ್ ಅವರನ್ನು ಉದ್ದೇಶಿಸಿ) ನೀವೂ ಹಿಂದೆ ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಿರಿ. ಈಗ ಸೂಟ್ ಹಾಕ್ತೀರಿ. ಏನ್ ಕತೆ?

ಕಾಗೋಡು: ಸ್ಥಾನಕ್ಕೆ ತಕ್ಕ ವೇಷ

ರಮೇಶ್ ಕುಮಾರ್: ಜೆ.ಎಚ್. ಪಟೇಲರು ಕೂಡ ಕಚ್ಚೆಪಂಚೆ ಉಟ್ಟುಕೊಳ್ಳುತ್ತಿದ್ದರು. ನಂತರ ಅದನ್ನು ಬಿಟ್ಟು ಪಂಚೆ ತೊಡಲು ಆರಂಭಿಸಿದರು. ಆಗ ಯಾರೂ ಒಬ್ಬರು ‘ಏನ್ ಪಟೇಲ್ರೇ, ಕಚ್ಚೆ ಬಿಟ್ಟು ಪಂಚೆ ಹಾಕಿಕೊಳ್ತೀರಿ ಎಂದು ಕೇಳಿದರಂತೆ. ಅದಕ್ಕೆ ಪಟೇಲರು ‘ಊರಿನಲ್ಲಿ ಕಚ್ಚೆ ಹರುಕರು ಜಾಸ್ತಿ ಆಗಿದ್ದಾರೆ ಅದಕ್ಕೆ ಪಂಚೆ ಹಾಕಿಕೊಳ್ಳುತ್ತೇನೆ’ ಎಂದು ಉತ್ತರಿಸಿದರಂತೆ. ರಮೇಶಕುಮಾರ್ ಅವರು ಹೀಗೆ ಹೇಳಿದ್ದೇ ವಿಧಾನಸಭೆಯಲ್ಲಿ ನಗೆಯ ಮಿಂಚು.

ಭಾಗ್ಯಜ್ಯೋತಿ ಬಂದಿದ್ದು ಹೇಗೆ?
ರಾಜ್ಯದಲ್ಲಿ ಭಾಗ್ಯಜ್ಯೋತಿ ಯೋಜನೆ ಜಾರಿಗೆ ಬಂದ ಬಗೆಯನ್ನು ಕಾಂಗ್ರೆಸ್‌ನ ರಮೇಶ್ ಕುಮಾರ್ 2014ರ ಜುಲೈ 16ರಂದು ವಿಧಾನಸಭೆಯಲ್ಲಿ ಬಹಿರಂಗಗೊಳಿಸಿದರು.

‘ಒಮ್ಮೆ ನಾನು (ರಮೇಶಕುಮಾರ್) ಮತ್ತು ದೇವರಾಜ ಅರಸು ಅವರು ಕೋಲಾರದಲ್ಲಿ ಸಾಗುತ್ತಿದ್ದಾಗ ತಳಸಮುದಾಯದ ಹೆಣ್ಣು ಮಗಳೊಬ್ಬಳು ತಲೆಯ ಮೇಲೆ ಹೊತ್ತ ಕಟ್ಟಿಗೆ ಹೊರೆಯನ್ನು ರಸ್ತೆಯಲ್ಲಿ ಬಿಸಾಡಿ ಓಡಿಹೋದಳು. ಇದನ್ನು ಕಂಡ ಅರಸು ಅಧಿಕಾರಿಗಳ ಮೂಲಕ ಆಕೆಯನ್ನು ಕರೆಸಿ ‘ಯಾಕೆ ಹಾಗೆ ಓಡಿ ಹೋದೆ’ ಎಂದು ಕೇಳಿದರು. ‘ನಾನು ದಿನಾಲು ಬೆಳಿಗ್ಗೆಯಿಂದ ಸಂಜೆಯವರೆಗೆ ಕಟ್ಟಿಗೆ ಆಯ್ದು ಸಂಜೆ ಅದನ್ನು ಮಾರಾಟ ಮಾಡಿ ಮನೆಗೆ ಹೋಗುತ್ತೇನೆ. ಮನೆಯಲ್ಲಿ ಕತ್ತಲೆಯಲ್ಲಿಯೇ ಅಡುಗೆ ಮಾಡುತ್ತೇನೆ’ ಎಂದಳು. ಇದನ್ನು ಕೇಳಿದ ಅರಸು ಅಂದೇ ಭಾಗ್ಯಜ್ಯೋತಿ ಯೋಜನೆ ಜಾರಿಗೊಳಿಸಲು ನಿರ್ಧರಿಸಿದರು.

ನಕ್ಸಲರಿಗೆ ಕಾಗೋಡು ಕೃತಜ್ಞತೆ!
2014ರ ಫೆ.20ರಂದು ಅರಣ್ಯ ಇಲಾಖೆಯ ಬಗ್ಗೆ ಸಿಟ್ಟು ಪ್ರಕಟಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಗುಂಬೆ ಹೋಬಳಿ ಮಲ್ಲಂದೂರಿನಲ್ಲಿ 75 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕು ಪತ್ರ ವಿತರಣೆ ಆಗಿದ್ದಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ರಸ್ತೆ ದೊರಕಿದ್ದಕ್ಕೆ ನಕ್ಸಲರಿಗೆ ಕೃತಜ್ಞತೆ ಸಲ್ಲಿಸಿದರು. ನಕ್ಸಲರ ಭಯ ಇಲ್ಲದಿದ್ದರೆ ಈ ಕೆಲಸ ಆಗುತ್ತಿರಲಿಲ್ಲ ಎಂದು ಹೇಳಿದರು. ಕಾಗೋಡು ಸ್ಪೀಕರ್ ಆಗಿದ್ದಷ್ಟೂ ದಿನ ಅರಣ್ಯ ಮತ್ತು ಕಂದಾಯ ಇಲಾಖೆಯ ಬಗ್ಗೆ ಚಾಟಿ ಬೀಸುತ್ತಲೇ ಇದ್ದರು. ಅದರ ಸ್ಯಾಂಪಲ್ ಇಲ್ಲಿದೆ.

ಅರಣ್ಯ ಒತ್ತುವರಿ ತೆರವಿಗೆ ಯಾರು ಬರ್ತಾರೆ ನೋಡೇ ಬಿಡೋಣ ಬನ್ರಿ. ನಾನೂ ನಿಮ್ಮ ಜೊತೆ ಇದ್ದೇನೆ (23–6–2014)

ಅರಣ್ಯ ಇಲಾಖೆ, ಕಂದಾಯ ಇಲಾಖೆ ವೈಖರಿ ನೋಡಿದರೆ ಬೇಸರ ಅಲ್ಲ, ಸಿಟ್ಟು ಬರಬೇಕರಿ, ಸಿಟ್ಟು. ನಾನು ಇಲ್ಲಿ (ಸ್ಪೀಕರ್ ಕುರ್ಚಿ) ಕುಳಿತಿದ್ದೇನೆ. ಅಲ್ಲಿ (ಸಚಿವರ ಕುರ್ಚಿ) ಕುಳಿತಿದ್ದರೆ ಆ ಕತೆನೇ ಬೇರೆ (9–7–2014)

ಅರಣ್ಯ ಇಲಾಖೆ ಎಲ್ಲದಕ್ಕೂ ಕೋರ್ಟ್ ಹೇಳಿದೆ ಎನ್ನುತ್ತದೆ. ಕೋರ್ಟ್ ಹೇಳಿದೆ ಎಂದು ಪಂಚೆ ಎತ್ತಿಕೊಂಡು ಓಡಾಡಬೇಕೇ (8–7–2014)

ರಾಜಕಾರಣಿಗಳು ನೆಟ್ಟ ಸಸಿಗಳು ಸತ್ತು ಹೋಗಿವೆ. ಸಸಿ ನೆಟ್ಟವರು ಇನ್ನೂ ಬದುಕಿದ್ದಾರೆ (8–7–2014)

ನನಗೆ ಯಾರು ಹೆಣ್ಣು ಕೊಡ್ತಾರೆ?
2016ರ ಮಾರ್ಚ್ ವೇಳೆಗೆ ರಮೇಶ್ ಕುಮಾರ್ ಇನ್ನೂ ಸಚಿವರಾಗಿರಲಿಲ್ಲ. ಮಾರ್ಚ್ 3ರಂದು ವಿಧಾನಸಭೆಯಲ್ಲಿ ಬಜೆಟ್ ಕುರಿತು ಚರ್ಚೆ. ಆಗ ಕೆಲವರು ರಮೇಶ್ ಕುಮಾರ್ ಇನ್ನೂ ಸಚಿವರಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆಗ ಎದ್ದು ನಿಂತ ಅವರು ‘80 ವರ್ಷದ ಮುದುಕನಿಗೆ ಮದುವೆ ಆಗ್ತೀಯಾ? ಎಂದು ಕೇಳಿದರೆ ಆತ ಒಲ್ಲೆ ಎನ್ನಲ್ಲ. ಆದರೆ ನನಗೆ ಈಗ ಯಾರು ಹೆಣ್ಣು ಕೊಡ್ತಾರೆ ಎನ್ನುತ್ತಾನೆ. ಅದೇ ತರಹ ನನ್ನ ರಾಜಕೀಯ ಆಕಾಂಕ್ಷೆಯ ಬಗ್ಗೆ ನಾನು ಹೇಳಿಕೊಳ್ಳುವಂತಾಗಿದೆ ಎಂದ ಅವರು ‘ನಾನು 80 ವರ್ಷದ ಮುದುಕ ಎಂದು ಹೇಳಿದ್ದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಲ್ಲ’ ಎಂದು ಸ್ಪಷ್ಟಪಡಿಸಿದಾಗ ನಗೆ ಸ್ಫೋಟಿಸಿತು.

ಇದೇ ಸಂದರ್ಭದಲ್ಲಿ ಅವರು ಘಟನೆಯೊಂದನ್ನು ನೆನಪಿಸಿಕೊಂಡರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಂಜಿನಿಯರ್ ಒಬ್ಬರನ್ನು ಕಿತ್ತು ಹಾಕುವ ಪ್ರಸ್ತಾವ ಸಚಿವ ಸಂಪುಟದ ಮುಂದೆ ಬಂತು. ಆಗ ಸಚಿವರಾಗಿದ್ದ ಜೆ.ಎಚ್.ಪಟೇಲ್ ಅವರು ‘ಈ ಎಂಜಿನಿಯರ್ ಜಾತಿ ಯಾವುದು?’ ಎಂದು ಕೇಳಿದರು. ಮಡಿವಾಳ ಎಂಬ ಉತ್ತರ ಬಂತು. ಆಗ ಪಟೇಲರು ‘ಅದಕ್ಕೇ ಈ ಪ್ರಸ್ತಾವ ಇಲ್ಲಿವರೆಗೂ ಬಂದಿದೆ. ಆ ಎಂಜಿನಿಯರ್ ಬ್ರಾಹ್ಮಣ ಆಗಿದ್ದರೆ ಹೆಗಡೆ, ಒಕ್ಕಲಿಗ ಆಗಿದ್ದರೆ ದೇವೇಗೌಡ, ಲಿಂಗಾಯತ ಆಗಿದ್ದರೆ ಪಟೇಲ್ ರಕ್ಷಣೆಗೆ ಬರುತ್ತಿದ್ದರು. ಪಾಪ ಈ ಯಾವ ಜಾತಿಗೂ ಸೇರದ ವ್ಯಕ್ತಿಯನ್ನು ಕಾಪಾಡುವವರು ಯಾರು? ಎಂದು ಮರುಗಿದ್ದರು ಎಂದು ಹೇಳಿ ಈಗಿನ ಸ್ಥಿತಿಯನ್ನು ಬಿಚ್ಚಿಟ್ಟರು.

ಮನೆ ಮುಕ್ತ ರಾಜ್ಯ!
ವಸತಿ ಸಚಿವರಾಗಿದ್ದ ಅಂಬರೀಷ್ ಅವರು 2014 ಜುಲೈ 24ರಂದು ವಿಧಾನಸಭೆಯಲ್ಲಿ ‘ಕರ್ನಾಟಕವನ್ನು ಮನೆ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು’ ಎಂದು ಘೋಷಿಸಿದರು. ತಕ್ಷಣವೇ ಬಹಳಷ್ಟು ಸದಸ್ಯರು ಗೊಳ್ಳೆಂದು ನಕ್ಕರು. ತಕ್ಷಣ ತಪ್ಪಿನ ಅರಿವಾಗಿ ವಸತಿ ಸಚಿವರು ಗುಡಿಸಲು ಮುಕ್ತ ರಾಜ್ಯ ಮಾಡುವುದಾಗಿ ಹೇಳಿದರು.

ನೀವೂ ಎನ್‌ಕೌಂಟರ್‌ನಲ್ಲಿ ಸಾಯಬಹುದು!
ರಾಮಕೃಷ್ಣ ಹೆಗಡೆ ಕಾಲದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ವಿಪರೀತವಾಗಿತ್ತು. ಆಗ ಗೃಹಸಚಿವರಾಗಿದ್ದ ರಾಚಯ್ಯ ಅವರು ಕೈಗೊಂಡ ಕ್ರಮಗಳಿಂದ ಎನ್‌ಕೌಂಟರ್‌ನಲ್ಲಿ 4– 5 ರೌಡಿಗಳು ಬೀದಿ ಹೆಣವಾಗಿದ್ದರು. ರೌಡಿಗಳ ಪರವಾಗಿದ್ದ ಸಚಿವರೊಬ್ಬರು ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಆಗ ರಾಚಯ್ಯ ‘ನೀವೂ ಎನ್‌ಕೌಂಟರ್‌ಗೆ ಬಲಿಯಾಗಬಹುದು ಹುಷಾರ್’ ಎಂದರು. ಅಲ್ಲಿಗೆ ಎಲ್ಲವೂ ಗಪ್ ಚುಪ್.

ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ರಮೇಶ್‌ ಕುಮಾರ್ ನೆನಪಿಸಿಕೊಂಡ ಪ್ರಸಂಗ ಇದು. ಜೊತೆಗೇ ಅವರು ‘ರಾಜಕಾರಣಿಗಳಿಗೆ ಹೃದಯ ಇರಬೇಕು. ಅಧಿಕಾರಿಗಳಿಗೆ ತಲೆ ಇರಬೇಕು. ಎರಡರ ಮಧ್ಯೆ ಸಮನ್ವಯ ಇದ್ದರೆ ಜನಪರ ಆಡಳಿತ ಸಾಧ್ಯ’ ಎಂದು ಹೇಳಿದ್ದರು.

ಮಲ ಹೊರಲು ನೀವು ಹೋಗಿ!
ಬಸವಲಿಂಗಪ್ಪ ಅವರು ಸಚಿವರಾಗಿದ್ದಾಗ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಮಾಡುವ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ಹಿರಿಯ ಐ.ಎ.ಎಸ್ ಅಧಿಕಾರಿಯೊಬ್ಬರು ವಿರೋಧ ವ್ಯಕ್ತಪಡಿಸಿದರು. ಆಗ ಬಸವಲಿಂಗಪ್ಪ ‘ಆಯ್ತು ಈ ಪ್ರಸ್ತಾವ ವಾಪಸು ಪಡೆಯುತ್ತೇನೆ. ತಕ್ಷಣವೇ ನೀವು ರಾಜೀನಾಮೆ ನೀಡಿ ಇಂದಿನಿಂದಲೇ ಮಲ ಹೊರಲು ಹೋಗಿ’ ಎಂದು ಆ ಅಧಿಕಾರಿಯ ಬೆವರು ಇಳಿಸಿದ್ದರು. ಅಂತ ಛಾತಿ ಈಗ ಯಾರಲ್ಲಿ ಇದೆ. ನೀವು ಅಂತಹ ಬಸವನೂ ಅಲ್ಲ. ಲಿಂಗನೂ ಅಲ್ಲ. ಅಪ್ಪನೂ ಅಲ್ಲ ಎಂದು ರಮೇಶ್‌ ಕುಮಾರ್ ಹೇಳಿದಾಗ ಸಭೆಯಲ್ಲಿ ಮೌನ.

ಹೌದು ಅಂತಹ ಬಸವನಿಗಾತಿನ್ನುವುದು ಕಲಿಸುವ ಕಾಲೇಜು ತೆರೆಯಿರಿ!
2014 ಜನವರಿ 29ರಂದು ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಆಗ ರಮೇಶ್ ಕುಮಾರ್ ಅವರು ‘ಯಡಿಯೂರಪ್ಪ ಅವರಿಗೆ ತಿನ್ನುವುದು ಗೊತ್ತಿಲ್ಲದ ಕಾರಣ ಎಲ್ಲವನ್ನೂ ಅಂಗಿ ಮೇಲೆ ಚೆಲ್ಲಿಕೊಂಡರು. ಹೀಗಾಗಿ ಅದರ ಕಲೆ ಉಳಿದುಬಿಟ್ಟಿದೆ. ಎಲ್ಲ ಪಕ್ಷಗಳಲ್ಲಿಯೂ ತಿನ್ನುವವರು ಇದ್ದಾರೆ. ಅವರೆಲ್ಲಾ ಬುದ್ಧಿವಂತಿಕೆಯಿಂದ ನಾಜೂಕಾಗಿ ತಿಂದರು. ಅದೂ ತಟ್ಟೆಯಲ್ಲಿ ಒಂದು ಚೂರೂ ಬಿಡದ ಹಾಗೆ ತಿಂದಿದ್ದಾರೆ. ತಿನ್ನುವುದೂ ಒಂದು ಕಲೆ. ಅದಕ್ಕೆ ತರಬೇತಿ ಅಗತ್ಯ ಇದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಅವರು ಒಂದು ಕಾಲೇಜು ಆರಂಭಿಸಲಿ. ಯಾರಿಗೂ ಗೊತ್ತಾಗದಂತೆ ಹೇಗೆ ತಿನ್ನಬೇಕು. ಮೈಮೇಲೆ ಚೆಲ್ಲಿಕೊಳ್ಳದೆ, ಕಲೆಯಾಗದಂತೆ ತಿನ್ನುವುದು ಹೇಗೆ ಎನ್ನುವುದನ್ನು ಅಲ್ಲಿ ಕಲಿಸಲಿ. ಬೇಕಾದರೆ ಇದಕ್ಕೊಬ್ಬ ಮಂತ್ರಿಯನ್ನೂ ಮಾಡಲಿ’ ಎಂದು ಸಲಹೆ ನೀಡಿದಾಗಲೂ ವಿಧಾನಸಭೆ ಹಾರಿಹೋಗುವಷ್ಟು ಹಾಸ್ಯದ ಹೊನಲು ಹಾರಿತು.ಗಿ, ಲಿಂಗಕ್ಕಾಗಿ, ಅಪ್ಪನಿಗಾಗಿ ವಿಧಾನಸಭೆ ಕಾಯುತ್ತಿದೆ. ಕರ್ನಾಟಕದ ಜನರೂ ಕೂಡ.

ಮಾನಸಿಕವಾಗಿ ಯುವಕ!
ಹದಿನಾಲ್ಕನೇ ವಿಧಾನಸಭೆ ಸಂದರ್ಭದಲ್ಲಿಯೇ ವಿಧಾನ ಪರಿಷತ್‌ನಲ್ಲಿ ನಡೆದ ಪ್ರಸಂಗ ಇದು. 2015ರ ಫೆ.5ರಂದು ಉಪಸಭಾಪತಿ ಪುಟ್ಟಣ್ಣ ಸೂಟು ಹಾಕಿಕೊಂಡು ಬಂದಿದ್ದರು. ಇದನ್ನು ಗಮನಿಸಿದ ಬಿಜೆಪಿಯ ಕೆ.ಎಸ್. ಈಶ್ವರಪ್ಪ ‘ಪುಟ್ಟಣ್ಣ ಇವತ್ತು ಆರತಕ್ಷತೆಗೆ ಬಂದ ಹಾಗೆ ಬಂದಿದ್ದಾರೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಈ ಈಶ್ವರಪ್ಪನಿಗೆ ಯಾವಾಗಲೂ ಆರತಕ್ಷತೆಯದ್ದೇ ಗುಂಗು’ ಎಂದರು.

ಈಶ್ವರಪ್ಪ: ನಾನಿನ್ನೂ ಯುವಕ ಸ್ವಾಮಿ. ಮುಖ್ಯಮಂತ್ರಿಗಳೇ ನೀವೂ ಯುವಕರಲ್ಲವೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ: ಮಾನಸಿಕವಾಗಿ ಇನ್ನೂ ಯುವಕ. ದೈಹಿಕವಾಗಿ ಕಷ್ಟ ಎಂದಾಗ ಸದನದಲ್ಲಿ ನಗೆಯ ಅಬ್ಬರ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry