ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ಸೂರು

7
ಅಭ್ಯರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ– ಜೆಡಿಎಸ್‌ ಅಭ್ಯರ್ಥಿ ಶ್ರೀನಿವಾಸ್‌ ಭರವಸೆ

ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ಸೂರು

Published:
Updated:
ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ಸೂರು

ಮಂಡ್ಯ: ‘ಕೊಳೆಗೇರಿ ನಿವಾಸಿಗಳ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದೆಯೂ ಅದೇ ಕೆಲಸ ಮುಂದುವರಿಸುತ್ತೇನೆ. ಅವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ಜೆಡಿಎಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಶುಕ್ರವಾರ ಆಯೋಜಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

‘ಯುವಜನರಿಗೆ ಉದ್ಯೋಗ ಕಲ್ಪಿಸುವುದು ಅವಶ್ಯವಾಗಿದೆ. ಮೊದಲು ಜಿಲ್ಲೆ ಕೃಷಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರ ಇಕ್ಕಟ್ಟಿಗೆ ಸಿಲುಕಿದ್ದು ಯುವಜನರಿಗೆ ಉದ್ಯೋಗ ದೊರಕಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದೆ ಕೆಲಸ ಮಾಡುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್‌ ತೆರೆಯಲಾಯಿತು. ಇದರಿಂದ ನೂರಾರು ಮಹಿಳೆಯರು ಉದ್ಯೋಗ ಪಡೆದರು’ ಎಂದರು.

‘ಮೈಷುಗರ್ ಕಾರ್ಖಾನೆ ಪುನಶ್ಚೇತನಗೊಳಿಸುವುದೇ ನನ್ನ ಪ್ರಮುಖ ಉದ್ದೇಶ. ಕಾಂಗ್ರೆಸ್‌ ಸರ್ಕಾರ ಕಾರ್ಖಾನೆಯನ್ನು ಕೆಳಮಟ್ಟಕ್ಕೆ ತಳ್ಳಿದೆ. ಮುಂದೆ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು. ರೈತರು ಹಾಗೂ ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡುತ್ತೇನೆ. ನಗರವನ್ನು ಮಾದರಿ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದು, ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನದಟ್ಟಣೆ ನಿಯಂತ್ರಿಸಲು ಬೈಪಾಸ್ ರಸ್ತೆ ನಿರ್ಮಿಸಲಾಗುವುದು’ ಎಂದರು.

ಕರ್ನಾಟಕ ಜನಶಕ್ತಿಯ ಡಾ.ವಾಸು, ಒಕ್ಕೂಟದ ಎನ್.ನಾಗೇಶ್, ಕಮಲಾ, ಸಿದ್ದರಾಜು, ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಮಹಿಳಾ ಮುನ್ನಡೆಯ ಪೂರ್ಣಿಮಾ, ಗಾಯಿತ್ರಿ, ಕೃಷ್ಣಪ್ಪ ಇದ್ದರು.

ಅಭ್ಯರ್ಥಿಗಳ ಗೈರು: ಅಸಮಾಧಾನ

ಸಂವಾದಕ್ಕೆ ಜೆಡಿಎಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್, ಕೆಪಿಜೆಪಿ ಅಭ್ಯರ್ಥಿ ಶಿವಕುಮಾರ್, ಪಕ್ಷೇತರ ಅಭ್ಯರ್ಥಿ ಸಿ.ಎಂ.ಕೃಷ್ಣ ಹೊರತುಪಡಿಸಿ ಬೇರೆ ಪ್ರಮುಖ ಪಕ್ಷಗಳ ಯಾವ ಅಭ್ಯರ್ಥಿಯೂ ಹಾಜರಾಗಿರಲಿಲ್ಲ. ಒಕ್ಕೂಟದಿಂದ ಎಲ್ಲ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಆಹ್ವಾನ ನೀಡಲಾಗಿತ್ತು.

ಆದರೆ ಯಾರೂ ಬಾರದ ಕಾರಣ ಜನರ ಅಸಮಾಧಾನಕ್ಕೆ ಕಾರಣವಾಯಿತು. ವೋಟು ಕೇಳಲು ಬರುತ್ತಾರೆ. ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲು ಯಾರೂ ಸಿದ್ಧರಿಲ್ಲ. ಇಂಥವರಿಗೆ ಕ್ಷೇತ್ರದ ಮೇಲೆ ಕಾಳಜಿ ಎಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry