ಹೊಸ ಶೈಕ್ಷಣಿಕ ನೀತಿಯಿಂದ ಗುಣಾತ್ಮಕ ಶಿಕ್ಷಣ

7
ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ: ಉತ್ತರ ವಿ.ವಿ ಕುಲಪತಿ ಕೆಂಪರಾಜ್‌ ಅಭಿಪ್ರಾಯ

ಹೊಸ ಶೈಕ್ಷಣಿಕ ನೀತಿಯಿಂದ ಗುಣಾತ್ಮಕ ಶಿಕ್ಷಣ

Published:
Updated:

ಕೋಲಾರ: ‘ಹೊಸ ಶೈಕ್ಷಣಿಕ ನೀತಿ ಜಾರಿಯಾದರೆ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಟಿ.ಡಿ.ಕೆಂಪರಾಜ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಥಮ  ದರ್ಜೆ ಕಾಲೇಜು  ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ‘ಬದಲಾಗುತ್ತಿರುವ ವ್ಯವಸ್ಥೆಗೆ ನಾವು ಹೊಂದಿಕೊಳ್ಳಬೇಕು. ಜತೆಗೆ ಪೂರಕ ಯೋಜನೆಗಳನ್ನು ರೂಪಿಸಬೇಕು’ ಎಂದು ಹೇಳಿದರು.

‘ಶೈಕ್ಷಣಿಕ, ಅರ್ಥಿಕ, ರಾಜಕೀಯ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಗಳಾಗುತ್ತಿವೆ. ಹೀಗಾಗಿ ಆಧುನಿಕ ತಾಂತ್ರಿಕತೆಗೆ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. 2025ರ ವೇಳೆಗೆ ದೇಶದಲ್ಲಿ ಶೇ 50ಕ್ಕೂ ಹೆಚ್ಚು ಯುವ ಮಾನವ ಸಂಪನ್ಮೂಲ ಇರುತ್ತದೆ. ಭಾರತವು ಪ್ರಬುದ್ಧ ದೇಶವಾಗುವಲ್ಲಿ ಯುವಕ ಯುವತಿಯರ ಪಾತ್ರ ನಿರ್ಣಾಯಕ. ಯುವ ಶಕ್ತಿಯನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಬೇಕು’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ. ಶೇ 75ರಷ್ಟು ಮಂದಿಗೆ ಉನ್ನತ ಶಿಕ್ಷಣದ ಅಗತ್ಯವಿದೆ. ಹೊಸ ಶಿಕ್ಷಣ ನೀತಿಯು ಗುಣಾತ್ಮಕತೆಗೆ ಪೂರಕವಾಗಿರಬೇಕು. ಸರ್ಕಾರಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಕೀಳರಿಮೆ ಇರಬಾರದು. ಸರ್ಕಾರಿ ಕಾಲೇಜುಗಳಲ್ಲಿ ಸಂಪನ್ಮೂಲಗಳ ಕೊರತೆ ನಡುವೆಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡ್ಡಿಗೆ ಶಿಕ್ಷಣ ಎಂಬ ಪರಿಸ್ಥಿತಿ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳು ಯಾವುದರಲ್ಲೂ ಕಡಿಮೆಯಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿ.ವಿ ಕಾರ್ಯಾರಂಭ: ‘ಬೆಂಗಳೂರು ಉತ್ತರ ವಿ.ವಿ ಕಾರ್ಯಾರಂಭ ಮಾಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಎಚ.ಕ್ರಾಸ್ ಸಮೀಪ 120 ಎಕರೆ ಜಮೀನಿನಲ್ಲಿ ವಿ.ವಿಗೆ ನೂತನ ಕಟ್ಟಡ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ನೂತನ ಕಟ್ಟಡ ನಿರ್ಮಾಣ ಆಗುವವರೆಗೆ ತಾತ್ಕಾಲಿಕವಾಗಿ ವಿ.ವಿಯ ಸ್ನಾತಕೋತ್ತರ ಕೇಂದ್ರದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಸ್ನಾತಕೋತ್ತರ ಮತ್ತು ಉದ್ಯೋಗ ಅವಲಂಬಿತ ಶಿಕ್ಷಣದ ಅಗತ್ಯವಿದೆ. ಸರ್ಕಾರಿ ಕಾಲೇಜುಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ. ಭವಿಷ್ಯದ ಸವಾಲುಗಳನ್ನು ಎದುರಿಸುವ ದಿಸೆಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಬದ್ಧತೆ ರೂಢಿಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಸಲಹೆ ನೀಡಿದರು.

ಭವಿಷ್ಯದಲ್ಲಿ ಸಂಕಷ್ಟ: ‘ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ದಾರಿ ತಪ್ಪಿದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಪಿಯುಸಿ ನಂತರ 5 ವರ್ಷಗಳ ಅವಧಿಯಲ್ಲಿ ಸಮಯ ವ್ಯರ್ಥ ಮಾಡಿದರೆ ಜೀವನವೇ ವ್ಯರ್ಥವಾಗುತ್ತದೆ. ವಿದ್ಯಾರ್ಥಿ ಜೀವನ ಮಹತ್ವದ್ದು’ ಎಂದು ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಟಿ.ಎಂ.ಮಂಜುನಾಥ್ ಎಂದು ಹೇಳಿದರು.

ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಕಾರ್ಯದರ್ಶಿ ಎಚ್.ಜಿ.ನಾರಾಯಣ್, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ, ಪ್ರಾಧ್ಯಾಪಕರಾದ ಆರ್.ವಿ.ಶಶಿಧರ್, ಎಂ.ಶ್ರೀನಿವಾಸಮೂರ್ತಿ, ಕೋಮಲಾ, ಎಸ್.ರಾಮಕೃಷ್ಣಯ್ಯ, ಎಂ.ಊಮಾ ಪಾಲ್ಗೊಂಡಿದ್ದರು.

**

ಜಿಲ್ಲೆಯು ಚಿನ್ನದ ಬೀಡು. ಪ್ರಕೃತಿಯ ಅವಕೃಪೆಗೆ ತುತ್ತಾಗಿದ್ದರೂ ಜನ ಪಾತಾಳದಿಂದ ನೀರು ಯಾರಿಗೂ ಕಡಿಮೆ ಇಲ್ಲದಂತೆ ಕೃಷಿ ಮಾಡಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ

–ಟಿ.ಡಿ.ಕೆಂಪರಾಜ್‌, ಬೆಂಗಳೂರು ಉತ್ತರ ವಿವಿ ಕುಲಪತಿ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry