ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಾಳೆ ತಟ್ಟುವ ದೇವರು

Last Updated 5 ಮೇ 2018, 19:30 IST
ಅಕ್ಷರ ಗಾತ್ರ

ನೀವು ಆ ಬಾಗಿಲಿನಿಂದ ಇಳಿಯುವಾಗ
ನಾ ಅದೇ ಬಾಗಿಲಿನಿಂದ ಹತ್ತುತ್ತಿದ್ದೆ.
ನಿಮ್ಮ ಹಾಗೆ ನಾನೂ ಅಂದುಕೊಂಡೆ,
ಎರಡು ಚಮಚ ಉಭಯಕುಶಲೋಪರಿ
ಚಿಟಿಕೆ ವಿಶ್ವಾಸದ ನಗು ಸಾಕೆಂದು.
ಆದರೆ…

ಟಾಟಾ ಮಾಡುವ ಬಸ್ಸಿನೊಳಗಿನ ಕೂಸಿಗೇನು ಗೊತ್ತು?
ಕಿಟಕಿಯಾಚೆಯ ಕೈಗಿಲಕಿ ಸೀಟಿ ಊದುವ ತನಕವೆಂದು.

ಮರಗಳು ರಸ್ತೆಯನ್ನೋ ರಸ್ತೆಯು ಮರಗಳನ್ನೋ
ಯಾವುದನ್ನು ಯಾವುದು ನುಂಗುತ್ತಿದೆ?;
ಕೂಸಿಗಿದು ನಿಲುಕದಿರಬಹುದು.
ಅದರೆ, ಕೊಸರಿಕೊಂಡ ಕೈಗಳ ನೆನಪು?
ಉಮ್ಮಳಿಸುವ ದುಃಖಕ್ಕೆ ಹತ್ತಾರು ಕೈಗಳ ಸಾಂತ್ವನ,
ಕೂಸಿನ ಚಿತ್ತವೋ ಅದೇ ಕಿಟಕಿಯತ್ತ.
ಪಕ್ಕದ ಕಿಟಕಿಗಾತಿರುವ ನಿಮಗೆ
ಯಾರೋ ‘ಸ್ಟ್ಯಾಚೂ’ ಹೇಳಿಹೋದಂತಿದೆ.
ಅರ್ಥವಾಗುತ್ತಿಲ್ಲವಲ್ಲ?
-ಮರವು ರಸ್ತೆಯನ್ನೋ, ರಸ್ತೆಯು ಮರವನ್ನೋ...
ನಿಮ್ಮ ಬೆರಳುಗಳು ಸರಳಿಗೆ ಬಿಗಿಯುತ್ತಿವೆ,
ಮುಚ್ಚಿದ ಕಿಟಕಿಯಿಂದಲೂ ಕಸ ಹಾರುತ್ತಿದೆ
ಕರೆಯದೆ ಕರವಸ್ತ್ರ ಇಣುಕುತ್ತಿದೆ;
ದೂರದ ಹೊಲದಲ್ಲಿ ಒಡೆದ ಒಡ್ಡನ್ನು
ಯಾರೋ ಕಟ್ಟುತ್ತಿರುವ ದೃಶ್ಯ
ಸರಕ್ಕನೆ ಸರಿದುಹೋಗಿದೆ.

ಮತ್ತೂ ಕೂಸಿನ ಕಣ್ಣನ್ನೇ ಹಿಂಬಾಲಿಸುತ್ತಿದ್ದೀರಿ…

ದಾರಿಯ ಅಂಬಾ, ಹೊಳೆಯ ನೀರು
ಹೆಚ್ಚಿದ ಸವತೆ, ಬಿಚ್ಚಿದ ದಾಳಿಂಬೆ
ಬಣ್ಣದ ಗಿರಗಿಟ್ಲೆ, ಕಪ್ಪು ಕನ್ನಡಕ
ಉದ್ದ ಪೆನ್ನು, ಹಾರುವ ಹದ್ದು
ಬೂದು ಮೋಡ, ತಪ್ಪಿಸಿಕೊಂಡ ತೋಳ
ಕೊರೆದಿಟ್ಟ ಹಸಿರಹೊಲ, ಅಬ್ಬಲಿಗೆಯ ದಂಡೆ
ಗಡಗಡೆಯಿಲ್ಲದ ಬಾವಿ, ಒಂಟಿ ಗುಡಿಸಲಿನ ದಂಟಿನ ಪಡಕು
ಹಾರಿ ಚೀರುವ ಪೀಪಿ, ಚಪ್ಪಾಳೆ ತಟ್ಟುವ ದೇವರು...
ಸೀಟಿ ಊದುವ ತನಕ ಹಾದಿ ಸೀಳುವ ಬಸ್ಸು.
ಆಗಾಗ ಮಗುವಿನ ಕಣ್ಣ ಗೊಂಬೆಗೆ ಕಣ್ಣ ಜೋಡಿಸುತ್ತೀರಿ
ಬದಲಾಗದ ಅವೇ ಸಾಲುಗಳು ಮತ್ತದೇ ರಾಗ.
ಅದರ ಅಳ್ಳೆತ್ತಿ ಸವರಿ ಪರಿಮಳವ ಹೀರಬೇಕೆನ್ನುತ್ತೀರಿ
ತಬ್ಬಿ ಕಾಡುತ್ತದೆ ಎಂದೋ ಕಳೆದ ನಿಮ್ಮದೇ ಗಿಲಕಿ,
ಸಣ್ಣಗೆ ಬೆವರಿದ ಕೈಗಳನ್ನು ಜೇಬಿನೊಳಗಿಳಿಬಿಡದೆ
ಎದೆಗೆ ಕಟ್ಟಿಕೊಂಡುಬಿಡುತ್ತೀರಿ.

ಸೀಟಿ ಇರುವುದೇ ಊದಲು; ಬಸ್ಸೂ ನಿಲ್ಲುತ್ತದೆ

-ಸದ್ದೂ ಮಾತು ಮುನಿಸೂ.
ಭುಜ ಬಳಸಿ ನಿದ್ದೆಹೋದ ಕೂಸಿನ‌ ಕೈ
ಗಾಳಿಯಲ್ಲಿ ಕಿಟಕಿ ಹುಡುಕುತ್ತಿದ್ದರೆ
ಅದರೆದೆಯೊಳಗೆ ಗಿಲಕಿಯದೇ ಕನಸು.

ಎದ್ದ ದೂಳು ರಸ್ತೆಗುಂಟ ಮಗುವ ಹಿಂಬಾಲಿಸುತ್ತೀರಿ.

ರಿಂವ್ ರಿಂವ್ ಗಾಳಿ ಟಿಂವ್ವ ಟಿಂವ್ವ ಹಕ್ಕಿ
ಬೆಚ್ಚಿದ ಮಗು ಚಿಟ್ಟನೇ ಚೀರುತ್ತದೆ;
ಬಿದಿರೊಳಗೆ ತೂರಿದ ಆಳೆತ್ತರ ಕಾಲು
ಮರದಗಲದ ಕೈ, ಹೋಳಿಟ್ಟ ತೆಂಗಿನ ಬಟ್ಟಲಗಣ್ಣು
ಕಿವಿಯಿಂದ ಕಿವಿಗೆ ಸೀಳಿದ ಬಾಯಿ, ಜೋತುಬಿದ್ದ ತೊಂಡೆಮೂಗು
ನಿಮ್ಮನ್ನು ನೀವು ಎರಡೂ ಕೈಗಳಿಂದ ಮುಟ್ಟಿಕೊಳ್ಳುತ್ತಿದ್ದೀರಿ
ಮಗುವದು ಕೇಕೆ ಹಾಕುತ್ತಿದೆ.
ಅಲ್ಲೆಲ್ಲೋ ಹೊಡೆದುಕೊಳ್ಳುತ್ತಿವೆ ಗುಡಿಯೊಳಗಿನ ಗಂಟೆ ಜಾಗಟೆ ಶಂಖಗಳು
ಸ್ಪರ್ಶಕ್ಕೂ ನಿಲುಕದೆ ಶಬ್ದಕ್ಕೂ…

ಕಾಲಬುಡದ ನೆರಳನ್ನು ಮತ್ತೆ ಮತ್ತೆ ನೋಡುತ್ತಿದ್ದೀರಿ;
ಪುಟ್ಟ ಗಿಲಕಿಯೊಂದು ಕಾಲಿಗಪ್ಪಿಕೊಂಡಿದ್ದರೆ,
ಕೂಸಿನ ಕಣ್ಣಲ್ಲಿ ಚಂದಿರ ಉಂಗುರ ತೊಟ್ಟು ನಿಂತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT